ಕಣ್ಣೀರು ಸುರಿಸಿದ ಶಾಲಾ ಮಕ್ಕಳು

ಧಾರವಾಡ, ಆ. ೧೫- 72ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಎಲ್ಲರೂ ಮುಳುಗಿದ್ದರೆ, ಧಾರವಾಡದ ಪ್ರೆಜೆನ್‌ಟೇಷನ್ ಸ್ಕೂಲ್ ಮಕ್ಕಳು ಆರ್.ಎನ್ ಶೆಟ್ಟಿ ಕ್ರೀಡಾಂಗಣದಲ್ಲಿ ಕಣ್ಣೀರು ಸುರಿಸಿದ್ದಾರೆ.

ಆರ್‌.ಎನ್ ಶೆಟ್ಟಿ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯೋತ್ಸವ ಪಥ ಸಂಚಲನದಲ್ಲಿ ಬ್ಯಾಂಡ್ ಬಾರಿಸಲು ವಾರಗಟ್ಟಲೆ ತರಬೇತಿ ಪಡೆದು ಬಂದಿದ್ದ ಮಕ್ಕಳಿಗೆ ಅವಕಾಶವನ್ನು ಅಧಿಕಾರಿಗಳು ಏಕಾಏಕಿ ನಿರಾಕರಿಸಿದ್ದಾರೆ.

ಮಕ್ಕಳು ತಾವು ಪಥಸಂಚಲನದಲ್ಲಿ ಪಾಲ್ಗೊಳ್ಳುತ್ತೇವೆ ಎಂದು ಸತತ ಮನವಿ ಮಾಡಿಕೊಂಡರೂ ಬ್ಯಾಂಡ್ ಬಾರಿಸಲು ಅಧಿಕಾರಿಗಳು ಅವಕಾಶ ನೀಡದಿದ್ದರಿಂದ ಮಕ್ಕಳು ಕ್ರೀಡಾಂಗಣದಲ್ಲಿ ಬೇಸರಗೊಂಡು ಕಣ್ಣೀರು ಹಾಕುತ್ತಲೆ ಕಾರ್ಯಕ್ರಮದಿಂದ ಹೊರ ನಡೆದಿದ್ದಾರೆ.

ಕೆಲದಿನಗಳ ಹಿಂದೆ ಪೂರ್ವತಯಾರಿ ನಡೆಸಿದ್ದ ಮಕ್ಕಳ ಪ್ರತಿಭೆಯನ್ನು ಕಂಡು ಜಿಲ್ಲಾಧಿಕಾರಿಗಳು ನಿನ್ನೆ ಸಂಜೆ ಪಥಸಂಚಲನದಲ್ಲಿ ಪಾಲ್ಗೊಳ್ಳುವಂತೆ ಅನುಮತಿ ನೀಡಿದ್ದರು. ಅದರಂತೆ ಶಾಲಾ ಮಕ್ಕಳು ಎಲ್ಲ ತಯಾರಿ ಮಾಡಿಕೊಂಡು ಬಂದಿದ್ದರೂ ಅಧಿಕಾರಿಗಳು ಮಾತ್ರ ಅವಕಾಶ ಕೊಡಲಿಲ್ಲ.

ಬೆಳಿಗ್ಗೆಯೇ ತಿಂಡಿ ತಿನ್ನದೆ ಸಮವಸ್ತ್ರವನ್ನು ಧರಿಸಿ ಬ್ಯಾಂಡ್ ಸಮೇತ ಶಾಲಾ ಮಕ್ಕಳು ಕಾದಿದ್ದರು. ಪಥಸಂಚಲನ ಆರಂಭವಾದರೂ ಈ ಮಕ್ಕಳನ್ನು ಮೈದಾನಕ್ಕೆ ಕರೆಯಲಿಲ್ಲ. ನೊಂದ ಮಕ್ಕಳು ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಲಿಲ್ಲ.

Leave a Comment