ಕತ್ತಲೆ ಜಗತ್ತಿನಲ್ಲಿ ಬಣ್ಣ ಬಣ್ಣಗಳ ಹಾಡಿನ ರಾಗ

ಅಂಧನೊಬ್ಬನ ಮನಮಿಡಿಯುವ ಕತೆಯನ್ನೊಳಗೊಂಡ ರಾಗ ಚಿತ್ರದ ಹಾಡುಗಳು ವಿಶೇಷ ಎನಿಸಿವೆ ಚಿತ್ರದ ಒಂದೊಂದು ಸನ್ನಿವೇಶವನ್ನು ಬಿಂಬಿಸುವಂತೆ ಹಾಡುಗಳು ಸಾಗಲಿದ್ದು ಅವುಗಳ ಬಿಡುಗಡೆ ಕೂಡ ವಿಭಿನ್ನವಾಗಿ ನಡೆಯಿತು.

ಕಳೆದ ಸೋಮವಾರ ಬೆಂಗಳೂರಿನ ಫ್ರೀಡಂಪಾರ್ಕ್ ಬಳಿ ಕನಿಷ್ಠವೇತನಕ್ಕಾಗಿ ಅಂಗನವಾಡಿ ನೌಕರರು ಅಹೋರಾತ್ರಿ ಧರಣಿ ನಡೆಸಿದ್ದರಿಂದ ಮೆಜೆಸ್ಟಿಕ್ ಸುತ್ತಮುತ್ತಲ ರಸ್ತೆಗಳಲ್ಲಿ ಉಂಟಾಗಿದ್ದ ಸಂಚಾರ ದಟ್ಟಣೆ ದಾಟಿಕೊಂಡು ಹಾಡುಗಳ ಬಿಡುಗಡೆ ಕಾರ್ಯಕ್ರಮಕ್ಕೆ ಜ್ಞಾನಜ್ಯೋತಿ ಸಭಾಂಗಣಕ್ಕೆ ಬಂದ ಅತಿಥಿಗಳು, ಚಿತ್ರ ಪ್ರೇಮಿಗಳಿಗೆ ರಾಗ ಹಾಡುಗಳ ರಸದೌತಣ ದೊರೆಯಿತು.

ಅರ್ಜುನ್‌ಜನ್ಯರ ಸಂಗೀತ ನಿರ್ದೇಶನದ ೭೦ನೇ ಚಿತ್ರವಾಗಿದ್ದರಿಂದ ಲೈವ್ ಆಗಿ ಹಾಡುಗಳನ್ನು ಪ್ರಸ್ತುತ ಪಡಿಸಲಾಯಿತು.  ಹಾಡುಗಳು ಹುಟ್ಟಿಕೊಂಡ ಬಗೆಯನ್ನು ನಿರ್ದೇಶಕ ಪಿ.ಸಿ.ಶೇಖರ್, ಸಾಹಿತಿ ಕವಿರಾಜ್ ವಿವರಿಸಿದರು.ಅನುರಾಧಭಟ್, ಸಂತೋಷ್‌ವೆಂಕಿ, ವ್ಯಾಸರಾಜ್, ಇಂದುನಾಗರಾಜ್ ಗೀತೆಗಳಿಗೆ ಧ್ವನಿಯಾದರು.

ಅದರಲ್ಲೂ ಯಾರೆ ನೀ ಗೀತೆಯನ್ನು  ಒತ್ತಾಯದ ಮೇರೆಗೆ ಎರಡು ಬಾರಿ ಹಾಡಿದ್ದು ರಂಜನೆ ನೀಡಿತು. ಮೊದಲಬಾರಿ ನಿರ್ಮಾಣ ಮಾಡಿ ನಾಯಕರಾಗಿರುವ ಮಿತ್ರ ಅವರು ಕುರುಡನ ಪಾತ್ರದಲ್ಲಿ ನೀಡಿರುವ ಅಭಿನಯ ಎಲ್ಲರಿಗೂ ಇಷ್ಟವಾದರು. ಕಾಣದ ಜಗತ್ತು ಎಷ್ಟು ಬಣ್ಣಗಳಿಂದ ಕೂಡಿದೆ ಎಂದು ಕಲ್ಪಿಸಿಕೊಳ್ಳುವುದು ಕಷ್ಟ ಎಂದು ಭಾವುಕವಾಗಿ ಹೇಳಿದ ಶ್ರೀನಗರ ಕಿಟ್ಟಿ ಅರ್ಜುನ್ ಸಂಗೀತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಅಂಧರ ವಿಶ್ವಕಪ್ ಕ್ರಿಕೆಟ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಮಣಿಸಿ ಭಾರತಕ್ಕೆ ಗೆಲುವು ತಂದುಕೊಟ್ಟ ನಾಯಕ ಕನ್ನಡಿಗ ಶೇಖರ್ ಅವರಿಂದ ಹಾಡೊಂದನ್ನು ಬಿಡುಗಡೆಗೊಳಿಸಿದ್ದು ಅರ್ಥಪೂರ್ಣವಾಗಿತ್ತು. ಚಿತ್ರದಲ್ಲಿನ ಪ್ರೇಮಕತೆಯೂ ಅವರಿಗೆ ಹೊಂದಿಕೆಯಾಗುವಂತಿದೆ ಎಂದಾಗ ಸಭಾಂಗಣದಲ್ಲಿ ಚಪ್ಪಾಳೆಯ ಸುರಿಮಳೆ ಆಯಿತು. ಜೊತೆಗೆ ಶೇಖರ್ ಅವರಿಗೆ ಪ್ರಧಾನಮಂತ್ರಿಗಳು ಇನ್ನೆರಡು ದಿನಗಳಲ್ಲಿ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆಂದು ಮಿತ್ರ ತಿಳಿಸಿದಾಗ ಎಲ್ಲರೂ ಎದ್ದುನಿಂತು ಅಭಿನಂದನೆ ಸಲ್ಲಿಸಿದರು.

ಮಿತ್ರ  ಅವರಂತಹ ಕಲಾವಿದರು ಕನ್ನಡ ಚಿತ್ರರಂಗಕ್ಕೆ  ಒಂದು ಕೊಡುಗೆ ಎಂದರು ನಿರ್ದೇಶಕ ಪಿ.ಸಿ.ಶೇಖರ್ ಮಿತ್ರ ಅವರ ಬಗ್ಗೆ ಅಪಾರ ಮೆಚ್ಚುಗೆಯ ವ್ಯಕ್ತಪಡಿಸಿದರು.
ಮಚ್ಚು, ಲಾಂಗ್ ಹಿಡಿದ ಮಾತ್ರಕ್ಕೆ ಸ್ಟಾರ್ ಆಗುವುದಿಲ್ಲ. ಒಬ್ಬ ಬರಹಗಾರನಿಂದ ನಾಯಕ ಹುಟ್ಟುತ್ತಾನೆ. ನನ್ನಂಥವರು ಹೀರೋ ಆಗಬಹುದು ಎನ್ನುವುದು ಸಾಬೀತಾಗಿದ್ದು, ನಿರ್ದೇಶಕರ ಕತೆಯಿಂದ.

ಶಿವಣ್ಣ ಅವರು ಟೀಸರ್ ಅನಾವರಣ, ಸುದೀಪ್ ಪ್ರಾರಂಭದ ದೃಶ್ಯಕ್ಕೆ ಹಿನ್ನಲೆಧ್ವನಿ, ದರ್ಶನ್ ಟ್ರೈಲರ್ ಲಾಂಚ್,  ಬಣ್ಣದ ಲೋಕಕ್ಕೆ ಪರಿಚಯಿಸಿದ ಸಿಹಿಕಹಿ ದಂಪತಿಗಳು ಸಂಸ್ಥೆಯ ಲೋಗೊವನ್ನು ಬಿಡುಗಡೆ ಮಾಡಿ ಹಾರೈಸಿದ್ದಾರೆ. ಇದೆಲ್ಲಾ ನೋಡಿದಾಗ ಚಿತ್ರವು ಯಶಸ್ವಿಯಾಗಲಿದೆ ಎನ್ನುವ ವಿಶ್ವಾಸವಿದೆ ಎಂದು ಖುಷಿಯಿಂದ ಹೇಳಿದರು ಮಿತ್ರ.

ಒಂದು ಹಾಡನ್ನು ಸಭಿಕರು ಅನಾವರಣಗೊಳಿಸಿದಾಗ, ಜೈಜಗದೀಶ್ ದಂಪತಿ, ಹರ್ಷಿಕಾ ಪೂಣಚ್ಚಾ, ರೂಪಿಕಾ, ರಮೇಶ್‌ಭಟ್ ಮುಂತಾದವರು ಅರ್ಜುನ್‌ಜನ್ಯಾ  ೭೦ರ ಕೇಕನ್ನು ಕತ್ತರಿಸುವದರೊಂದಿಗೆ ಅರ್ಥಪೂರ್ಣ ಸಮಾರಂಭಕ್ಕೆ ಅಂತ್ಯ ಹಾಡಲಾಯಿತು. ನಾಯಕಿ ಭಾಮಾ ಗೈರು ಹಾಜರಿಗೆ ಕಾರಣ ತಿಳಿಯಲಿಲ್ಲ.

Leave a Comment