ಕಡಕೋಳ ಬರಹದಲ್ಲಿ ಹರಿತವಾದ ಚಿಂತನೆ: ಪ್ರೊ.ಮಹೇಶ್ವರಯ್ಯ

=

ಕಲಬುರಗಿ,ಡಿ.1-ಮಲ್ಲಿಕಾರ್ಜುನ ಕಡಕೋಳ ಅವರ “ಯಡ್ರಾಮಿ ಸೀಮೆ ಕಥನಗಳು” (ಜಿಂದಾ ಮಿಸಾಲ್-ಕಹಾನಿ) ಓದಿಸಿಕೊಂಡು ಹೋಗುವ, ಸಂವೇದನಾಶೀಲವಾದ ಮತ್ತು ಹರಿತವಾದ ಚಿಂತನೆಗಳಿಂದ ಕೂಡಿದ ಕೃತಿಯಾಗಿದೆ ಎಂದು ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಚ್.ಎಂ.ಮಹೇಶ್ವರಯ್ಯ ಹೇಳಿದರು.

ಕಲಬುರಗಿ ಗೆಳೆಯರು ಮತ್ತು ಅಭಿವ್ಯಕ್ತಿ ಪ್ರಕಾಶನ ದಾವಣಗೆರೆ ಸಂಯುಕ್ತಾಶ್ರಯದಲ್ಲಿ ನಗರದ ಕನ್ನಡ ಭವನದ ಸುವರ್ಣ ಸಭಾಭವನದಲ್ಲಿಂದು ಹಮ್ಮಿಕೊಂಡಿದ್ದ ಮಲ್ಲಿಕಾರ್ಜುನ ಕಡಕೋಳ ಅವರ ಯಡ್ರಾಮಿ ಸೀಮೆ ಕಥನಗಳು (ಜೀಂದಾ ಮಿಸಾಲ್-ಕಹಾನಿ) ಕೃತಿ ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು.

ಯಡ್ರಾಮಿ ಸೀಮೆ ಕಥನಗಳು ಕೃತಿಯಲ್ಲಿ ವ್ಯಕ್ತಿಚಿತ್ರ, ಹರಟೆ, ಕಿರು ಪ್ರಬಂಧಗಳಿದ್ದು ಎರಡ್ಮೂರು ಪುಟಗಳಲ್ಲಿ ಮುಗಿದು ಹೋಗುವಂತಹ ಬರಹಗಳಿವೆ. ಎಲ್ಲವು ಓದಿಸಿಕೊಂಡು ಹೋಗುವ ಗುಣ ಹೊಂದಿವೆ. ಅವೈದಿಕ ಚಿಂತನಧಾರೆಯ, ಅನುಭಾವ ಲೋಕದ ದೈತ್ಯ ಪ್ರತಿಭೆ ಕಡಕೋಳ ಮಡಿವಾಳಪ್ಪನವರ ಚಿಂತನೆಯಲ್ಲಿರುವ ಅನನ್ಯತೆ ಈ ಕೃತಿಯಲ್ಲಡಗಿದೆ ಎಂದರು.

ಅಂತರಂಗ ಲೋಕ, ಮನುಷ್ಯ ಮನುಷ್ಯನ ನಡುವಿನ ಲೋಕ, ಮನುಷ್ಯ ಮತ್ತು ಪ್ರಕೃತಿ ಕುರಿತ ಲೋಕ ಹಾಗೂ ಮನುಷ್ಯ ತನಗೆ ಅರಿವಿಲ್ಲದೇ ಸೃಷ್ಟಿಸುವ ವಿಸ್ಮಯವಾದ ಲೋಕ-ಹೀಗೆ ಈ ಲೋಕದ ಸಾಹಿತ್ಯದಲ್ಲಿ ಒಟ್ಟು ನಾಲ್ಕು ತರಹದ ಪ್ರಬೇಧಗಳಿದ್ದು, ಅದರಲ್ಲಿ ಮನುಷ್ಯ ತನಗೆ ಅರಿವಿಲ್ಲದೆಯೇ ಸೃಷ್ಟಿಸುವ ವಿಸ್ಮಯ ಲೋಕ ನಮ್ಮನ್ನು ಸೆಳೆಯುತ್ತದೆ, ಕಾಡುತ್ತದೆ ಮತ್ತು ಚಿಂತನೆಗೆ ಹಚ್ಚುತ್ತದೆ. ಕಡಕೋಳ ಬರಹದಲ್ಲಿ ವಿಸ್ಮಯವಾದ ಲೋಕವೇ ಅಡಗಿದೆ ಎಂದರು.

ಲೇಖಕಿ ಸಂಧ್ಯಾ ಹೊನಗುಂಟಿಕರ್ ಅವರು ಪುಸ್ತಕ ಕುರಿತು ಮಾತನಾಡಿ, ಕಡಕೋಳ ಅವರ ಯಡ್ರಾಮಿ ಸೀಮೆ ಕಥನಗಳು ಈ ಭಾಗದ ಜವಾರಿಭಾಷೆಯಿಂದ ಕೂಡಿದ್ದು, ಪ್ರತಿ ಕತೆಯಲ್ಲಿ ಕತೆಯ ಹೊದಿಕೆಯಲ್ಲಿ ಕಾವ್ಯದ ನಡುಗೆ ಇದೆ ಎಂದು ಹೇಳಿದರು. ಲೇಖಕನಿಗೆ ಬದುಕು-ಬರಹ ಎರಡೂ ಮುಖ್ಯ, ಆದರೆ ಬರಕ್ಕಿಂತಲೂ ಬದುಕು ಬಹು ಮುಖ್ಯವಾದದ್ದು ಎಂದು ಅಭಿಪ್ರಾಯಪಟ್ಟರು.

ಸಂಸ್ಕತಿ ಚಿಂತಕ ಪ್ರೊ.ಆರ್.ಕೆ.ಹುಡಗಿ ಅಧ್ಯಕ್ಷತೆ ವಹಿಸಿದ್ದರು. ಶಿವರಂಜನ್ ಸತ್ಯಂಪೇಟೆ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃತಿಯ ಕರ್ತೃ ಮಲ್ಲಿಕಾರ್ಜುನ ಕಡಕೋಳ ವೇದಿಕೆ ಮೇಲಿದ್ದರು.

ಸಾಹಿತಿಗಳು, ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Comment