ಒಗ್ಗಟ್ಟಾಗಿದ್ದರೆ ಮಾತ್ರ ಸೌಲಭ್ಯ ಸಿಗಲು ಸಾಧ್ಯ

ದಾವಣಗೆರೆ, ಸೆ. 8 – ನಾಯಕ ಸಮಾಜ ಬಾಂಧವರೆಲ್ಲರೂ ಒಗ್ಗಟ್ಟಾಗಿ ಉತ್ತಮ ಕೆಲಸ ಮಾಡಿದರೆ ಸಮಾಜಕ್ಕೆ ಏನಾದರು ಕೊಡುಗೆ ನೀಡಲು ಸಾಧ್ಯವಾಗುತ್ತದೆ ಎಂದು ಶಾಸಕ ಎಸ್.ಎ.ರವೀಂದ್ರನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡಗಳ ಸರ್ಕಾರಿ ನೌಕರರ ಸಂಘ, ಜಿಲ್ಲಾ ಘಟಕ, ಎಸ್ಎಸ್ಎಲ್ ಸಿ ಮತ್ತು ಪಿಯುಸಿಯಲ್ಲಿ ಶೇ. 75 ಕ್ಕಿಂತ ಹೆಚ್ಚು ಅಂಕ ಪಡೆದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರೊ.ಎಲ್.ಜಿ.ಹಾವನೂರು ಅವರು ನಾಯಕ ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರಿಗೆ ಸ್ಪಷ್ಟ ಪರಿಕಲ್ಪನೆ ಇತ್ತು. ನಾಯಕ ಸಮಾಜವನ್ನು ಸರ್ಕಾರದಲ್ಲಿ ಎಸ್ಟಿ ಮೀಸಲಾತಿಗೆ ಒಳಪಡಿಸದಿದ್ದರೆ ಬಹಳಷ್ಟು ಜನರು ಉದ್ಯೋಗದಿಂದ ವಂಚಿತರಾಗುತ್ತಿದ್ದರು. ಅವರು ಉತ್ತಮ ಕೆಲಸ ಮಾಡಿದ್ದಾರೆ. ನಾಯಕ ಸಮಾಜ ಬಾಂಧವರು ಹೋರಾಟದಿಂದ ಸೌಲಭ್ಯ ಪಡೆಯುವ ಅವಶ್ಯಕತೆ ಇದೆ ಎಂದರು.
ನಾಯಕ ವಿದ್ಯಾರ್ಥಿ ನಿಲಯದ ಅಧ್ಯಕ್ಷ ಹೆಚ್.ಕೆ.ರಾಮಚಂದ್ರಪ್ಪ ಮಾತನಾಡಿ, ಹಿಂದೆ ಪುರೋಹಿತಶಾಹಿಗಳು ಮಾತ್ರ ಹೆಚ್ಚು ಜ್ಞಾನ ಉಳ್ಳವರೆಂಬ ಪರಿಕಲ್ಪನೆ ಇತ್ತು. ಆದರೆ ಇಂದು ಅವರನ್ನು ಮೀರಿಸುವಂತ ಬುದ್ದಿವಂತರಿದ್ದಾರೆಂದು ಹೆಮ್ಮೆ ಪಡಬೇಕು ವಿನಹ, ಅಹಂಕಾರ ಪಡಬಾರದು. ಸಮಾಜದಲ್ಲಿ ಹೆಚ್ಚು ವಿದ್ಯಾವಂತರಾಗುತ್ತಿದ್ದಾರೆ,. ಆದರೆ ಉದ್ಯೋಗ ಮಾತ್ರ ಸಿಗುತ್ತಿಲ್ಲ, ಖಾಸಗಿ ಕೈಗಾರಿಕೆಗಳಲ್ಲಿ, ಐಟಿ, ಬಿಟಿಯಲ್ಲಿ ಉದ್ಯೋಗ ಸಿಕ್ಕಿದರು ಸಹ ಅವರಿಗೆ ರಕ್ಷಣೆ ಸಿಗುತ್ತಿಲ್ಲ, ಎಷ್ಟೇ ಜನಸಂಖ್ಯೆಗೆನುಗುಣವಾಗಿ ಯೋಚನೆ ಮಾಡಿದರೆ ಸರ್ಕಾರಿ ನೌಕರಿಯಲ್ಲಿ ಸಂಪೂರ್ಣವಾಗಿ ಪಡೆದಿಲ್ಲ. ಬ್ಯಾಕ್ ಲಾಗ್ ಹುದ್ದೆಗಳು ಭರ್ತಿಯಾಗಿಲ್ಲ, ಉದ್ಯೋಗಕ್ಕಾಗಿ ಹೋರಾಟ ಮಾಡುವ ಚಳುವಳಿ ಮಾಡಬೇಕು. ಇಲ್ಲದಿದ್ದರೆ ನಮ್ಮ ಸಮಾಜಕ್ಕೆ ಸರ್ಕಾರಿ ನೌಕರಿ ಪಡೆಯಲು ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನಕ್ಕೆ ಇಂದು ಕುತ್ತು ಬರುತ್ತಿದೆ. ಸಂವಿಧಾನ ಬೇಡ ಎನ್ನುವವರ ವಿರುದ್ದ ಧ್ವನಿ ಎತ್ತಬೇಕು. ಮೀಸಲಾತಿಗಾಗಿ ಧ್ವನಿ ಎತ್ತುವಂತಾಗಬೇಕು. ಪ್ರತಿಭಾವಂತ ಮಕ್ಕಳು ಮುಂದೆ ಅಧಿಕಾರ, ನೌಕರಿ ಸಿಗಬೇಕೆಂದರೆ, ಸಮಾಜ ಬಾಂಧವರು ಒಗ್ಗೂಡಿ ಹೋರಾಟ ನಡೆಸಬೇಕು. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಾಗಿದ್ದೀರಾ. ಇನ್ನು ಎಷ್ಟು ದಿನ ಸರ್ಕಾರಿ ನೌಕರಿಯಲ್ಲಿ ಉಳಿಯುತ್ತೀರೋ ಗೊತ್ತಿಲ್ಲ, ಕಾರಣ ಸರ್ಕಾರಿ ಶಾಲೆಗಳು ಬರಿದಾಗುವುದರಿಂದ ಮೀಸಲಾತಿ ಮತ್ತು ನೌಕರಿ ಸಿಗುತ್ತಿಲ್ಲ. ಹಾಗಾಗಿ ಸರ್ಕಾರಿ ಶಾಲೆಗಳು ಉಳಿಯಬೇಕೆಂದರೆ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುವಂತಾಗಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಮಾಜದ 200 ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಮಾಜಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಟಿ.ದಾಸಕರಿಯಪ್ಪ, ಹೊದಿಗೆರೆ ರಮೇಶ್, ಸುಶೀಲಮ್ಮ, ದೇವೇಂದ್ರಪ್ಪ, ಸಿ.ವಿ.ತಾರಾ, ಎ.ಸಿ.ತಿಪ್ಪೇಸ್ವಾಮಿ, ರಾಜಶೇಖರ್, ಶಂಕರ್ ಜಾಲಿಹಾಡ್, ಡಾ.ಹೆಚ್.ಎಂ.ರವೀಂದ್ರನಾಥ್, ಬಿ.ಆನಂದ್, ದೇವೇಂದ್ರಪ್ಪ, ಕೆ.ಎಸ್.ಜಯಪ್ಪ, ಟಿ.ರಮೇಶ್ ಮತ್ತಿತರರಿದ್ದರು.
ಒರಟುತನ ಬೇಡ
ಹಿಂದಿನ ಚುನಾವಣೆಗಳಲ್ಲಿ ನಾಯಕ ಸಮಾಜದವರು ನನ್ನ ವಿರುದ್ದ ಸ್ಪರ್ಧಿಸಿದ್ದರು ಆದರೆ ನಾಯಕ ಸಮಾಜದವರು ಒರಟರು ಎಂಬ ಭಾವನೆಯಿಂದ ನನ್ನನ್ನು ಗೆಲ್ಲಿಸಿದ್ದರು ಹಾಗಾಗಿ ಮುಂದಿನ ದಿನಗಳಲ್ಲಿ ನಾಯಕ ಸಮಾಜದವರು ಸಂಘಟಿತರಾಗಿ ನಿಮ್ಮಲ್ಲಿರುವ ಒರಟುತನವನ್ನು ಕಳಚಿಕೊಂಡು ರಾಜಕೀಯವಾಗಿ ಮುಂದೆ ಬನ್ನಿ ಎಂದು ಸಲಹೆ ನೀಡಿದರು. ಇದಕ್ಕೆ ಪ್ರತ್ತೋತ್ತರ ನೀಡಿದ ಸಮಾಜದ ಮುಖಂಡ ಹೆಚ್.ಕೆ.ರಾಮಚಂದ್ರಪ್ಪ, ಹಿಂದಿನ ಚುನಾವಣೆಯಲ್ಲಿ ಎಸ್.ಎ.ರವೀಂದ್ರನಾಥ್ ಅವರ ವಿರುದ್ದ ನಾನು ಸ್ಪರ್ಧಿಸಿದ್ದೇ. ಅವರು ಮೂವರುವರೆ ಸಾವಿರ ಮತಗಳನ್ನು ಪಡೆದಿದ್ದರು. ನಾನು ಅವರ ವಿರುದ್ದ ಹನ್ನೆರಡುವರೆ ಸಾವಿರ ಮತ ಪಡೆದ ಇತಿಹಾಸವಿದೆ. ಮುಂದಿನ ಚುನಾವಣೆಯಲ್ಲಿ ಅವರು ಗೆದ್ದು ಮೂರು ಬಾರಿ ಮಂತ್ರಿಯಾದರು. ಆದರೆ ನಾನು ನಿಲ್ಲಲಿಲ್ಲ. ಜನತಂತ್ರಕ್ಕೆ ಮಾನ್ಯತೆ ಕೊಡಬೇಕೆಂದು ಟಾಂಗ್ ನೀಡಿದರು. ಮುಂದಿನ ಚುನಾವಣೆಯಲ್ಲಿ ನಾಯಕ ಸಮಾಜದವರು ಸ್ಪರ್ಧಿಸಬೇಕೆಂದರು.
 ಕನ್ನಡಕ್ಕೆ ಮಾನ್ಯತೆ ನೀಡಿ
ಕನ್ನಡ ಮತ್ತು ಖಾಸಗಿ ಶಾಲೆಗಳಲ್ಲಿ 1 ರಿಂದ ಎಸ್ಎಸ್ಎಲ್ ಸಿಯವರೆಗೆ ಯಾರು ಕನ್ನಡ ಭಾಷೆಯಲ್ಲಿ ಓದುತ್ತಾರೋ ಅಂತವರಿಗೆ ಮಾತ್ರ ಸರ್ಕಾರಿ ನೌಕರಿ ಸಿಗಬೇಕೆಂಬ ಕಾನೂನು ಜಾರಿಗೆ ತರಬೇಕು.
-ಹೆಚ್.ಕೆ.ರಾಮಚಂದ್ರಪ್ಪ
ನಾಯಕ ಸಮಾಜದ ಮುಖಂಡ

Leave a Comment