ಒಂದು ದೇಶ, ಒಂದೇ ಪಡಿತರ ಚೀಟಿ

ನವದೆಹಲಿ, ಜ. ೨೧- ದೇಶದಾದ್ಯಂತ ಜೂ. ೧ ರಿಂದ ‘ಒನ್ ನೇಷನ್, ಒನ್ ರೇಷನ್ ಕಾರ್ಡ್ (ಒಂದೇ ದೇಶ, ಒಂದೇ ಪಡಿತರ ಚೀಟಿ) ಯೋಜನೆ ಜಾರಿಗೆ ಬರಲಿದೆ.
ಆಂಧ್ರಪ್ರದೇಶ, ಹರಿಯಾಣ, ಕರ್ನಾಟಕ, ಕೇರಳ, ಮಧ್ಯಪ್ರದೇಶ್, ಮಹಾರಾಷ್ಟ್ರ, ರಾಜಸ್ತಾನ್, ತೆಲಂಗಾಣ, ತ್ರಿಪುರಾ, ಗುಜರಾತ್, ಜಾರ್ಖಂಡ್ ಸೇರಿದಂತೆ ೧೬ ರಾಜ್ಯಗಳಲ್ಲಿ ‘ಒನ್ ನೇಷನ್, ಒನ್ ರೇಷನ್ ಕಾರ್ಡ್ ವ್ಯವಸ್ಥೆಯನ್ನು ಈಗಾಗಲೇ ಜಾರಿಗೆ ತರಲಾಗಿದೆ. ಜೂ. ೧ರೊಳಗೆ ದೇಶದಾದ್ಯಂತ ಏಕರೂಪದ ಪಡಿತರ ಚೀಟಿ ವ್ಯವಸ್ಥೆ ಜಾರಿಯಾಗಲಿದೆ ಎಂದು ಕೇಂದ್ರ ಸಚಿವ ರಾಮ್‌ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ.
ಈ ಯೋಜನೆಯನ್ನು ಬಿಹಾರ್ ಮತ್ತು ಉತ್ತರ್‌ಪ್ರದೇಶಗಳಲ್ಲಿ ಆರಂಭಿಸಬೇಕಿದೆ. ‘ಒನ್ ನೇಷನ್, ಒನ್ ರೇಷನ್ ಯೋಜನೆ ದೇಶದಾದ್ಯಂತ ಕಾರ್ಮಿಕರು ಮತ್ತು ಬಡವರಿಗೆ ಪ್ರಯೋಜನಗಳನ್ನು ನೀಡುತ್ತಿದೆ. ೮೧ ಕೋಟಿ ಜನರು ಈ ಯೋಜನೆಯ ಪ್ರಯೋಜನ ಪಡೆಯುತ್ತಾರೆ. ಏಕೆಂದರೆ ಗೋಧಿಯನ್ನು ಪ್ರತಿ ಕೆಜಿ ೨ ರೂ.ಗೆ ಮತ್ತು ಅಕ್ಕಿಯನ್ನು ಪ್ರತಿ ಕೆಜಿಗೆ ೩ರೂ.ಗೆ ನೀಡುವುದರ ಜತೆಗೆ ಯೋಜನೆಯಡಿ ಫಲಾನುಭವಿಗಳಿಗೆ ದೇಶದಾದ್ಯಂತ ಪ್ರಯೋಜನಗಳನ್ನು ಪಡೆದುಕೊಳ್ಳಲು ಅದೇ ಪಡಿತರ ಚೀಟಿ ಬಳಸಲು ಅವಕಾಶ ಕಲ್ಪಿಸುತ್ತಿರುವುದು ಗಮನಾರ್ಹ ಎಂದು ಕೇಂದ್ರ ಸಚಿವ ಪಾಸ್ವಾನ್ ಮಾಹಿತಿ ನೀಡಿದ್ದಾರೆ. ಈ ಯೋಜನೆಯ ಮೂಲಕ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವಲಸೆ ಹೋಗುವ ಕಾರ್ಮಿಕರು ಅದೇ ರಾಜ್ಯದಲ್ಲಿ ಒಂದೇ ಪಡಿತರ ಚೀಟಿ ಮೂಲಕ ಆಹಾರಧಾನ್ಯ ಪಡೆದುಕೊಳ್ಳಬಹುದಾಗಿದೆ. ಈ ಯೋಜನೆಯ ಪ್ರಮುಖ ಉದ್ದೇಶಗಳಲ್ಲಿ ಇದೂ ಒಂದಾಗಿದೆ. ಏಕೆಂದರೆ ಅರ್ಹ ಫಲಾನುಭವಿಗಳಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಯಾವುದೇ ನ್ಯಾಯಬೆಲೆ ಅಂಗಡಿಯಿಂದ ಒಂದೇ ಪಡಿತರ ಚೀಟಿ ಬಳಸಿ ಆಹಾರ ಪಡೆದುಕೊಳ್ಳುವ ಅವಕಾಶ ಒದಗಿಸುವುದೇ ಯೋಜನೆಯ ಮುಖ್ಯ ಉದ್ದೇಶ ಎಂದಿದ್ದಾರೆ.
ಇ ಪೋಸ್ (ಎಲೆಕ್ಟ್ರಾನಿಕ್ ಮಾರಾಟ ಕೇಂದ್ರ) ಸಾಧನಗಳಲ್ಲಿ ಬಯೋಮೆಟ್ರಿಕ್ ಆಧಾರ್ ದೃಢೀಕರಣದ ನಂತರ ಫಲಾನುಭವಿಗಳು ನ್ಯಾಯಬೆಲೆ ಅಂಗಡಿ ಫಲಕಗಳಲ್ಲಿ ನಮೂದಿಸಿರುವ ಧಾನ್ಯಗಳನ್ನು ಪಡೆದುಕೊಳ್ಳಬಹುದಾಗಿದೆ.
ಕೇಂದ್ರ ಸಚಿವರ ಮಾಹಿತಿಯನ್ವಯ ಒಂದೇ ಪಡಿತರ ಚೀಟಿ ವ್ಯವಸ್ಥೆಯಿಂದ ಅಂತರರಾಜ್ಯ ಪೋರ್ಟಬಲಿಟಿ ಸೌಲಭ್ಯ ಇಪಿಓಎಸ್‌ನ ಸಾಧನಗಳನ್ನು ಹೊಂದಿರುವ ನ್ಯಾಯಬೆಲೆ ಅಂಗಡಿಗಳಲ್ಲಿ ಮಾತ್ರ ಲಭ್ಯವಿರಲಿದೆ.

Leave a Comment