ಒಂದೇ ವೇದಿಕೆ ಹಂಚಿಕೊಂಡ ಬದ್ಧ ವೈರಿಗಳು

ಮೈಸೂರು,ಜ.20. ರಾಜಕೀಯವಾಗಿ ಪರಸ್ಪರ ಬದ್ಧ ವೈರಿಗಳಂತಿರುವ ಸದಾ ಒಬ್ಬರಿಗೊಬ್ಬರ ಬಗ್ಗೆ ಚುಚ್ಚು ಮಾತನ್ನಾಡುತ್ತ ಕಾಲೆಳೆಯುತ್ತಿರುವ ಎದುರಾಳಿಗಳು ಮೈಸೂರಿನಲ್ಲಿ ಒಂದೇ ವೇದಿಕೆ ಹಂಚಿಕೊಂಡಿದ್ದಷ್ಟೇ ಅಲ್ಲದೇ, ಒಂದೇ ಕಾರಿನಲ್ಲಿ ಪ್ರಯಾಣಿಸುವ ಮೂಲಕ ಆಶ್ಚರ್ಯ ಮೂಡಿಸಿದ್ದಾರೆ.
ವಿರೋಧ ಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಕೆ.ಎಸ್‌ ಈಶ್ವರಪ್ಪ ಅವರು ನಿನ್ನೆ ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಬ್ಬರು ಖುಷಿಖುಷಿಯಾಗಿ ಒಂದೇ ವೇದಿಕೆ ಹಂಚಿಕೊಂಡಿದ್ದು ಮಾತ್ರವಲ್ಲದೆ ಜೊತೆಯಾಗಿ ಕಾರಲ್ಲಿ ಪ್ರಯಾಣ ಮಾಡುವ ಮೂಲಕ ಗಮನ ಸೆಳೆದರು.
ಮೈಸೂರಿನ ಕೆ. ಆರ್‌ ನಗರದ ದೊಡ್ಡಕೊಪ್ಪಲು ಗ್ರಾಮದಲ್ಲಿ ನಡೆದ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಹಾಲಿ ಸಚಿವ ಕೆ.ಎಸ್ ಈಶ್ವರಪ್ಪ ಭಾಗವಹಿಸಿದ್ದರು. ಕಾರ್ಯಕ್ರಮದ ವೇದಿಕೆಯಲ್ಲಿ ರಾಜಕೀಯ ಎದುರಾಳಿಗಳಾದ ಸಿದ್ದರಾಮಯ್ಯ ಹಾಗೂ ಈಶ್ವರಪ್ಪ ಜೊತೆಗೆ ಹೆಚ್. ವಿಶ್ವನಾಥ್ ಕೂಡಾ ಕಾಣಿಸಿಕೊಂಡು ಅಚ್ಚರಿ ಮೂಡಿಸಿದರು.
ಮೂವರು ನಾಯಕರು ವೇದಿಕೆಯಲ್ಲಿ ಆತ್ಮೀಯವಾಗಿ ಮಾತನಾಡಿದರು. ಸಿದ್ದರಾಮಯ್ಯ ಮಧ್ಯದಲ್ಲಿದ್ದರೆ ಎಡ ಹಾಗೂ ಬಲ ಭಾಗದಲ್ಲಿ ಈಶ್ವರಪ್ಪ ಮತ್ತು ಎಚ್. ವಿಶ್ವನಾಥ್ ಕುಳಿತುಕೊಂಡಿದ್ದರು. ಇಬ್ಬರಿಗೂ ಸಿದ್ದರಾಮಯ್ಯ ಬಿಸ್ಕೆಟ್‌ ನೀಡಿದರು.
ಕಾರ್ಯಕ್ರಮದ ಬಳಿಕ ಸಿದ್ದರಾಮಯ್ಯ ಹಾಗೂ ಈಶ್ವರಪ್ಪ ಒಂದೇ ಕಾರಲ್ಲಿ ಪ್ರಯಾಣ ಮಾಡಿದರು. ಸಿದ್ದರಾಮಯ್ಯ ಕಾರಿನ ಮುಂದಿನ ಸೀಟಲ್ಲಿ ಕುಳಿತುಕೊಂಡಿದ್ದರೆ ಈಶ್ವರಪ್ಪ ಹಿಂದಿದ್ದರು. ಕಾರನ್ನು ಮುತ್ತಿಕೊಂಡ ಅಭಿಮಾನಿಗಳಿಗೆ ಉಭಯ ನಾಯಕರು ನಿಂತು ಕೈ ಬೀಸಿದರು.
ಇತ್ತೀಚೆಗೆ ಸಿದ್ದರಾಮಯ್ಯ ಹೃದಯ ಸಂಬಂಧಿ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾಗ ಸಿಎಂ ಬಿ.ಎಸ್‌ ಯಡಿಯೂರಪ್ಪ ಜೊತೆಗೆ ಈಶ್ವರಪ್ಪ ಕೂಡಾ ತೆರಳಿ ಆರೋಗ್ಯ ವಿಚಾರಿಸಿದ್ದರು. ಆಸ್ಪತ್ರೆಯಲ್ಲಿ ಸಿದ್ದರಾಮಯ್ಯ ಜೊತೆಗೆ ನಗೆ ಚಟಾಕಿ ಹಾರಿಸಿದ ವಿಡಿಯೋ ಹಾಗೂ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಭಿನ್ನ ಸಿದ್ದಾಂತದ ನಾಯಕರು ಜೊತೆಗೆ ಕಾಣಿಸಿಕೊಂಡಿದ್ದು ಮೆಚ್ಚುಗೆಗೆ ಪಾತ್ರವಾಗಿತ್ತು

Leave a Comment