ಓಲಾ ಚಾಲಕನ ಮೇಲೆ ಹಲ್ಲೆ

ಮಂಗಳೂರು, ನ.೯- ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಡಿಗೆಗಾಗಿ ಪ್ರಯಾಣಿಕರನ್ನು ಕರೆದೊಯ್ದಿದ್ದ ಓಲಾ ಕಾರು ಚಾಲಕನ ಮೇಲೆ ಸ್ಥಳೀಯ ಕಾರು ಚಾಲಕರು ಹಲ್ಲೆ ನಡೆಸಿದ ಘಟನೆ ನಿನ್ನೆ ಮಧ್ಯಾಹ್ನ ನಡೆದಿದೆ.
ನಗರದಿಂದ ಪ್ರಯಾಣಿಕರನ್ನು ಕರೆದುಕೊಂಡು ಹೋಗಿದ್ದ ಓಲಾ ಕಾರು ಚಾಲಕ ಬಳಿಕ ತನ್ನ ಕಾರನ್ನು ವಿಮಾನ ನಿಲ್ದಾಣದ ಬಳಿ ನಿಲುಗಡೆಗೊಳಿಸಿದ್ದನೆನ್ನಲಾಗಿದೆ. ಇದಕ್ಕೆ ಸ್ಥಳೀಯ ಕಾರು ಚಾಲಕರು ಆಕ್ಷೇಪ ವ್ಯಕ್ತಪಡಿಸಿದ್ದು, ಕಾರನ್ನು ಕೂಡಲೇ ತೆರವುಗೊಳಿಸುವಂತೆ ಒತ್ತಾಯಿಸಿದರೆನ್ನಲಾಗಿದೆ. ಓಲಾ ಕಾರು ಚಾಲಕ ಇದಕ್ಕೆ ಒಪ್ಪದೇ ಇದ್ದಾಗ ಆತನ ಮೇಲೆ ಸ್ಥಳೀಯ ಕಾರು ಚಾಲಕರು ಹಲ್ಲೆ ನಡೆಸಿರುವುದಾಗಿ ದೂರಲಾಗಿದೆ. ಈ ವೇಳೆ ಸ್ಥಳಕ್ಕೆ ಧಾವಿಸಿದ ಸುಮಾರು ೨೦ಕ್ಕೂ ಅಧಿಕ ಓಲಾ ಕಾರು ಚಾಲಕರು ಮತ್ತು ಸ್ಥಳೀಯ ಕಾರು ಚಾಲಕರ ಮಧ್ಯೆ ಹೊಯ್‌ಕೈ ನಡೆದಿದೆ. ಘಟನೆಯ ವೇಳೆ ಕಾರೊಂದು ಕಲ್ಲೆಸೆತದಿಂದ ಜಖಂಗೊಂಡಿದೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸುತ್ತಿರುವ ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Comment