ಕಡಲು ಪ್ರಕ್ಷುಬ್ದ:ಜನರ ಆತಂಕ

ಮಂಗಳೂರು, ಅ.೧೧- ಕಡಲು ಪ್ರಕ್ಷುಬ್ದಗೊಂಡು ರಕ್ಕಸ ಗಾತ್ರದ ಅಲೆಗಳು ಜನವಸತಿ ಪ್ರದೇಶಕ್ಕೆ ನುಗುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಮುದ್ರ ತೀರಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಉಡುಪಿ ಜಿಲ್ಲೆಯ ಕಾಪು, ಉಚ್ಚಿಲದಲ್ಲಿ ಸಮುದ್ರದ ಅಬ್ಬರ ಹೆಚ್ಚಾಗಿದ್ದು ನಿನ್ನೆ ಮಧ್ಯಾಹ್ನದಿಂದಲೇ ಸಮುದ್ರದ ನೀರಿನ ಮಟ್ಟ ಏಕಾಏಕಿ ಏರಿಕೆ ಕಂಡಿದ್ದು ಜನರು ಆತಂಕಗೊಂಡಿದ್ದಾರೆ. ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ಸೋಮೇಶ್ವರ, ಉಳ್ಳಾಲ, ಉಚ್ಚಿಲ, ಪಣಂಬೂರು ಪ್ರದೇಶದಲ್ಲಿ ನಿನ್ನೆ ಮಧ್ಯಾಹ್ನದ ಬಳಿಕ ಸಮುದ್ರದ ನೀರು ಉಕ್ಕೇರಿ ರಸ್ತೆಯನ್ನು ದಾಟಿ ಮುಂದುವರಿದಿದ್ದು ಕೆಲವೆಡೆ ಮನೆಯ ಆವರಣಕ್ಕೂ ಕಾಲಿಟ್ಟಿದೆ. ಆಂಧ್ರಪ್ರದೇಶ, ಒಡಿಶಾದಲ್ಲಿ ಅಪ್ಪಳಿಸುತ್ತಿರುವ ‘ತಿತ್ಲಿ’ ಚಂಡಮಾರುತದ ಇಫೆಕ್ಟ್ ಎಂದು ಹೇಳಲಾಗುತ್ತಿದ್ದು ಜನರು ಕಡಲಿನ ಅಬ್ಬರ ಕಂಡು ಆತಂಕಕ್ಕೊಳಗಾಗಿದ್ದಾರೆ.
ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮ ಆಂಧ್ರ ಮತ್ತು ಒಡಿಶಾದಲ್ಲಿ ಕಾಣಿಸಿಕೊಂಡ ತಿತ್ಲಿ ಚಂಡಮಾರುತದ ಪ್ರಭಾವದಿಂದ ಹೀಗಾಗಿರಬಹುದು ಎಂದು ಹೇಳಲಾಗಿದೆ. ತಿತ್ಲಿ ಚಂಡಮಾರುತದ ಪರಿಣಾಮ ಪಶ್ಚಿಮ ಕರಾವಳಿಯ ಮೇಲೂ ಆಗುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿರಲಿಲ್ಲ. ಪಣಂಬೂರು, ಉಳ್ಳಾಲ, ಸೋಮೇಶ್ವರ-ಉಚ್ಚಿಲದ ಹಲವು ಕಡೆ ಸಮುದ್ರದ ರೌದ್ರವತಾರ ತಾಳಿದ್ದು ಕಂಡುಬಂತು. ಈ ಹಿಂದೆ ಎಂದೂ ಕೂಡ ಇಂತಹ ವಾತಾವರಣ ಕಡಲ ತೀರದಲ್ಲಿ ಕಂಡುಬಂದಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ. ಅಕ್ಟೋಬರ್ ೧೩ರವರೆಗೆ ಮೀನುಗಾರರು ಸಮುದ್ರಕ್ಕೆ ತೆರಳದಂತೆ ಸೂಚನೆ ನೀಡಲಾಗಿದೆ. ಬಂಗಾಳ ಕೊಲ್ಲಿಯಲ್ಲಿ ತೀವ್ರ ವಾಯುಭಾರ ಕುಸಿತ ಉಂಟಾಗಿದ್ದು, ಆಂಧ್ರ ಪ್ರದೇಶ ಹಾಗೂ ಒಡಿಸ್ಸಾ ರಾಜ್ಯಗಳಿಗೆ ಭಾರೀ ಚಂಡಮಾರುತ ಅಪ್ಪಳಿಸುವ ಭೀತಿ ಎದುರಾಗಿದೆ.

Leave a Comment