ಓಲಾ ಕ್ಯಾಬ್‌ಗೆ ಅಜ್ಜಿ ಬಲಿ ಮೊಮ್ಮಗ ಗಾಯ

ಬೆಂಗಳೂರು, ಮೇ ೧೬- ಮೊಮ್ಮಗನ ಜೊತೆ ಆಸ್ಪತ್ರೆಗೆ ಹೋಗಿ ಬೈಕ್‌ನಲ್ಲಿ ವಾಪಸ್ಸಾಗುತ್ತಿದ್ದ ಅಜ್ಜಿ ವೇಗವಾಗಿ ಬಂದ ಓಲಾ ಕ್ಯಾಬ್ ಡಿಕ್ಕಿ ಹೊಡೆದು ಮೃತಪಟ್ಟಿರುವ ದುರ್ಘಟನೆ ಪೀಣ್ಯದ ಪೈಪ್‌ಲೇನ್ ರಸ್ತೆಯಲ್ಲಿ ನಡೆದಿದೆ.

ಹಾಸನ ಮೂಲದ ಗಂಗಮ್ಮ (65) ಮೃತಪಟ್ಟವರು. ಅಪಘಾತದಲ್ಲಿ ಗಾಯಗೊಂಡಿರುವ ಅವರ ಮೊಮ್ಮಗ ವಿನಯ್ (19) ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಹಾಸನದಿಂದ ಪೀಣ್ಯದ ಮಗಳ ಮನೆಗೆ ಬಂದಿದ್ದ ಅಜ್ಜಿ ಗಂಗಮ್ಮರನ್ನು ನಿನ್ನೆ ಮಧ್ಯಾಹ್ನ 4.30ರ ವೇಳೆ ಮೊಮ್ಮಗ ವಿನಯ್ ಬೈಕ್‌ನಲ್ಲಿ ಶುಭೋದಯ ಕ್ಲಿನಿಕ್‌ಗೆ ಕರೆದೊಯ್ದು ಆರೋಗ್ಯ ತಪಾಸಣೆ ಮಾಡಿಸಿಕೊಂಡು ವಾಪಸ್ ಪೈಪ್‌ಲೇನ್ ರಸ್ತೆಯ ಅಂಕಲ್ ಕಿಚನ್ ಬಳಿ ಬರುತ್ತಿದ್ದ.

ಈ ವೇಳೆ ಬಸವೇಶ್ವರ ಬಸ್ ನಿಲ್ದಾಣದ ಕಡೆಯಿಂದ ಮುಖ್ಯರಸ್ತೆಗೆ ಬಂದ ಓಲಾ ಕಾರು ಡಿಕ್ಕಿ ಹೊಡೆದು ಕಾರಿನಡಿ ಸಿಕ್ಕ ಗಂಗಮ್ಮ ಸ್ಥಳದಲ್ಲೇ ಮೃತಪಟ್ಟರೆ, ವಿನಯ್ ಗಾಯಗೊಂಡಿದ್ದಾನೆ.

ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೀಣ್ಯ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿ ಕ್ಯಾಬ್ ಚಾಲಕನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಸೌಮ್ಯಲತಾ ತಿಳಿಸಿದ್ದಾರೆ.

Leave a Comment