ಕಥೆ ಕೇಳಿದರೆ ಪ್ರೀತಿ ಪ್ರೇಮದ ಮೇಲಾಣೆ

ಚಿತ್ರ : ಪ್ರೀತಿ ಪ್ರೇಮ
ನಿರ್ದೇಶನ : ಕಾಶಿ
ತಾರಾಗಣ : ಕೃಷ್ಣ ಚೈತನ್ಯ, ನಿಧಿ ಕುಶಾಲಪ್ಪ, ಗಿರಿ, ಟನ್ನೀಸ್ ಕೃಷ್ಣ ಮುಂತಾದವರು.
ರೇಟಿಂಗ್ : **

‘ಪ್ರೀತಿ ಪ್ರೇಮ’ವು ಫೋನು, ಮಾತು, ಮೆಸೇಜ್ ಇವುಗಳಲ್ಲೇ ಮುಳುಗಿರುವ ಈಗಿನ ಹುಡುಗ ಮತ್ತು ಹುಡುಗಿಯರು ಪ್ರೀತಿಸುವ ನಾಟಕವಾಡಿ ಸ್ವಾರ್ಥಕ್ಕೆ ಬಳಸಿಕೊಂಡು ಮೋಸ ಮಾಡುತ್ತಾರೆ ಎನ್ನುವುದರ ಸುತ್ತ ಗಿರಕಿ ಹೊಡೆಯುವ ಚಿತ್ರವಾಗಿದೆ.
ನಾಯಕನ ಹೆಸರು ಪ್ರೇಮ್ ನಾಯಕಿ ಪ್ರೀತಿ ಹಾಗಾಗಿ ಚಿತ್ರದ ಹೆಸರು ‘ಪ್ರೀತಿ ಪ್ರೇಮ’. ನಾಯಕನಿಗೆ ಪ್ರೀತಿಸಿದ ಹುಡುಗಿ ಸ್ವಾರ್ಥಕ್ಕೆ ಬಳಸಿಕೊಂಡು ಕೈಕೊಟ್ಟಿರುತ್ತಾಳೆ. ನಾಯಕಿಗೆ ಗೆಳೆತನದಿಂದಷ್ಟೇ ಎರಡು ವರ್ಷ ಜೊತೆಯಾಗಿ ಓಡಾಡಿದ ಹುಡುಗನ ಮೇಲೆ ಪ್ರೀತಿ ಇರುವುದಿಲ್ಲ. ಆದರೆ ಇದನ್ನು ಹೇಳಿದಾಗ ಅವನು ಅವಳು ತನ್ನನ್ನು ಪ್ರೀತಿಸದಿದ್ದರೆ ಆಸಿಡ್ ಹಾಕುವ ಮಟ್ಟಕ್ಕೂ ಹೋಗಿ ಕೇಡು ಮಾಡುವಂಥವನಾಗುತ್ತಾನೆ.
ಪ್ರೀತಿ ಮತ್ತು ಗೆಳೆತನದಲ್ಲಿ ಸೋತಿರುವ ಹುಡುಗ ಮತ್ತು ಹುಡುಗಿ ಆಕಸ್ಮಿಕವಾಗಿ ಎದುರಾಗುತ್ತಾರೆ ಪರಿಚಿತರಾಗುತ್ತಾರೆ. ಆದರೆ ಅವರು ಗೆಳೆತನ, ಪ್ರೀತಿ ಇದಾವುದೂ ಆಗಿರದ ಯಾವ ನೀರೀಕ್ಷೆಯೂ ಇಲ್ಲದ ಹೊಸ ಬಾಂಧವ್ಯ ಹುಟ್ಟು ಹಾಕಿಕೊಳ್ಳುತ್ತಾರೆ. ಅದರಲ್ಲಿಯೂ ಮಾತು, ಸಂದೇಶ, ಭಾವನಾತ್ಮಕವಾಗಿ ಒಬ್ಬರಿಗೊಬ್ಬರು ಅಲಂಬಿತರಾಗುತ್ತಾರೆ. ಹುಡುಗ-ಹುಡುಗಿಯ ಈ ಬಾಂಧವ್ಯವನ್ನೇ ವಿಸ್ತರಿಸಿದ್ದರೂ ಕಥೆಗೆ ಒಳ್ಳೆ ತಿರುವುಗಳು ಸಿಗುವ ಸಾಧ್ಯತೆಗಳಿತ್ತು. ಆದರೆ ನಿರ್ದೇಶಕ ಕಾಶಿ ಪ್ರೀತಿಯ ಅಪ್ಪುಗೆಗೆ ಮರಳುತ್ತಾರೆ ಆದ್ದರಿಂದ ತೆಲುಗಿನ ‘ಈ ರೋಜುಲು’ ಚಿತ್ರದ ರೀಮೇಕ್ ಆಗಿಯೂ ‘ಪ್ರೀತಿ ಪ್ರೇಮ’ ಕಥೆಯೇ ಇಲ್ಲದೆ ಅಲ್ಲಲ್ಲಿಯೇ ಸುತ್ತುತ್ತದೆ. ಪ್ರೀತಿ, ಗೆಳೆತನ ಅಥವಾ ಇದನ್ನು ಮೀರಿದ ಬಾಂಧವ್ಯ ಯಾವುದನ್ನು ಹೇಳುತ್ತಿದ್ದೇನೆ ಎನ್ನುವ ಸ್ಪಷ್ಟತೆ ಕಾಶಿ ಅವರಲ್ಲಿಯೇ ಇಲ್ಲ ಎನಿಸುತ್ತದೆ. ತಂದಿರುವ ದ್ವಂದ್ವಾರ್ಥದ ಸಂಭಾಷಣೆಯೂ ಅವರಿಗೆ ನೆರವಾಗಿಲ್ಲ. ಹಾಸ್ಯ ಸನ್ನಿವೇಶಗಳು ಅತಿರೇಕಗಳಾಗಿವೆ.
ನಾಯಕಾರಾಗಿರುವ ಶ್ರೀಕೃಷ್ಣ ಚೈತನ್ಯ ತಮಗಾಗಿಯೇ ನಿರ್ಮಿಸಿಕೊಂಡಿರುವ ಚಿತ್ರವೆನಿಸುತ್ತದೆ. ಇದಕ್ಕೆ ಪೂರಕವಾಗಿದೆ ಒಂದು ಫೈಟ್ ಮತ್ತು ಹಾಡುಗಳು. ನಾಯಕಿಯಾಗಿ ತೆರೆಮೇಲೆ ಚಂದ ಕಾಣಿಸುವ ನಿಧಿ ಕುಶಾಲಪ್ಪ ನಟನೆಯಲ್ಲಿಯೂ ಸೆಳೆಯುತ್ತಾರೆ. ಸ್ಟಾರ್‌ಗಳ ಮುಖವಾಡ ಧರಿಸಿ ಮಾಡುವ ಡಾನ್ಸ್‌ನ ಬಿಟ್ಟರೆ ವಿಭಿನ್ನವೆನಿಸುವಂಥ ಅಥವಾ ವಿಶಿಷ್ಟವೆನಿಸುವಂಥ ಯಾವ ಅಂಶಗಳು ‘ಪ್ರೀತಿ ಪ್ರೇಮ’ದಲ್ಲಿ ಕಾಣಿಸುವುದಿಲ್ಲ.

Leave a Comment