ಒಳಚರಂಗಡಿ ಕಾರ್ಮಿಕರಿಗೆ ಸಿಗದ ಸುರಕ್ಷಾ ಸೌಲಭ್ಯ

ಮಂಗಳೂರು, ಅ. ೨೯- ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಒಳಚರಂಡಿಗೆ ಸಂಬಂಧಿಸಿದ ಕೆಲಸ ಕಾರ್ಯಗಳನ್ನು ಮಾಡುವ ಪೌರಕಾರ್ಮಿಕರು ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತಿಲ್ಲ. ಕೆಲಸ ಮಾಡಿಸುವ ಗುತ್ತಿಗೆದಾರರು, ಪಾಲಿಕೆಯ ಅಧಿಕಾರಿಗಳು ಈ ಬಗ್ಗೆ ಇನ್ನೂ ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಆರೋಪವು ನಿನ್ನೆ ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಜರುಗಿದ ಎಸ್ಸಿ-ಎಸ್ಟಿ ಸಭೆಯಲ್ಲಿ ಕೇಳಿ ಬಂತು.
ಅ.೨೫ರಂದು ನಗರದ ಎಸ್.ಎಲ್.ಮಥಾಯಿಸ್ ರಸ್ತೆಯಲ್ಲಿ ಬಿದಿರಿನ ಕೋಲನ್ನು ಹಿಡಿದುಕೊಂಡು ಪೌರಕಾರ್ಮಿಕರು ಒಳಚರಂಡಿಯ ಮ್ಯಾನ್‌ಹೋಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅವರ ಕೈಯಲ್ಲಿ ಗ್ಲೌಸ್, ಕಾಲಿಗೆ ಶೂ, ಮುಖಕ್ಕೆ ಮಾಸ್ಕ್ ಯಾವುದೂ ಇರಲಿಲ್ಲ. ಮ್ಯಾನ್ ಹೋಲ್‌ಗಳ ಮೂಲಕ ಬ್ಲಾಕ್ ಕ್ಲೀಯರ್ ಮಾಡಲು ಆಧುನಿಯಕ ಯಂತ್ರೋಪಕರಣಗಳಿದ್ದರೂ ಯಾಕೆ ಉಪಯೋಗಿಸುತ್ತಿಲ್ಲ ಎಂದು ತಿಲಕ್ ಕುಮಾರ್ ಪ್ರಶ್ನಿಸಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಇದಕ್ಕೆ ಪ್ರತಿಕ್ರಿಯಿಸಿ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಲಾಗುತ್ತದೆ. ಪಾಲಿಕೆ ಆಯುಕ್ತರಿಗೆ ಪತ್ರಬರೆದು ಅವರ ಗಮನಕ್ಕೆ ತರಲಾಗುತ್ತದೆ. ಈ ಹಿಂದೆ ೨೦೧೭ರಲ್ಲಿ ನಗರದ ನೆಲ್ಲಿಕಾಯಿ ರಸ್ತೆಯಲ್ಲಿ ಒಳಚರಂಡಿ ದುರಸ್ತಿ ವೇಳೆ ಕಾರ್ಮಿಕರ ಸುರಕ್ಷತಾ ಕ್ರಮ ವಹಿಸಿಕೊಂಡಿಲ್ಲ ಎಂಬ ಕಾರಣಕ್ಕೆ ಪಾಲಿಕೆ ಆಯುಕ್ತರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು ಎಂದರು. ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಹನುಮಂತರಾಯ, ಪೌರಕಾರ್ಮಿಕರಿಗೆ ಈ ಕುರಿತು ಜಾಗೃತಿ ಮೂಡಿಸುವ ಕೆಲಸ ನಡೆಯಬೇಕಾಗಿದೆ. ಪದೇಪದೆ ಈ ರೀತಿಯ ಘಟನೆಗಳು ಮರುಕಳಿಸಬಾರದು. ಪಾಲಿಕೆಯವರು ಈ ಕುರಿತು ಹೆಚ್ಚಿನ ಗಮನ ಹರಿಸಬೇಕು ಎಂದು ಸಲಹೆ ನೀಡಿದರು. ಸರಕಾರದಿಂದ ರಸ್ತೆ ಕಾಮಗಾರಿಗೆ ಗುತ್ತಿಗೆ ವಹಿಸಿಕೊಂಡ ವ್ಯಕ್ತಿಯೊಬ್ಬರು ತಮ್ಮಿಂದ ಜಾಮೀನು ಪಡೆದು ಜಾಗದ ಮೇಲೆ ೭೨ ಲಕ್ಷ ರೂ. ಸಾಲ ಪಡೆದುಕೊಂಡು ಇದೀಗ ವಾಪಸ್ ನೀಡುತ್ತಿಲ್ಲ. ಈಗ ಬ್ಯಾಂಕ್‌ನವರು ಜಾಗವನ್ನು ೨೫ ಲಕ್ಷ ರೂ.ಗೆ ಹರಾಜು ಹಾಕಿದ್ದು, ಉಳಿದ ಹಣವನ್ನು ಬ್ಯಾಂಕ್‌ಗೆ ಕಟ್ಟಬೇಕಾಗಿದೆ. ಆತ ಇನ್ನೂ ನಾಲ್ಕು ಜನರಿಗೆ ಇದೆ ರೀತಿ ಮೋಸ ಮಾಡಿದ್ದಾನೆ. ಗುತ್ತಿಗೆದಾರನ ವಿರುದ್ಧ ಕ್ರಮಕೈಗೊಂಡು, ನ್ಯಾಯ ಒದಗಿಸಬೇಕು ಎಂದು ಜ್ಯೋತಿ ಮನವಿ ಮಾಡಿದರಲ್ಲದೆ ಗುತ್ತಿಗೆದಾರ ಎಸ್ಸಿ ಎಸ್ಟಿ ನಕಲಿ ಜಾತಿ ಪ್ರಮಾಣ ಪತ್ರ ಪಡೆದು ಕೋಟ್ಯಂತರ ರೂಪಾಯಿ ಗುತ್ತಿಗೆ ವಹಿಸಿಕೊಂಡಿದ್ದಾನೆ. ಈ ಕುರಿತು ನೀಡಿರುವ ದೂರು ಜಿಲ್ಲಾಧಿಕಾರಿಯ ಬಳಿಯಿದೆ ಎಂದರು.
ಇದಕ್ಕೆ ಉತ್ತರಿಸಿದ ಎಸ್ಪಿ ಡಾ.ಸಿ.ಬಿ. ವೇದಮೂರ್ತಿ ಗುತ್ತಿಗೆದಾರನ ವಿರುದ್ಧ ವಂಚನೆ ಪ್ರಕರಣ ದಾಖಲಿಸಲು ಸೂಚಿಸಿದರು. ಎಸ್ಸಿ ಎಸ್ಟಿ ನಕಲಿ ಜಾತಿ ಪ್ರಮಾಣ ಪತ್ರದ ಕುರಿತು ಜಿಲ್ಲಾಧಿಕಾರಿ ಪರಿಶೀಲಿಸಿ ತೀರ್ಪು ನೀಡಲಿದ್ದಾರೆ ಎಂದರು.
ಕುತ್ತಾರು, ತೊಕ್ಕೊಟ್ಟು, ಕೆ.ಸಿ.ನಗರ ಪ್ರದೇಶದಲ್ಲಿ ಇಲೆಕ್ಟ್ರಾನಿಕ್ಸ್ ಅಂಗಡಿಯವರು ಲಕ್ಕಿ ಸ್ಕೀಂ ಹೆಸರಿನಲ್ಲಿ ಗ್ರಾಹಕರನ್ನು ವಂಚಿಸುತ್ತಿದ್ದಾರೆ. ವಾರಕ್ಕೆ ಇಷ್ಟೆಂದು ಹಣ ಪಡೆದು ಡ್ರಾ ಮಾಡಿ, ತಮಗೆ ಬೇಕಾದವರಿಗೆ ವಸ್ತುಗಳನ್ನು ನೀಡುತ್ತಾರೆ. ಕೊನೆಯಲ್ಲಿ ಉಳಿಯುವವರಿಗೆ ಕಡಿಮೆ ಬಾಳಿಕೆ ಬರುವ ಬೇನಾಮಿ ಕಂಪೆನಿಗಳ ವಸ್ತುಗಳನ್ನು ನೀಡುತ್ತಾರೆ ಎಂದು ಚೆಂಬುಗುಡ್ಡೆಯ ಮಹಿಳೆಯೊಬ್ಬರು ಆರೋಪಿಸಿದರು.
ಜಿಲ್ಲೆಯಲ್ಲಿ ದಲಿತರ ಮೇಲೆ ದೌರ್ಜನ್ಯ, ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆ ಸುಲಿಗೆಗಳು ನಿರಂತರವಾಗಿ ನಡೆಯುತ್ತಿದೆ. ೧೯೫೫ರ ನಾಗರಿಕ ರಕ್ಷಣಾ ಕಾಯ್ದೆ ಜಾರಿಗೊಳಿಸಲಾಗಿತ್ತು. ೧೯೮೦ರಲ್ಲಿ ಅನುಸೂಚಿತ ಜಾತಿ ಮತ್ತು ಬುಡಕಟ್ಟು ಜನಾಂಗಕ್ಕೆ ಪೂರವಾಗಿ ದಲಿತ ದೌರ್ಜನ್ಯ ಕಾಯ್ದೆಯನ್ನು ಜಾರಿಗೊಳಿಸಲಾಗಿತ್ತು. ಅದನ್ನು ಜಿಲ್ಲೆಯಲ್ಲಿ ಸರಿಯಾಗಿ ಜಾರಿಗೊಳಿಸುವಲ್ಲಿ ಹಿನ್ನೆಡೆಯಾಗಿದೆ. ಹಾಗಾಗಿ ಜಿಲ್ಲೆಯಲ್ಲಿ ದಲಿತ ದೌರ್ಜನ್ಯ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ದಸಂಸ ರಾಜ್ಯ ಸಂಘಟನಾ ಸಂಚಾಲಕ ದೇವದಾಸ್ ಆಗ್ರಹಿಸಿದರು.

Leave a Comment