ಕಂದಾಯ ಜಾಗದಲ್ಲಿ ಮನೆ 40 ಲಕ್ಷ ಮಂದಿ ಹಕ್ಕುಪತ್ರ

ಕೆ.ಆರ್. ಪುರಂ, ಮೇ ೧೭- ರಾಜ್ಯದಾದ್ಯಂತ ಸರ್ಕಾರಿ ಕಂದಾಯ ಭೂಮಿಯಲ್ಲಿ ಮನೆಗಳನ್ನು ನಿರ್ಮಿಸಿಕೊಂಡಿದ್ದ ಸುಮಾರು 40 ಲಕ್ಷ ಬಡವರಿಗೆ ಹಕ್ಕುಪತ್ರಗಳನ್ನು ವಿತರಿಸಲಾಗುವುದೆಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಇಂದಿಲ್ಲಿ ತಿಳಿಸಿದರು.

ಕೆ.ಆರ್. ಪುರಂ ಕ್ಷೇತ್ರದ ತಾಲ್ಲೂಕು ಕಚೇರಿ ಆವರಣದಲ್ಲಿ ಏರ್ಪಡಿಸಿದ್ದ ಹಕ್ಕು ಪತ್ರ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಡವರಿಗೆ ಆಸರೆಯಾಗುವ ನಿಟ್ಟಿನಲ್ಲಿ ಸಿದ್ದರಾಮಯ್ಯನವರ ನೇತೃತ್ವ ಸರ್ಕಾರದಿಂದ ಹಕ್ಕುಪತ್ರ ವಿತರಣೆ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ 1200 ಅಡಿ ವಿಸ್ತೀರ್ಣದಲ್ಲಿ ಮನೆ ನಿರ್ಮಿಸಿಕೊಂಡಿರುವವರಿಗೂ ಹಕ್ಕುಪತ್ರ ವಿತರಿಸುವ ಕಾರ್ಯ ಮಾಡಲಾಗುವುದೆಂದು ತಿಳಿಸಿದರು.

ಬಡವರ ಹಿತ ಕಾಯುವುದು ನಮ್ಮ ಸರ್ಕಾರದ ಮುಖ್ಯ ಗುರಿಯಾಗಿದೆ. ಈ ನಿಟ್ಟಿನಲ್ಲಿ ಬಡವರಿಗೆ ಬದ್ಧತೆ ಒದಗಿಸುವ ನಿಟ್ಟಿನಲ್ಲಿ ಹಕ್ಕುಪತ್ರಗಳನ್ನು ವಿತರಿಸುತ್ತಿದ್ದೇವೆ ಎಂದು ತಿಳಿಸಿದರು.  ಜನರ ಸೇವೆಗಾಗಿ ನಮ್ಮ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ. ಅದರಂತೆ ಮುಂದಿನ ದಿನಗಳಲ್ಲಿ ಮತ್ತಷ್ಟು ಜನಪ್ರಿಯ ಯೋಜನೆಗಳನ್ನು ರೂಪಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬಿ.ಎ. ಬಸವರಾಜು ಅವರು, 40 ವರ್ಷಗಳಿಂದ ಹಕ್ಕುಪತ್ರಗಳನ್ನು ವಿತರಣೆ ಮಾಡಿರಲಿಲ್ಲ. ನಮ್ಮ ಸರ್ಕಾರ ಹಕ್ಕು ಪತ್ರ ವಿತರಣೆ ಮಾಡಿ ಬಡವರಿಗೆ ಉತ್ತಮ ಸೇವೆ ನೀಡಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ತಹಸಿಲ್ದಾರ್ ತೇಜಸ್ ಕುಮಾರ್, ಶಾಸಕ ನಾರಾಯಣ ಸ್ವಾಮಿ, ಪಾಲಿಕೆ ಸದಸ್ಯರಾದ ರಾಧಮ್ಮ ವೆಂಕಟೇಶ್, ಪೂರ್ಣಿಮಾ ಶ್ರೀನಿವಾಸ್, ಎಸ್.ಜಿ. ನಾಗರಾಜ್, ಸುರೇಶ್, ಜಯಪ್ರಕಾಶ್, ಶ್ರೀಕಾಂತ್, ಆಂಟೋನಿ ಸ್ವಾಮಿ, ಮುಖಂಡರಾದ ಕಲ್ಕೆರೆ ಕೃಷ್ಣಮೂರ್ತಿ, ಮತ್ತಿತರರು ಇದ್ದರು.

Leave a Comment