ಒಡೆದ ಮನೆಯಾದ ಬಳ್ಳಾರಿ ಬಿಜೆಪಿ

ಬಳ್ಳಾರಿ, ಅ.29: ಗಣಿನಾಡಿನಲ್ಲಿ ಮತ್ತೊಮ್ಮೆ ಬಿಜೆಪಿ ಇಬ್ಭಾಗವಾಗುವ ಲಕ್ಷಣಗಳು ಕಂಡುಬಂದಿವೆ. ಇದಕ್ಕೆ ಕಾರಣ ಪಕ್ಷದ ಜಿಲ್ಲಾ ಸಮಿತಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ) ಕ್ಕೆ ಅಧ್ಯಕ್ಷರ ನೇಮಕ. ಇದು ಮೂಲ ಬಿಜೆಪಿ ಮತ್ತು ರೆಡ್ಡಿ ಗುಂಪಿನ ನಡುವೆ ಕಂದಕಕ್ಕೆ ಕಾರಣವಾಗಿದೆ. ಇದರಿಂದಾಗಿ ಇಂದು ಪಕ್ಷದ ಜಿಲ್ಲಾ ಸಮಿತಿ ಹಾಗು ಮಂಡಲ ಸಮಿತಿಯ 50 ಕ್ಕೂ ಹೆಚ್ಚು ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ಸಲ್ಲಿಸಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಈಗಾಗಲೇ ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಚೆನ್ನಬಸವನಗೌಡರು, ನಿನ್ನೆ ದಿನ ಬಳ್ಳಾರಿ ನಗರ ಶಾಸಕ ಸೋಮಶೇಖರರೆಡ್ಡಿ ಅವರು ನನ್ನ ಸಾಮಾಥ್ರ್ಯದ ಬಗ್ಗೆ ಪ್ರಶ್ನಿಸಿದ್ದಾರೆ. ವಿಚಾರ, ತತ್ವ, ಸಿದ್ಧಾಂತಗಳ ಮೇಲೆ ಪಕ್ಷ ಬೆಳೆಯಬೇಕು. ಆದರೆ, ಇತ್ತೀಚಿನ ಬೆಳವಣಿಗೆಗಳಿಂದ ಜಿಲ್ಲೆಯಲ್ಲಿ ಪಕ್ಷದ ಪದಾಧಿಕಾರಿಗಳಿಗೆ ಮುಜುಗರ ತರುವಂತ ಪರಿಸ್ಥಿತಿ ಉಂಟಾಗಿದೆ ಎಂದರು.

ವೈಯಕ್ತಿಕವಾಗಿ ನಾನು 21ನೇ ವಯಸ್ಸಿನಿಂದಲೇ ಗ್ರಾಮ ಪಂಚಾಯಿತಿ ಅಧ್ಯಕ್ಷನಾಗಿ ರಾಜಕೀಯಕ್ಕೆ ಬಂದವನು. ಇನ್ನೂ ಪಕ್ಷದ ಅಧ್ಯಕ್ಷನಾಗಿ ನನ್ನ ಸಾಮರ್ಥ್ಯ ಏನೆಂಬುದನ್ನು ತೀರ್ಮಾನಿಸಲು ಸೋಮಶೇಖರ ರೆಡ್ಡಿ ಯಾರು. ಪಕ್ಷದ ಚೌಕಟ್ಟಿನಲ್ಲಿ ಚರ್ಚೆ ಮಾಡಬೇಕಾದದ್ದನ್ನು ಮಾಧ್ಯಮಗಳ ಮುಂದೆ ಮಾತನಾಡಿರುವುದು ದುರದೃಷ್ಟಕರ ಎಂದು ತಿಳಿಸಿದರು.

ನಾನೇನು ಹಿಂಭಾಗಿಲಿನಿಂದ ರಾಜಕಾರಣ ಮಾಡಿಲ್ಲ. ನನ್ನ ಬಗ್ಗೆ ಹೀಗೆ ಮಾತನಾಡುವುದು ನಿಮಗೆ ಶೋಭೆಯಲ್ಲ. ಯಾರನ್ನೂ ಓಲೈಸಿಕೊಂಡು ರಾಜಕಾರಣ ಮಾಡಿಲ್ಲ. ಶಿಸ್ತಿನ ಶಾಸಕರಾಗಿ ಪಕ್ಷದ ಜಿಲ್ಲಾಧ್ಯಕ್ಷರಿಗೆ ಗೌರವವಿರಬೇಕು. ನನ್ನ ಸ್ವಾಭಿಮಾನಕ್ಕೆ ಮತ್ತು ಪಕ್ಷಕ್ಕೆ ಧಕ್ಕೆಯಾಗುವಂತೆ ಮಾತನಾಡಿರುವುದು ಸರಿಯಲ್ಲ. ಅದಕ್ಕಾಗಿ ಪಕ್ಷದ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆಗೆ ಮುಂದಾಗಿದ್ದಾರೆ ಎಂದರು.

ನಿಮ್ಮ ಸಾಮರ್ಥ್ಯ ಏನು:
ಪ್ರಭಾವಿ ಶಾಸಕರಾದ ತಾವು ಲೋಕಸಭಾ ಉಪ ಚುನಾವಣೆಯಲ್ಲಿ ಶಾಂತಾ ಅವರಿಗೆ ಸಾರ್ವತ್ರಿಕ ಚುನಾವಣೆಯಲ್ಲಿ ದೇವೇಂದ್ರಪ್ಪ ಅವರಿಗೆ ನಿಮ್ಮ ಕ್ಷೇತ್ರದಲ್ಲಿ ಏಕೆ ಲೀಡ್ ಕೊಡಲಿಲ್ಲ ಎಂದು ನಾನು ಜಿಲ್ಲಾಧ್ಯಕ್ಷನಾಗಿ ಪ್ರಶ್ನಿಸಲಿಲ್ಲ ಎಂಬ ಕಾರಣಕ್ಕೆ ನನ್ನ ಸಾಮರ್ಥ್ಯ ವನ್ನು ಪ್ರಶ್ನಿಸಿದ್ದೀರಾ. ಸೋಲನ್ನು ಮಾತ್ರ ಜಿಲ್ಲಾಧ್ಯಕ್ಷರ ತಲೆಗೆ ಕಟ್ಟುವುದಾದರೆ, ನಿಮ್ಮ ಪಾತ್ರ ಏನು. ನೀವು ಜಿಲ್ಲಾಧ್ಯಕ್ಷರಿದ್ದಾಗ ಎಷ್ಟು ಕ್ಷೇತ್ರದಲ್ಲಿ ಗೆದ್ದಿದ್ದೀರಿ. ವ್ಯಕ್ತಿ ಮುಖ್ಯ ಅಲ್ಲ ಪಕ್ಷ ಮುಖ್ಯ ಎಂಬ ಸಂದೇಶ ನೀಡಲು ಇಂದು ಈ ತೀರ್ಮಾನ ತೆಗೆದುಕೊಂಡಿದೆ ಎಂದರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರುಗಳಾದ ಮುರಹರ ಗೌಡ, ಹೆಚ್. ಹನುಮಂತಪ್ಪ, ಗುತ್ತಿಗನೂರು ವಿರುಪಾಕ್ಷಗೌಡ, ಪೂಜಪ್ಪ, ಶ್ರೀಕಾಂತ ಗೋಂದಿ, ಗಣಪಾಲ ಐನಾಥರೆಡ್ಡಿ, ಮುದ್ದನಗೌಡ, ಅನಂತ ಪದ್ಮನಾಭ, ತೋರಣಗಲ್ಲು ಶರಣಪ್ಪ ಮೊದಲಾದವರು ಇದ್ದರು.

ರೆಡ್ಡಿ ಬೆಂಬಲಿಗರ ವಿರುದ್ಧ ಸಿಡಿದೆದ್ದ ಮೂಲ ಬಿಜೆಪಿಗರು
*ನಿಮ್ಮ ಬೆದರಿಕಗೆ ಪಕ್ಷ ಬಗ್ಗಲ್ಲ
*ಪಕ್ಷದ ಐಜಾಕ್‍ಗೆ ಬಿಡಲ್ಲ
* ಸುಳ್ಳಿನಿಂದ ಮನೆ ಕಟ್ಟಲು ಸಾಧ್ಯವಿಲ್ಲ
* ಶೇಖರ್‍ನ ನೇಮಕಕ್ಕೆ ಶಿಫಾರಸ್ಸು ಮಾಡಿಲ್ಲ
* ಆದೇಶ ಹಿಂಪಡೆಯುವವರೆಗೂ ಹೋರಾಟ
* ಪಿಎಗಳ ದರ್ಭಾರಕ್ಕೆ ಅವಕಾಶವಿಲ್ಲ
* ಜಿಲ್ಲಾ, ಮಂಡಲ ಸಮಿತಿಗಳ ಪದಾಧಿಕಾರಿಗಳ ಸಾಮೂಹಿಕ ರಾಜೀನಾಮೆ

Leave a Comment