ಕಂದಾಯ ವಸೂಲಾತಿ: ಗ್ರಾ.ಪಂ. ಸಿಬ್ಬಂದಿಗೆ ಇಓ ಸೂಚನೆ

ಚೇಳೂರು, ನ. ೯- ಎಲ್ಲ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಕಡ್ಡಾಯವಾಗಿ ಬಿಲ್ ಕಲೆಕ್ವರ್ ಜತೆ ಸೇರಿ ಹಳ್ಳಿ ಹಳ್ಳಿಗಳಿಗೆ ಹೋಗಿ ಕಂದಾಯ ವಸೂಲಾತಿಯನ್ನು ಮಾಡಬೇಕು ಎಂದು ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ನರಸಿಂಹಯ್ಯ ಸೂಚನೆ ನೀಡಿದರು.

ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಗ್ರಾಮ ಪಂಚಾಯಿತಿಯಲ್ಲಿ ಏರ್ಪಡಿಸಿದ್ದ ಕಂದಾಯ ವಸೂಲಾತಿ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪ್ರತಿ ಹಳ್ಳಿ ಹಳ್ಳಿಗಳಿಗೆ ಹೋಗಿ ಕಂದಾಯವನ್ನು ವಸೂಲತಿ ಮಾಡಬೇಕು. ನಮ್ಮ ತಾಲ್ಲೂಕಿನಲ್ಲಿ ಸಾಕಷ್ಟು ಕಂದಾಯ ಬಾಕಿ ಇರುವುದರಿಂದ ಎಲ್ಲ ಸಿಬ್ಬಂದಿಗಳು ಸೇರಿ ವಸೂಲಾತಿ ಮಾಡಬೇಕು. ಕುಡಿಯುವ ನೀರಿನ ಬಗ್ಗೆ ಯಾವುದೇ ಹಳ್ಳಿಗಳಲ್ಲಿ ಸಮಸ್ಯೆ ಇದ್ದರೆ ತಕ್ಷಣ ಗ್ರಾಮ ಪಂಚಾಯ್ತಿಗೆ ತಿಳಿಸಬೇಕು. ಜತೆಗೆ ಕಡ್ಡಾಯವಾಗಿ ಕುಡಿಯುವ ನೀರಿನ ಬಗ್ಗೆ ತುರ್ತಾಗಿ ಕೆಲಸಗಳನ್ನು ಮಾಡಬೇಕು ಎಂದು ಪಿಡಿಓಗಳಿಗೆ ತಿಳಿಸಿದರು.

ಗ್ರಾಮಗಳಲ್ಲಿ ಸ್ವಚ್ಚತೆ ಕಾಪಾಡಬೇಕು. ಕುಡಿಯುವ ನೀರಿನ ಟ್ಯಾಂಕರ್‌ಗಳನ್ನು ಸ್ವಚ್ಚಗೊಳಿಸಬೇಕು. ಮೋಟಾರ್‌ಗಳು, ಸಾರ್ವಜನಿಕರ ನಲ್ಲಿಗಳನ್ನು ಸ್ವಚ್ಚತೆಯಿಂದ ಇಟ್ಟುಕೊಳ್ಳಬೇಕು. ಗ್ರಾಮಗಳಲ್ಲಿ ಬೀದಿ ದೀಪಗಳನ್ನು ಯಾವಾಗಲೂ ಉರಿಯುತ್ತಿರುವುದನ್ನು ಸ್ಥಗಿತಗೊಳಿಸಬೇಕು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೂಲಿ ಕೆಲಸ ಮಾಡುವ ಕೂಲಿಗಾರರನ್ನು ಗ್ರಾಮ ಪಂಚಾಯ್ತಿಯಿಂದ ಕೆಲಸ ಕೊಡುವ ವ್ಯವಸ್ಥೆಯನ್ನು ನಾವು ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷ ವಿಜಯ್‌ದೇವ್, ಪಿಡಿಓಗಳಾದ ತಿಪ್ಪೇಸ್ವಾಮಿ, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

Leave a Comment