ಒತ್ತಡದಿಂದ ಹೊರ ಬರಲು ಧ್ಯಾನ, ಪ್ರಾಣಾಯಾಮ ಅಗತ್ಯ

ರಾಯಚೂರು.ಫೆ.13- ಪ್ರತಿಯೊಬ್ಬರು ತಮ್ಮ ದೈನಂದಿನ ಕಾರ್ಯ ಚಟುವಟಿಕೆ ಒತ್ತಡದಿಂದ ಹೊರ ಬರಬೇಕಾದರೆ, ಧ್ಯಾನ, ಪ್ರಾಣಾಯಾಮ ಅತ್ಯವಶ್ಯಕವೆಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ.ಪಾಟೀಲ್ ಹೇಳಿದರು.
ಅವರಿಂದು ಸ್ಥಳೀಯ ಬ್ರಹ್ಮಕುಮಾರಿಯ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಮಹಾಶಿವರಾತ್ರಿ ನಿಮಿತ್ಯ ಆಯೋಜಿಸಲಾಗಿದ್ದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಪೊಲೀಸರು ನಕಾರಾತ್ಮಕ ವಿಷಯಗಳಿಂದ ದೂರವಿದ್ದು ಸಕಾರಾತ್ಮಕದೆಡೆಗೆ ಗಮನ ಹರಿಸಬೇಕಾದರೆ ಧ್ಯಾನ ಅತ್ಯವಶ್ಯಕವಾಗಿದೆ. ಮೇಲಾಧಿಕಾರಿಗಳ ಒತ್ತಡದಿಂದ ಕಾರ್ಯನಿರ್ವಹಿಸುವ ವೇಳೆ ಅನೇಕ ಅಪಘಾತಗಳು ಹಾಗೂ ಆರೋಗ್ಯವೂ ಹದಗೆಟ್ಟು ಅನಾರೋಗ್ಯಕ್ಕೆ ಹೀಡಾಗುವ ಸಂದರ್ಭದಲ್ಲಿ ಇವುಗಳಿಂದ ದೂರವಿರಲು ಧ್ಯಾನ, ಯೋಗದಿಂದ ಸಾಧ್ಯವೆಂದರು. ಗಡಿಭಾಗದಲ್ಲಿ ಸೈನಿಕರು ದೇಶವನ್ನು ಕಾಯುತ್ತಿದ್ದರೆ, ನಗರ ಪ್ರದೇಶದಲ್ಲಿ ಸಾರ್ವಜನಿಕರಿಗೆ ಸೂಕ್ತ ರಕ್ಷಣೆ ಒದಗಿಸುವಲ್ಲಿ ಪೊಲೀಸರು ಹಗಲು-ರಾತ್ರಿ ಎನ್ನದೇ ದುಡಿಯುತ್ತಿದ್ದಾರೆಂದರು.
ಪ್ರತಿಯೊಬ್ಬರು ಮಾನಸೀಕ ಹಾಗೂ ದೈಹಿಕ ಸದೃಢತೆ ಹೊಂದಲು ಧ್ಯಾನ, ಯೋಗ ಹಾಗೂ ಪ್ರಾಣಾಯಾಮ ಅತ್ಯವಶ್ಯಕ. ಅಲ್ಲದೇ ದುಶ್ಚಟಗಳಿಂದ ದೂರವಿರುವಂತೆ ಸಲಹೆ ನೀಡಿದರು. ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮುಖ್ಯಸ್ಥರಾದ ಸ್ಮಿತಾ ಅಕ್ಕನವರು ಪ್ರಮಾಣ ವಚನ ಬೋಧಿಸಿದರು. ಇಂದು ಸಂಜೆ ಸ್ಥಳೀಯ ಗಂಜ್ ವೃತ್ತದಿಂದ ಶಿವಲಿಂಗನ ಶಾಂತಿಯಾತ್ರೆ ನಗರದ ವಿವಿಧ ಪ್ರಮುಖ ವೃತ್ತಗಳಲ್ಲಿ ನಡೆಯಲಿದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾರದಾ ಅಕ್ಕನವರು, ದೇವಣ್ಣ ನಾಯಕ ವಕೀಲರು, ಸಿ.ಬಿ.ಪಾಟೀಲ್ ಹಾಗೂ ಆಧ್ಯಾತ್ಮಿಕ ಚಿಂತಕರು ಸೇರಿ ಇತರರು ಉಪಸ್ಥಿತರಿದ್ದರು.

Leave a Comment