ಒಂದು ಪಕ್ಷ ಬಹುಮತ ಪಡೆದ ಇತಿಹಾಸವೇ ಇಲ್ಲ !

ಪಾಲಿಕೆ ಚುನಾವಣೆ: ಈ ಬಾರಿಯಾದರೂ ದಕ್ಕಲಿದೆಯೇ ಬಹುಮತ ?
18 ಬಾರಿ ಜನತಾ ಪರಿವಾರ
13 ಬಾರಿ ಕಾಂಗ್ರೆಸ್ ಆಡಳಿತ
ಬಿಜೆಪಿಗೆ ಈವರೆಗೆ ದಕ್ಕದ ಗದ್ದುಗೆ
ಮೈಸೂರು, ಆ. 30- ಮೈಸೂರು ಮಹಾನಗರ ಪಾಲಿಕೆಯ ಚುನಾವಣೆಗೆ ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು, ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳ ನಾಯಕರು ನಾವೇ ಸ್ವತಂತ್ರವಾಗಿ ಪಾಲಿಕೆಯ ಚುಕ್ಕಾಣಿ ಹಿಡಿಯುತ್ತೇವೆ ಎಂಬ ಆತ್ಮವಿಶ್ವಾಸದಲ್ಲಿ ಬೀಗುತ್ತಿದ್ದಾರೆ. ಆದರೆ, ಮೈಸೂರು ಮಹಾನಗರ ಪಾಲಿಕೆ ರಚನೆಗೊಂಡ ದಿನದಿಂದ ಇಲ್ಲಿಯವರೆಗೆ ಸ್ವಂತ ಬಲದಿಂದ ಯಾವ ಪಕ್ಷವೂ ಅಧಿ.ಆರ ಚಿಕ್ಕಾಣಿ ಹಿಡಿದಿಲ್ಲ ಎಂಬ ಅಂಶವನ್ನು ಪಾಲಿಕೆ ಇತಿಹಾಸ ಸಾರಿ ಹೇಳುತ್ತಿದೆ.
ಮೈಸೂರು ಮಹಾನಗರ ಪಾಲಿಕೆ ಅಸ್ತಿತ್ವಕ್ಕೆ ಬಂದು ಮೂರು ದಶಕಗಳು ಕಳೆದಿದ್ದು, 1983ರಿಂದ ಇದುವರೆಗೆ ಒಟ್ಟು ಆರು ಚುನಾವಣೆಗಳು ನಡೆದಿವೆ. ಈ ಬಾರಿ ನಡೆಯುತ್ತಿರುವುದು ಏಳನೇ ಚುನಾವಣೆ. ನಗರಸಭೆಯಾಗಿದ್ದ ಮೈಸೂರು 1983ರಲ್ಲಿ ಮಹಾನಗರ ಪಾಲಿಕೆಯಾಗಿ ಪರಿವರ್ತನೆಯಾಯಿತು. ಬಳಿಕ ನಡೆದ ಮೊದಲ ಚುನಾವಣೆಯಲ್ಲಿ ಜನತಾ ಪಕ್ಷ ಅತಿಹೆಚ್ಚು ಸ್ಥಾನಗಳನ್ನು ಗೆದ್ದರೂ, ಬಹುಮತಕ್ಕೆ ಮೂರು ಸ್ಥಾನಗಳ ಕೊರತೆ ಎದುರಾಗಿ ಪಕ್ಷೇತರ ನೆರವಿನಿಂದ 5 ವರ್ಷ ಆಡಳಿತ ನಡೆಸಿತ್ತು.
1990ರಲ್ಲಿ ನಡೆದಿದ್ದ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ ಎರಡು ಸ್ಥಾನಗಳ ಕೊರೆಯಿಂದಾಗಿ ಬಹುಮತ ಪಡೆಯಲು ವಿಫಲವಾಗಿತ್ತು. 1996ರ ಚುನಾವಣೆಗೆ ಪಾಲಿಕೆಯ ವಾರ್ಡ್ ಗಳ ಸಂಖ್ಯೆ 57ರಿಂದ 65ಕ್ಕೆ ಹೆಚ್ಚಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ತೀರ್ವ ಸ್ಪರ್ಧೆ ನಡೆದಿತ್ತು. ಅಂದು ಪಾಲಿಕೆಯಲ್ಲಿ ಬಹುಮತ ಪಡೆಯಲು ವಿಫಲವಾಗಿ ಕಾಂಗ್ರೆಸ್ 21 ಸ್ಥಾನಗಳನ್ನ, ಜೆಡಿಎಸ್ 27 ಸ್ಥಾನಗಳನ್ನ ಪಡೆದ ಪರಿಣಾಮ ಅತಂತ್ರ ಸ್ಥಿತಿ ಮುಂದುವರಿದಿತ್ತು.
2002ರಲ್ಲಿ ನಡೆದಿದ್ದ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರ ಹಣಾಹಣಿ ಏರ್ಪಟ್ಟು, ಕಾಂಗ್ರೆಸ್ ಪಕ್ಷ ನಾಲ್ಕು ಸ್ಥಾನಗಳ ಕೊರತೆಯಿಂದ ಬಹುಮತ ಪಡೆಯುವ ಅವಕಾಶ ಕಳೆದುಕೊಂಡಿತ್ತು. ಈ ಚುನಾವಣೆಯಲ್ಲಿ ಬಿಜೆಪಿ ಮೊದಲ ಬಾರಿಗೆ ಉತ್ತಮ ಪ್ರದರ್ಶನ ನೀಡುವ ಮೂಲಕ ಕಾಂಗ್ರೆಸ್ ಮತ್ತು ಜೆಡಿಎಸ್ ಮತಬ್ಯಾಂಕ್‍ಗೆ ಲಗ್ಗೆಯಿಟ್ಟು, 11 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ಸು ಕಂಡಿತ್ತು.
2007ರ ಚುನಾವಣೆಯಲ್ಲಿ ಬಹುತೇಕ ವಾರ್ಡ್‍ಗಳಲ್ಲಿ ಪ್ರಮುಖ ಮೂರು ರಾಜಕೀಯ ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ನಡೆದಿತ್ತು. ಕಾಂಗ್ರೆಸ್ 22 ಸ್ಥಾನಗಳೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೆ, ಜೆಡಿಎಸ್ ಮತ್ತು ಬಿಜೆಪಿ ತಲಾ 18 ಸ್ಥಾನಗಳನ್ನು ಗೆದ್ದಿದ್ದವು. ಪಾಲಿಕೆ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಬಿಜೆಪಿ ಉತ್ತಮ ಸಾಧನೆ ಮಾಡಿತ್ತು.
ಇನ್ನೂ ಕಳೆದ ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ 22 ಸ್ಥಾನಗಳಲ್ಲಿ ಗೆದ್ದು ಅತಿ ದೊಡ್ದ ಪಕ್ಷವಾಗಿ ಹೊರಹೊಮ್ಮಿದರೂ ಅಧಿಕಾರ ಹಿಡಿಯಲು ಸಾಧ್ಯವಾಗಲಿಲ್ಲ. ಜೆಡಿಎಸ್ 20, ಬಿಜೆಪಿ 12 ಸ್ಥಾನಗಳಲ್ಲಿ ಜಯಭೇರಿ ಬಾರಿಸಿತ್ತು. ಪಕ್ಷೇತರರು 11 ಸ್ಥಾನಗಳಲ್ಲಿ ಗೆಲುವು ಕಂಡಿದ್ದರು. ಜೆಡಿಎಸ್ ಮತ್ತು ಬಿಜೆಪಿ ಪಕ್ಷ ಮೈತ್ರಿ ಮಾಡಿಕೊಂಡು ಕಳೆದ 5 ವರ್ಷಗಳ ಕಾಲ ಪಾಲಿಕೆಯಲ್ಲಿ ಅಧಿಕಾರ ನಡೆಸಿವೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಒಂದೆರೆಡು ಸಲ ಮ್ಯಾಜಿಕ್ ಸಂಖ್ಯೆಯ ಸನಿಹ ಬಂದಿವೆ. ಆದರೆ ಸ್ವಂತ ಬಲದಿಂದ ಅಧಿಕಾರಕ್ಕೇರಲು ಅವಶ್ಯಕತೆಯಿದ್ದ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿಲ್ಲ. ಈ ಬಾರಿ ನಮಗೆ ಬಹುಮತ ಖಚಿತ ಎಂದು ಹೇಳಿಕೊಂಡು ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‍ನ ಮುಖಂಡರು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಬಂಡಾಯ ಅಭ್ಯರ್ಥಿಗಳು ಹಾಗೂ ಪಕ್ಷೇತರರು ಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವುದರಿಂದ ಸ್ಪಷ್ಟ ಬಹುಮತ ಪಡೆಯುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ. ಏನೇ ಆದರೂ ಪಾಲಿಕೆಯಲ್ಲಿ ಬಹುಮತ ಪಡೆಯುವುದು ಅಷ್ಟು ಸುಲಭವಲ್ಲ ಎಂಬುದನ್ನು ಪಾಲಿಕೆಯ ಚುನಾವಣೆಯ ಇತಿಹಾಸ ಸಾರಿ ಸಾರಿ ಹೇಳುತ್ತಿದೆ.

Leave a Comment