ಕಣ್ಣೀರು ಹಾಕಬೇಕೆಂದು ಪ್ರಯತ್ನಿಸಿದ್ದೇನೆ ಆದರೆ ಬರುವುದಿಲ್ಲ : ಎಸ್ ಎಂ ಕೃಷ್ಣಾ

ಬೆಂಗಳೂರು,ಏ 16 -ಕಣ್ಣೀರು ಹಾಕಬೇಕು ಎಂದು ನಾನೂ ಕೂಡ ಪ್ರಯತ್ನಿಸುತ್ತಿದ್ದೇನೆ ಆದರೆ ತಮಗೆ ಕಣ್ಣೀರು ಬರುವುದೇ ಇಲ್ಲ  ಕೆಲವರಿಗೆ ಮಾತ್ರ ಸಲೀಸಾಗಿ ಕಣ್ಣಿರು  ಬರುತ್ತದೆ ಎಂದು ಮಾಜಿ  ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರು ಜೆಡಿಎಸ್ ಮುಖಂಡ ಹಾಗೂ ಮುಖ್ಯಮಂತ್ರಿ ಎಚ್ ಡಿ ಕುಮಾರ ಸ್ವಾಮಿ ಅವರ ಬಗ್ಗೆ ವ್ಯಂಗ್ಯವಾಡಿದ್ದಾರೆ

ನಗರದ  ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವೂ ಕೂಡ  ಕಣ್ಣೀರು ಹಾಕಬೇಕು ಎಂದು ಪ್ರಯತ್ನಿಸಿದರೂ ಕಣ್ಣೀರು ಬರುವುದೇ ಇಲ್ಲ. ಹಾಗಾಗಿ ಕಣ್ಣೀರು ಹಾಕುವವರು ಒಮ್ಮೆ ಸಿಕ್ಕಾಗ ಅವರನ್ನೇ ಕೇಳಿ ಕಣ್ಣೀರಿನ ರಹಸ್ಯ  ಏನು ಎಂದು ತಿಳಿದುಕೊಳ್ಳಬೇಕು ಎಂದುಕೊಂಡಿದ್ದೇನೆ ಎಂದು ಚಟಾಕಿ ಹಾರಿಸಿದರು.

ಪಾಪ ಬಹುಶಃ ಅವರ ಹೃದಯ ಮಿಡಿಯುತ್ತದೆ. ಒಬ್ಬ ತಂದೆಯ ಹೃದಯ ಮಕ್ಕಳಿಗಾಗಿ ಅಷ್ಟೂ ಮಿಡಿಯದೆ ಇದ್ದರೆ ಹೇಗೆ, ಹಾಗಾಗಿ ಅವರಿ ಸಲೀಸಾಗಿ ಕಣ್ಣೀರು ಬರುತ್ತದೆ. ರಾಜ್ಯದ ಮುಖ್ಯಮಂತ್ರಿಗಳು ಹತಾಶರಾಗಿದ್ದಾರೆ. ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಒಂದೆರಡು ಚುನಾವಣೆ ಎದುರಿಸಿದ್ದಾರೆ. ಅವರ ಸಂಸಾರದವರೇ ಸ್ಪರ್ಧಿಸಿದ್ದಾರಲ್ಲಾ ಅದಕ್ಕಾಗಿ ಅವರು ಹತಾಶರಾಗಿ ಏನೇನೋ ಹೇಳಿಕೆ ಕೊಡುತ್ತಿದ್ದಾರೆ ಎಂದು ಮಾಜಿ ಪ್ರಧಾನಿ ದೇವೇಗೌಡ ಮತ್ತು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ  ವಿರುದ್ಧ ಅವರು ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿ ಕಣ್ಣೀರು ಹಾಕಿ ಅನುಕಂಪ ಪಡೆಯಲು ಈ ರೀತಿ ಮಾಡುತ್ತಿದ್ದಾರೆ‌. ಅವರಿಗೆ ಸೋಲಿನ ಭಯ ಕಾಡುತ್ತಿದೆ. ಆದಾಯ ತೆರಿಗೆ ಇಲಾಖೆ ಸುಖಾಸುಮ್ಮನೆ ದಾಳಿ ನಡೆಸುವುದಿಲ್ಲ.  ಅವರು ಸಾಕಷ್ಟು ಮಾಹಿತಿ ಸಂಗ್ರಹಿಸಿಯೇ ದಾಳಿ ನಡೆಸಿರುತ್ತಾರೆ. ಅನುಮಾನ ಇರುವ  ಗುತ್ತಿಗೆದಾರರ ಮೇಲೆ ಐಟಿ ದಾಳಿಯಾಗುತ್ತದೆ. ಇದು  ಸ್ವಾಭಾವಿಕ. ಇಲ್ಲಿ ನಡೆಯುವಂತಹದ್ದು ರಾಜಕೀಯ ಎಲ್ಲಿಂದ ಬಂತು. ಮಂಡ್ಯ, ಮೈಸೂರು,  ಹಾಸನದಲ್ಲಿ ಗುತ್ತಿಗೆದಾರರ ಮೇಲೆ ದಾಳಿ ನಡೆಸಲಾಗಿದೆ. ದಾಳಿ ವೇಳೆ ಕೋಟ್ಯಾಂತರ ರೂ  ನಗದು, ದಾಖಲೆಗಳು ಸಿಕ್ಕಿದೆ ಎಂದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ತಮ್ಮ ಬಾಹುಬಲದಿಂದ ಮೋದಿ ಪ್ರಧಾನಿ ಆಗುವುದನ್ನು ತಡೆಯುತ್ತಾರೆ. ಎಂತಹ ಹಾಸ್ಯಾಸ್ಪದ ಹೇಳಿಕೆ ನೀಡಿದ್ದಾರೆ. ಇಡೀ ದೇಶದ ಜನರು ನಿರ್ಧರಿಸಿ ಆಗಿದೆ.  ತಾವು ಇಂದೇ ಭವಿಷ್ಯ  ನುಡಿಯುತ್ತಿದ್ದು, ನರೇಂದ್ರ ಮೋದಿ ಪ್ರಧಾನಿಯಾಗುವುದು ನಿಶ್ಚಿತ, ಅದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಎಂದರು.

ರಫೆಲ್ ವಿಚಾರದಲ್ಲಿ ಏನ್ ಆಯ್ತು? ಕಾಂಗ್ರೆಸ್  ಅಧ್ಯಕ್ಷರ ಅಪ್ರಬುದ್ಧ ನಡಾವಳಿಕೆಯಿಂದ ಸುಪ್ರೀಂ ಕೋರ್ಟ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ.  135 ವರ್ಷಗಳ ಇತಿಹಾಸ ಇರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಆಲೋಚನೆ ಮಾಡಿ ಪ್ರತಿಕ್ರಿಯೆ  ಕೊಡುವುದು ಪ್ರಬುದ್ದತೆ ಲಕ್ಷಣ. ಆದರೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರದ್ದು ಅಪರಿಮಿತ ಅಪ್ರಬುದ್ಧತೆ. ಸುಪ್ರೀಂಕೋರ್ಟ್ ಮುಂದೆ ಅಪರಾಧಿಯಾಗಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕಾಲದಲ್ಲಿ ಟಿವಿಗಳು ಪ್ರಭಾವಿಯಾಗಿವೆ. ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂದು ಹೇಳಲು ಸಾದ್ಯವಿಲ್ಲ ಎಂದು ರಾಹುಲ್ ಗಾಂಧಿ  ವಿರುದ್ಧ ಎಸ್ಎಂ ಕೃಷ್ಣಾ ವಾಗ್ದಾಳಿ ನಡೆಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಕಾನೂನು ರಕ್ಷಣೆ ವಿಚಾರ ಬಂದಾಗ ಪ್ರತಿಯೊಬ್ಬರಿಗೂ ರಕ್ಷಣೆ ನೀಡುವ ಜವಾಬ್ದಾರಿ ಮುಖ್ಯಮಂತ್ರಿ ಅವರ ಮೂಲಭೂತ ಕರ್ತವ್ಯ. ಮಂಡ್ಯದಲ್ಲಿ ಸುಮಲತಾ, ಹಾಸನದಲ್ಲಿ ಮಂಜುಗೆ ರಕ್ಷಣೆ ಕೊಡಬೇಕು. ರಕ್ಷಣೆ ನೀಡದಿದ್ದಲ್ಲಿ ರಾಜ್ಯಾಂಗದಲ್ಲಿ ಅವರು ಸ್ವೀಕರಿಸಿದ ಪ್ರಮಾಣ ವಚನಕ್ಕೆ ಅರ್ಥವೇ ಇರುವುದಿಲ್ಲ ಎಂದು ತಿಳಿಸಿದರು.

ಕಾಂಗ್ರೆಸ್ ನಲ್ಲಿ ಸಾಕಷ್ಟು ಪ್ರಬುದ್ದ ಅನುಭವಿ ನಾಯಕರು ಇದ್ದಾರೆ. ಆದರೆ ಅವರು ಕಾಂಗ್ರೆಸ್ ಅಧ್ಯಕ್ಷರಿಗೆ ಸರಿಯಾಗಿ ಸಲಹೆ ನೀಡುತ್ತಿಲ್ಲ. ನಾನಂತೂ ಕಾಂಗ್ರೆಸ್ ಬಿಟ್ಟ ಕ್ಷಣದಿಂದಲೇ ಆ ಪಕ್ಷದ ಬಗ್ಗೆ ಚಿಂತನೆ ನಡೆಸುವುದನ್ನೇ ಬಿಟ್ಟಿದ್ದೇನೆ ಎಂದರು.

ಲೋಕಸಭಾ ಚುನಾವಣಾ ದಿನದ ಆಸುಪಾಸಿನಲ್ಲಿ ಸಾಲು  ಸಾಲು ರಜೆಗಳಿದ್ದು, ಪ್ರವಾಸಕ್ಕೆ ಹೋಗಲು ಪ್ಲಾನ್ ಮಾಡಿರುವ ಮತದಾರರು ವಾಪಸ್ ಬಂದು ಮತಚಲಾವಣೆ ಮಾಡಿ. ಮತದಾನ  ಮಾಡುವುದು ನಮ್ಮೆಲ್ಲರ ಪ್ರಮುಖ ಹಕ್ಕು. ಹಾಗಾಗಿ ನಗರ ಪ್ರದೇಶಗಳ ಜನ ಮತಗಟ್ಟೆಗೆ ತೆರಳಿ  ಮತ ಹಾಕಿ ಎಂದು ಎಸ್.ಎಂ.ಕೃಷ್ಣಾ ಮನವಿ ಮಾಡಿಕೊಂಡರು.

ನರೇಂದ್ರ  ಮೋದಿಯವರು ಸ್ಥಿರವಾದ ಸರ್ಕಾರ ಕೊಟ್ಟಿದ್ದಾರೆ. ಈ ಹಿಂದಿನ ಸರ್ಕಾರಗಳಲ್ಲಿ ಸ್ಥಿರತೆ ಇದ್ದರೂ ರಿಮೋಟ್ ಕಂಟ್ರೋಲ್  ಇರುತಿತ್ತು. ಆದರೆ ಮೋದಿ ಸರ್ಕಾರದಲ್ಲಿ ರಿಮೋಟ್ ಕಂಟ್ರೋಲ್ ಇರಲಿಲ್ಲ. ಈ ಚುನಾವಣೆ  ದೇಶದ ದೃಷ್ಟಿಯಿಂದಷ್ಟೇ ಅಲ್ಲ. ಇದು ವಿಶ್ವದ ಗಮನ ಸೆಳೆದಿರುವ ಚುನಾವಣೆಯಾಗಿದೆ. ಜನಭರಿತ  ಪ್ರಜಾಪ್ರಭುತ್ವ ವ್ಯವಸ್ಥೆ ನಮ್ಮದು ಎಂದು ಹೇಳಿದರು.

ಹವ್ಯಾಸಿ  ಪ್ರಿಯ ಪ್ರಧಾನ ಮಂತ್ರಿಗಳು ಇರುತ್ತಾರೆ. ನರೇಂದ್ರ ಮೋದಿ ಅವರಿಗೆ ಹವ್ಯಾಸಗಳು ಇಲ್ಲ. ಅಲ್ಲದೇ  ಅವರಿಗೆ ಮಕ್ಕಳು, ಮೊಮ್ಮಕ್ಕಳ ಬಗ್ಗೆ ಚಿಂತೆ ಇಲ್ಲ. ಅವರಿಗೆ ಸಹೋದರ ಇದ್ದರೂ ನಗಣ್ಯ.  ಶಾಸ್ತ್ರಿಗಳ ನಂತರ ನಾನು ಹಲವಾರು ಪ್ರಧಾನಿಗಳನ್ನು ನೋಡಿದ್ದೇನೆ. 18 ಗಂಟೆಗಳ ಕಾಲ ಕೆಲಸ  ಮಾಡುವ  ಮೋಸ್ಟ್ ಹಾರ್ಡ್ ವರ್ಕಿಂಗ್ ಪಿಎಂ ನರೇಂದ್ರ ಮೋದಿ ಎಂದು ಕೊಂಡಾಡಿದರು.

 

Leave a Comment