ಒಂದೆಡೆ ಸಾಲಮನ್ನಾ : ಮತ್ತೊಂದೆಡೆ ರೈತರಿಗೆ ಬ್ಯಾಂಕ್ ನೋಟೀಸ್

ರಾಯಚೂರು.ಜೂ.14- ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ ಸಾಲ ಮನ್ನಾ ಘೋಷಣೆ ನಂತರವೂ ರೈತರಿಗೆ ಬ್ಯಾಂಕ್‌ಗಳಿಂದ ನೋಟೀಸ್ ಜಾರಿ ಮುಂದುವರೆದಿದ್ದು, ರೈತರು ಸಾಲ ಮನ್ನಾ ಬಗ್ಗೆ ಕಕ್ಕಾಬಿಕ್ಕಿಯಾಗುವಂತೆ ಮಾಡಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ರೀತಿಯ ನೋಟೀಸ್ ರೈತರಿಗೆ ಜಾರಿಗೊಳಿಸುವ ಮೂಲಕ ಭೀಕರ ಬರಕ್ಕೆ ತುತ್ತಾದ ರೈತರು ಭಯಭೀತಗೊಳ್ಳುವಂತೆ ಮಾಡಿದೆ. ಜಾಗೀರ್ ವೆಂಕಟಾಪೂರು ಗ್ರಾಮದ ಸುಮಾರು ಏಳು ಜನರಿಗೆ ಸಾಲ ಪಾವತಿಗೆ ಸಂಬಂಧಿಸಿ, ಸೂಚನೆ ನೀಡಲಾಗಿದೆ. ಗ್ರಾಮದ ಭೀಮಣ್ಣ ಸೂಗಣ್ಣ ಎಂಬುವವರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಲ್ಮಲಾ ಶಾಖೆಯಿಂದ ಮೇ.25 ರಂದು ನೋಟೀಸ್ ಜಾರಿಗೊಳಿಸಲಾಗಿದೆ.
ಈ ನೋಟೀಸ್‌ನಲ್ಲಿ ಅಕೌಂಟ್ ನಂ.62329004706 ಖಾತೆದಾರರು 24-5-2019, 15-6-2019 ಮತ್ತು 21-06-2019 ಬ್ಯಾಂಕ್ ಅದಾಲತ್‌‌ನಲ್ಲಿ ಸಾಲ ಬಗ್ಗೆ ಇತ್ಯರ್ಥಗೊಳಿಸಿಕೊಳ್ಳಲು ಸೂಚನೆ ನೀಡಿದ್ದಾರೆ. ಬ್ಯಾಂಕ್ ನೀಡಿದ ನೋಟೀಸ್ ಭೀಮಣ್ಣ ಸೂಗಣ್ಣ ಅವರ ಒಟ್ಟು ಸಾಲ 63802 ಮತ್ತು ಬಡ್ಡಿ ಹಾಗೂ ಇತರೆ ಶುಲ್ಕ ಪಾವತಿಗೆ ಬ್ರಾಂಚ್ ಮ್ಯಾನೇಜರ್ ಸಂಪರ್ಕಿಸುವಂತೆ ಸೂಚಿಸಲಾಗಿದೆ.
ಬ್ಯಾಂಕ್ ಈ ಸೂಚನೆ ರೈತರನ್ನು ತೀವ್ರ ಆಂದೋಲನಕ್ಕೆ ಗುರಿಯಾಗುವಂತೆ ಮಾಡಿದೆ. ರಾಜ್ಯ ಸರ್ಕಾರ 2 ಲಕ್ಷದವರೆಗಿನ ಬ್ಯಾಂಕ್ ಸಾಲ ಮನ್ನಾಕ್ಕೆ ಸಂಬಂಧಿಸಿ, ಆದೇಶಿಸಿದೆ. 31-12-2017 ರವರೆಗಿನ ಸಾಲ ಮನ್ನಾಕ್ಕೆ ಸಂಬಂಧಿಸಿ ಆದೇಶಿಸಿತು. ಈ ನೋಟೀಸ್ ಸಂಬಂಧಿಸಿ ಭೀಮಣ್ಣ ಅವರ ಕುಟುಂಬ ಸಂಪರ್ಕಿಸಿದಾಗ ಸಾಲ ಮನ್ನಾ ಯೋಜನೆ ಕುರಿತು ಅಚ್ಚರಿ ವ್ಯಕ್ತಪಡಿಸಿದರು.
ಈಗಾಗಲೇ ಸರ್ಕಾರದಿಂದ ಸಾಲ ಮನ್ನಾಕ್ಕೆ ಸಂಬಂಧಿಸಿ, ಸ್ಪಷ್ಟ ಆದೇಶಗಳಿದ್ದರೂ, ಬ್ಯಾಂಕ್ ಅಧಿಕಾರಿಗಳು ಮಾತ್ರ ನೋಟೀಸ್ ನೀಡುತ್ತಿದ್ದಾರೆ. ಈ ಕುರಿತು ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಿದರೇ, ನಿಮ್ಮ ಬಾಬತ್ತಿನ ಸಾಲ ಮನ್ನಾವಾಗಿಲ್ಲ ಎನ್ನುವ ಉತ್ತರ ನೀಡುತ್ತಿದ್ದಾರೆ. ಭೀಮಣ್ಣ ಅವರು ಎಸ್‌ಬಿಐ ಬ್ಯಾಂಕಿನಿಂದ 50 ಸಾವಿರ ಸಾಲ ಪಡೆದಿದ್ದರು. ಆದರೆ, ಬ್ಯಾಂಕ್ 63 ಸಾವಿರ ರೂ. ಸಾಲ ತೀರಿಸಲು ಸೂಚನಾ ಪತ್ರ ನೀಡಿದೆ. ಇದೇ ರೀತಿ ಇತರೆರಿಗೂ ಸಾಲ ತೀರಿಸಲು ಆದೇಶಿಸಲಾಗಿದೆ. ರಾಜ್ಯ ಸರ್ಕಾರ ಸಾಲದ ಮೊತ್ತ ಪಾವತಿಸದ ಕಾರಣ ರೈತರಿಗೆ ನೋಟೀಸ್ ಜಾರಿಗೊಳಿಸಲಾಗಿದೆ. ರಾಜ್ಯ ಸರ್ಕಾರದಿಂದ ಸಾಲ ಮನ್ನಾ ಬಾಬತ್ತಿನ ಹಣ ಪಾವತಿಯಾದರೇ, ರೈತರು ಆತಂಕ ಪಡುವ ಅಗತ್ಯವಿಲ್ಲವೆಂದು ಲೀಡ್ ಬ್ಯಾಂಕ್ ಮ್ಯಾನೇಜರ್ ಸ್ಪಷ್ಟಪಡಿಸಿದ್ದಾರೆ. ಸಾಲ ಮನ್ನಾಕ್ಕೆ ಸಂಬಂಧಿಸಿ, ರೈತರು ಒಂದೆಡೆ ಸಂತಸಗೊಂಡಿದ್ದರೇ, ಮತ್ತೊಂದೆಡೆ ಬ್ಯಾಂಕ್‌ನಿಂದ ಬರುವ ನೋಟೀಸ್ ಅವರನ್ನು ಚಿಂತೆಗೀಡಾಗುವಂತೆ ಮಾಡಿದೆ.

Leave a Comment