ಒಂದೇ ದೇಶ- ಒಂದೇ ಶಿಕ್ಷಣ ಅಭಿಯಾನ ತಂಡ ದೆಹಲಿಯ ಉಪಮುಖ್ಯಮಂತ್ರಿ ಭೇಟಿ

ಬಂಟ್ವಾಳ, ಜೂ.೧೨- ದೇಶಾದ್ಯಂತ ಸಮಾನ ಶಿಕ್ಷಣ ಜಾರಿಗೊಳಿಸುವ ನಿಟ್ಟಿನಲ್ಲಿ ಒಂದೇ ದೇಶ- ಒಂದೇ ಶಿಕ್ಷಣ ಅಭಿಯಾನ ಕೈಗೊಳ್ಳಲಿದ್ದು ಈ ಬಗ್ಗೆ ಚರ್ಚಿಸಲು ಸರಕಾರಿ ಶಾಲೆ ಉಳಿಸಿ ಬೆಳೆಸಿ ಸಮಿತಿಯ ರಾಜ್ಯಾಧ್ಯಕ್ಷ ಪ್ರಕಾಶ್ ಅಂಚನ್ ಅವರ ನೇತೃತ್ವದಲ್ಲಿ ಒಂದೇ ದೇಶ- ಒಂದೇ ಶಿಕ್ಷಣ ಅಭಿಯಾನ ತಂಡ ಶನಿವಾರ ದೆಹಲಿಯ ಉಪಮುಖ್ಯಮಂತ್ರಿ ಹಾಗೂ ಶಿಕ್ಷಣ ಮಂತ್ರಿಯಾಗಿರುವ ಮನಿಷ್ ಸಿಸೋಡಿಯಾ ಅವರನ್ನು ಭೇಟಿ ಮಾಡಿತು.
ದೆಹಲಿಯ ಮುಖರ್ಜಿ ನಗರದಲ್ಲಿರುವ ಗೃಹ ಕಚೇರಿಯಲ್ಲಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಾಯಿತು. ಸರ್ಕಾರಿ ಶಾಲೆ ಉಳಿಸುವ ನಿಟ್ಟಿನಲ್ಲಿ ರಾಜ್ಯ ಸಮಿತಿ ನಡೆಸುತ್ತಿರುವ ಹೋರಾಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಮುಂದಿನ ದಿನಗಳಲ್ಲಿ ದಡ್ಡಲಕಾಡು ಶಾಲೆಗೆ ಭೇಟಿ ನೀಡುವುದಾಗಿ ತಿಳಿಸಿದರು. ಈ ಸಂದರ್ಭ ದೆಹಲಿಯ ಶಾಸಕ ಮಹೇಂದ್ರ ಗೋಯಲ್, ಒಂದೇ ದೇಶ- ಒಂದೇ ಶಿಕ್ಷಣ ಅಭಿಯಾನ ತಂಡದ ರಾಜೇಶ್ ಕೇರಾ, ರಾಜೀವ್ ಕೇರಾ, ಅಜಯ್ ಸಚ್‌ದೇವಾ ಮೊದಲಾದವರಿದ್ದರು.
ಬಳಿಕ ತಂಡ ದೆಹಲಿಯ ಸರ್ಕಾರಿ ಶಾಲೆಯನ್ನು ಭೇಟಿ ಮಾಡಿತು. ಕರ್ನಾಟಕದ ಪಬ್ಲಿಕ್ ಸ್ಕೂಲ್ ಮಾದರಿಯಲ್ಲಿಯೇ ಇಲ್ಲಿನ ಬಹುತೇಕ ಸರ್ಕಾರಿ ಶಾಲೆಗಳಿದ್ದು ಒಂದೇ ಆವರಣದಲ್ಲಿ ಎಲ್‌ಕೆಜಿಯಿಂದ ದ್ವಿತೀಯ ಪಿಯುಸಿ ವಿದ್ಯಾಭ್ಯಾಸವನ್ನು ಪಡೆಯುವ ಅವಕಾಶ ಇದೆ. ಲ್ಯಾಬ್, ಗ್ರಂಥಾಲಯ, ಸ್ಮಾರ್ಟ್‌ಕ್ಲಾಸ್, ಜಿಮ್ ಸಹಿತ ಎಲ್ಲಾ ಮೂಲಭೂತ ಸೌಲಭ್ಯಗಳು ಸರಕಾರಿ ಶಾಲೆಗಳಲ್ಲಿದ್ದು ಸುಸಜ್ಜಿತ ಕಟ್ಟಡ ಹಾಗೂ ಸಾಕಷ್ಟು ಕೊಠಡಿಗಳನ್ನು ಹೊಂದಿದೆ. ಒಂದೂವರೆ ಸಾವಿರಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ತರಗತಿಗೊಬ್ಬರು ಶಿಕ್ಷಕರಿದ್ದು ಮಾದರಿ ಶಾಲೆಗಳು ಇಲ್ಲಿವೆ ಎಂಬುದನ್ನು ತಂಡ ತನ್ನ ಅಧ್ಯಯನದಲ್ಲಿ ಕಂಡು ಕೊಂಡಿದೆ.

Leave a Comment