ಕಡು ಬಡವರಿಗೆ ಸೂರು ಕಲ್ಪಿಸದಿದ್ದರೆ ಉಪವಾಸ ಸತ್ಯಾಗ್ರಹ: ಎಚ್ಚರಿಕೆ

ಕುಣಿಗಲ್, ಮಾ. ೧೪- ಪಟ್ಟಣದ ಪುರಸಭಾ ವ್ಯಾಪ್ತಿಯಲ್ಲಿ  ಸುಮಾರು 25 ವರ್ಷದಿಂದ ಸಾವಿರಾರು ವಸತಿ ರಹಿತರಿಗೆ ನಿವೇಶನ ಹಾಗೂ ಸೂರು ಕಲ್ಪಿಸುವಲ್ಲಿ ಆಶ್ರಯ ಸಮಿತಿ ಅಧ್ಯಕ್ಷರು ಆಗಿರುವ ಶಾಸಕರು ವಿಫಲರಾಗಿದ್ದು,  ಕಡು ಬಡವರಿಗೆ ನಿವೇಶನ ನೀಡುವಂತೆ ಒತ್ತಾಯಿಸಿ ಕುವೆಂಪು ವೇದಿಕೆ ಹಾಗೂ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ವತಿಯಿಂದ ಮಾ. 26 ರಿಂದ ಅಮರಣಾಂತರ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ವೇದಿಕೆಯ ಅಧ್ಯಕ್ಷ ಹೆಚ್.ಜಿ.ರಮೇಶ್ ತಿಳಿಸಿದರು. ‌

ಪಟ್ಟಣದ ಪ್ರವಾಸಿ ಮಂದಿರದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, ಪಟ್ಟಣದಲ್ಲಿ ನಿವೇಶನಕ್ಕಾಗಿ ಸುಮಾರು 7 ಸಾವಿರ ಅರ್ಜಿಗಳು ಬಂದಿವೆ. ಅದರಲ್ಲಿ ಸುಮಾರು 3 ಸಾವಿರ ಮಂದಿ ನಿಜವಾದ ಫಲಾನುಭವಿಗಳಿದ್ದು, ಹಲವಾರು ಮಂದಿ ಕೂಲಿ ಮಾಡಿಕೊಂಡು ಬಾಡಿಗೆ ಮನೆಗಳಲ್ಲಿ ಮತ್ತು ಕೊಳಚೆ ಪ್ರದೇಶದಲ್ಲಿ ಬದುಕುತ್ತಿರುವುದು ಶೋಚನೀಯ ಸಂಗತಿ ಎಂದರು.

ಎಸ್.ಪಿ.ಮುದ್ದಹನುಮೇಗೌಡ ಅವರು ಶಾಸಕರಾಗಿದ್ದಾಗ ಸುಮಾರು 1056 ಮಂದಿಗೆ ಮಂಜೂರಾತಿ ಪತ್ರ ನೀಡಿದ್ದರು. ನಂತರ ಶಾಸಕರಾದ ಬಿ.ಬಿ. ರಾಮಸ್ವಾಮಿಗೌಡ ಆ ಪತ್ರಗಳನ್ನು ತಡೆ ಹಿಡಿದು ಪುನರ್ ಪರಿಶೀಲನೆ ಮಾಡುವಂತೆ ಸಮಿತಿ ನಡಾವಳಿ ಬರೆಸಿದರು. ನಂತರ ಬಂದ ಶಾಸಕರು ವಸತಿ ರಹಿತರಿಗೆ ನಿವೇಶನದ ಬಗ್ಗೆ ಚಕಾರವೆತ್ತಿಲ್ಲ  ಎಂದು ಆರೋಪಿಸಿದರು.

ಪುರಸಭೆ ಮತ್ತು ತಹಶೀಲ್ದಾರ್ ಕಛೇರಿ ಮುಂದೆ 2 ಬಾರಿ ಪ್ರತಿಭಟನೆ ನಡೆಸಿದರ ಫಲವಾಗಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಾಲಿನಿ ರಜನೀಶ್ ರವರು ಹೊಸ ಅರ್ಜಿಗಳನ್ನು ಫಲಾನುಭವಿಗಳಿಂದ ಪಡೆದು ಹೊಸಬರಿಗೂ  ಅವಕಾಶ ನೀಡುವಂತೆ ಸೂಚಿಸಿದ್ದರಿಂದ ಕಾಟಾಚಾರಕ್ಕೆ ಪುರಸಭೆ ಹೊಸದಾಗಿ ಅರ್ಜಿ ಪಡೆದು ಸಮ್ಮನಾಗಿದೆ. ಈಗಾಗಲೇ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್ ಬಿದನಗೆರೆ ಸರ್ವೆ ನಂ. 32 ರಲ್ಲಿ 15 ಎಕರೆ ಜಮೀನು ಮಂಜೂರು ಮಾಡಿ ಪುರಸಭೆಗೆ ವರ್ಗಾಯಿಸಿದ್ದು, ನಕ್ಷೆ ಕೂಡ ಮಂಜೂರಾತಿಯಾಗಿದೆ. ಆದರೆ ಆಶ್ರಯ ಸಮಿತಿ ರಚನೆಯಾಗಿದ್ದರೂ ಅಧ್ಯಕ್ಷರು ಸಭೆ ಕರೆಯದೆ ಬಡವರಿಗೆ ನಿವೇಶನದ ಭಾಗ್ಯವಿಲ್ಲದಂತಾಗಿದೆ ಎಂದು ಆರೋಪಿಸಿದರು.
ನಿವೇಶನ ನೀಡುವುದರಲ್ಲಿ ವಿಫಲರಾಗಿರುವ ಆಶ್ರಯ ಸಮಿತಿಯ ವಿಷಯವನ್ನು ಬಂಡವಾಳ ಮಾಡಿಕೊಂಡು ಹಲವಾರು  ಸಂಘ ಸಂಸ್ಥೆಗಳು ಸಾರ್ವಜನಿಕರಿಂದ ಅರ್ಜಿ ಪಡೆದು ಕಡು ಬಡವರ ಆಸೆಗಳನ್ನು ದುರ್ಬಳಕೆ ಮಾಡಿಕೊಂಡು ಬಡವರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವೈ.ಕೆ. ರಾಮಯ್ಯನವರು ಸ.ನಂ. 56 ರಲ್ಲಿ ನೀಡಿದ ನಿವೇಶನಗಳಲ್ಲಿ ಅರ್ಧದಷ್ಟು ಉಳ್ಳವರ ಪಾಲಾಗಿದ್ದು, ಕೆಲವರು ಮಾರಿಕೊಂಡಿದ್ದು ಇನ್ನು ಕೆಲವರು ಮನೆ ನಿರ್ಮಾಣ ಮಾಡಿ ಬಡವರಿಗೆ ಬಾಡಿಗೆ ನೀಡಿದ್ದಾರೆ. ಇಂತಹ ಕೆಟ್ಟ ಪರಿಸ್ಥಿತಿ  ತೊಲಗಬೇಕು. ನಿಜವಾದ ಅರ್ಹ ಪಲಾನುಭವಿಗೆ ಶೀಘ್ರವಾಗಿ ಸೂರು ಕಲ್ಪಿಸಿಕೊಡಬೇಕು. ಅದಕ್ಕಾಗಿ ಪ್ರತಿಭಟನೆ ನಡೆಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಬಿ.ಹೆಚ್. ರಾಜು , ಕುವೆಂಪು ಮಹಿಳಾ ಘಟಕದ ಅಧ್ಯಕ್ಷೆ ಆಶಾ, ಗೌರಮ್ಮ, ಮನು, ವಿಜಿ, ಮಂಜುಳ, ಗಣೇಶ್, ಜಗದೀಶ್, ಶಿವು, ಶಿಲ್ಪ, ರತ್ನಮ್ಮ, ಗೌರಮ್ಮ ಮಂಜುಳ ಉಪಸ್ಥಿತರಿದ್ದರು.

Leave a Comment