ಒಂದು ದಿನವೂ ನೆಮ್ಮದಿಯಾಗಿ ಆಡಳಿತ ನಡೆಸಲು ಬಿಟ್ಟಿಲ್ಲ ಹೆಚ್‌ಡಿಕೆ

ಮೈಸೂರು.ಏ.15.’ಮುಖ್ಯಮಂತ್ರಿ ಆದ ದಿನದಿಂದ ಒಂದು ದಿನವೂ  ನೆಮ್ಮದಿಯಾಗಿ ಆಡಳಿತ ಮಾಡಲು ಬಿಟ್ಟಿಲ್ಲ, ತಮ್ಮ ಪಕ್ಷ 120 ಸೀಟ್ ಗೆದ್ದಿದ್ದರೆ ನೆಮ್ಮದಿಯಾಗಿ  ಆಡಳಿತ ನಡೆಸುತ್ತಿದ್ದೆ. ಈಗ ಎಂಥಾ ಕಷ್ಟದಲ್ಲಿ ಸರ್ಕಾರ ನಡೆಸುತ್ತಿದ್ದೇನೆ ಎಂದು ನಿಮಗೆ  ಗೊತ್ತಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತೊಮ್ಮೆ ಕಣ್ಣೀರು ಹಾಕಿದ್ದಾರೆ.

ಕೆ.ಆರ್. ಪೇಟೆಯಲ್ಲಿ ಜೆಡಿಎಸ್, ಕಾಂಗ್ರೆಸ್ ಜಂಟಿ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ಕಣ್ಣೀರು ಹಾಕುವುದನ್ನು ನಿಲ್ಲಿಸಿದ್ದೆ. ಇಂದು ಪಕ್ಷದ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರು ಕೆಲವು ಮಾತುಗಳನ್ನು ಹೇಳಿದರು.’ ಯಾರು ನಿಮ್ಮ ಕಷ್ಟ ಅರ್ಥ ಮಾಡಿಕೊಳ್ಳಲ್ಲ, ನಿನ್ನ ಪರಿಸ್ಥಿತಿ ಯೋಚನೆ ಮಾಡಲ್ಲ, ನಿನ್ನ ಆರೋಗ್ಯ ಮೇಲೆ ಯಾವ ಪರಿಣಾಮ‌ ಬೀರಿದೆ ಅನ್ನುವುದನ್ನು ಯೋಚನೆ ಮಾಡಲ್ಲ ಎಂದು ಹೇಳಿದ ಮಾತುಗಳು ತಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರಿದೆ. ನೋವು ತಡೆಯಲಿಕ್ಕೆ ಆಗದೆ ನಾನು ಕಣ್ಣೀರು ಹಾಕಿದ್ದೇನೆ” ಎಂದು ಕಣ್ಣೀರು ಸುರಿಸುತ್ತಲೇ ಪಕ್ಷೇತರ ಅಭ್ಯರ್ಥಿ ಬಗ್ಗೆ ಟೀಕಿಸಿದರು.

ಸಿನಿಮಾ ನಟರು ಬಂದು ಮಂಡ್ಯ ಜಿಲ್ಲೆಯ ಸ್ವಾಭಿಮಾನದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ನಟ ಯಶ್ ಹಾಗೂ ದರ್ಶನ್ ವಿರುದ್ಧ ಕಿಡಿಕಾಡಿದ ಕುಮಾರಸ್ವಾಮಿ, ಜಿಲ್ಲೆಯ ರೈತರು ಆತ್ಮಹತ್ಯೆ ಮಾಡಿಕೊಂಡು, ತಾಯಂದಿರು ಕಣ್ಣೀರು ಹಾಕುವಾಗ ಯಾವ ನಟರು ನಿಮಗೆ ಸಾಂತ್ವನ ಹೇಳುವುದಕ್ಕೆ ಬಂದಿದ್ದರು ? ಇಂದು ಮಂಡ್ಯ ಸ್ವಾಭಿಮಾನ ಎನ್ನುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.

ರೈತರು ಆತ್ಮಹತ್ಯೆ ಮಾಡಿಕೊಂಡಾಗ ಜಾತಿ, ಧರ್ಮ ನೋಡದೇ ತಾವು ಅವರ ಮನೆಗೆ ಹೋಗಿ ಸಾಂತ್ವನ ಹೇಳಿದ್ದೇನೆ. 200 ಕುಟುಂಬಗಳಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆ  ತಾಯಂದಿರ ಕಷ್ಟ ಕೇಳುವುದಕ್ಕೆ ಯಾರಾದರೂ ಬಂದಿದ್ದಾರೆಯೇ ? ಎಂದು ಪ್ರಶ್ನಿಸಿದ ಅವರು, ಪಕ್ಷೇತರ ಅಭ್ಯರ್ಥಿ ಸುಮಲತಾ ಅಂದು ಎಲ್ಲಿ ಹೋಗಿದ್ದರು ಎಂದು ಪ್ರಶ್ನಿಸಿದರು.

‘ಪಕ್ಷೇತರ ಅಭ್ಯರ್ಥಿ ಕಣ್ಣಲ್ಲಿ ನೀರು ಹಾಕಿ ನಾಟಕ ಆರಂಭಿಸಿದ್ದಾರೆ. ಆದರೆ,  ನಿಜವಾಗಿ ಕಣ್ಣೀರು ಹಾಕುತ್ತಿರುವವರು ನಾನು, ನಮ್ಮ ತಂದೆ. ಜನರ ಸಮಸ್ಯೆ ನೋಡಿ ಕಣ್ಣಲ್ಲಿ  ನೀರು ಬರುತ್ತಿದೆ ಎಂದು ಮತ್ತೊಮ್ಮೆ ಕಣ್ಣೀರು ಒರೆಸುತ್ತಾರೆ ಕುಮಾರಸ್ವಾಮಿ ಪಕ್ಷೇತರ ಅಭ್ಯರ್ಥಿ ವರ್ತನೆ ಬಗ್ಗೆ ಟೀಕಿಸಿದರು.
ತಾವು ಮೊದಲ  ಬಾರಿ ಮುಖ್ಯಮಂತ್ರಿ ಆದಾಗ, ಡಾ. ರಾಜಕುಮಾರ್ ನಿಧನರಾಗಿದ್ದರು. ಅವರು ನಿಧನರಾದ ಮಾಹಿತಿ ನಮ್ಮ ಗಮನಕ್ಕೆ ತರದೆ  ಮಾಧ್ಯಮಕ್ಕೆ ವಿಷಯ ತಿಳಿಸಿದರು. ಅಂದು ಯಾವುದೇ ಮುಂಜಾಗ್ರತೆ  ತೆಗೆದುಕೊಳ್ಳಲಾಗಲಿಲ್ಲ. ಹೀಗಾಗಿ ಅಂತ್ಯಕ್ರಿಯೆಯ ವೇಳೆ ಹಲವು ಗೊಂದಲವಾಯಿತು ಎಂದು ಅಂದಿನ ಘಟನೆಯನ್ನು ನೆನಪಿಸಿಕೊಂಡರು.

ಅಂಬರೀಶ್ ಅವರನ್ನು ಮೊದಲು ಸಂಸದರನ್ನಾಗಿ ಮಾಡಿದ್ದು ಜನತಾ ಪಕ್ಷ. ಬಳಿಕ ಕಾಂಗ್ರೆಸ್‌ ಗೆ  ಸೇರ್ಪಡೆಯಾದರು. ನಾನು ಅವರಿಗೆ ಏನು ಸಹಾಯ ಮಾಡಿದ್ದೇನೆ. ಅವರು ನನಗೆ  ಏನು ಸಹಾಯ ಮಾಡಿದ್ದಾರೆ ಎಂಬುದು ಈಗ ಅಪ್ರಸ್ತುತ. ಈಗ ಅದರ ಬಗ್ಗೆ ಮಾತನಾಡುವುದು ಬೇಡ. ಅಂಬರೀಶ್ ಅವರು  ನಿಧನರಾದಾಗ ನನಗೆ ನನ್ನ ಮಗನೇ ಮಾಹಿತಿ ತಿಳಿಸಿದ.

ತಾವು ಆಸ್ಪತ್ರೆಗೆ ಹೋದಾಗ ಅಲ್ಲಿ ಇಂದು ಚುನಾವಣೆ ನಡೆಸಲು ಬಂದವರು ಇರಲಿಲ್ಲ. ಅವರು  ವಾಸ ಮಾಡುತ್ತಿದ್ದ ಮನೆಗೆ ಪಾರ್ಥಿವ ಶರೀರ ತೆಗೆದುಕೊಂಡು ಹೋಗಲು ವ್ಯವಸ್ಥೆ ಮಾಡಿದೆ.  ಆ ಕನಿಷ್ಠ ಸೌಜನ್ಯವಾದರೂ ಅವರಿಗೆ ಇದೆಯಾ ಎಂದು ಸುಮಲತಾ ವಿರುದ್ಧ  ಆಕ್ರೋಶ ಹೊರಹಾಕಿದರು.

ಅಂಬರೀಶ್ ಅಂತಿಮ ದರ್ಶನಕ್ಕಾಗಿ ಮಧ್ಯ ರಾತ್ರಿಯಲ್ಲಿ ಜೆ.ಪಿ. ನಗರದ ನಿವಾಸದ ಒಂದು ಕೋಣೆಯನ್ನು ಶುಚಿಗೊಳಿಸಿ ಅವರು  ಬಾಳಿದ ಮನೆಯಲ್ಲಿ ಪಾರ್ಥೀವ ಶರೀರದ ದರ್ಶನದ ವ್ಯವಸ್ಥೆ ಮಾಡಿದೆ. ಪಾರ್ಥೀವ ಶರೀರ  ತೆಗೆದುಕೊಂಡು ಹೋಗಲು ಸೇನೆಯ ವಿಮಾನ ಕೊಡುವುದಿಲ್ಲ. ಆದರೆ ಅಂದು  ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ, ಅಭಿಮಾನಿಗಳು  ಕೇಳಿಕೊಂಡರು ಎಂದು ಆ ವ್ಯವಸ್ಥೆ ಮಾಡಿದೆ. ನಾನು ಒಬ್ಬ ಮುಖ್ಯಮಂತ್ರಿ ಆಗಿ ಅಲ್ಲಿ  ಕೂರಲಿಲ್ಲ, ಅಂತಹ ದರ್ದು ತಮಗೆ ಇರಲಿಲ್ಲ ಎಂದು ಪರೋಕ್ಷವಾಗಿ ಸುಮಲತಾ ವಿರುದ್ಧ ಹರಿಹಾಯ್ದರು.

ಈಗ ಅದಾವುದೋ ಸಿನೆಮಾದವರು ಬಂದು ಮಂಡ್ಯದಲ್ಲಿ ಸ್ವಾಭಿಮಾನದ ಬಗ್ಗೆ  ಮಾತನಾಡುತ್ತಾರೆ. ನಟ ಯಶ್, ನಮ್ಮ ಜೆಡಿಎಸ್ ಪಕ್ಷವನ್ನು ಕಳ್ಳರ ಪಕ್ಷ ಎನ್ನುತ್ತಾರೆ. ತಮಗೆ ಕೆಟ್ಟ  ಹೆಸರು ಬರುತ್ತೆ ಎಂದು ತಮ್ಮ ಪಕ್ಷದ ಕಾರ್ಯಕರ್ತರು ಸುಮ್ಮನಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.

ಅಂಬರೀಶ್ ಪಾರ್ಥೀವ ಶರೀರವನ್ನು ಮಂಡ್ಯಕ್ಕೆ ತೆಗೆದುಕೊಂಡು ಹೋಗಲು ಮೊದಲು ತಾವೇ ತೀರ್ಮಾನಿಸಿದೆವು. ಮಗ ಅಭಿಷೇಕ್ ಜೊತೆ ಚರ್ಚಿಸಿ ಮಂಡ್ಯಕ್ಕೆ ಕರೆದೊಯ್ಯುವುದು ಬೇಡ ಎಂದು ಹೇಳಿದ ಮಹಾನ್ ತಾಯಿ ಇಂದು ಕಣ್ಣೀರು ಹಾಕಿ ಜನರ  ಮುಂದೆ ಬಂದಿದ್ದಾರೆ. ಅಂಬರೀಶ್ ಬದುಕಿದ್ದಾಗ ಯಾವ ಜನರ ಕಷ್ಟ ಕೇಳಿದ್ದರೂ ಈ ಅಮ್ಮ ,ಅಂಬರೀಶ್ ಹೆಸರು ಉಳಿಸಲು ಮಂಡ್ಯಕ್ಕೆ ಬಂದಿದ್ದೀನಿ ಎನ್ನುತ್ತಾರೆ , ಇಲ್ಲಿಯವರೆಗೆ ಈ ವಿಚಾರ ಎಲ್ಲೂ ಪ್ರಸ್ತಾಪಿಸದೆ ಬಾಯಿ ಮುಚ್ಚಿಕೊಂಡಿದ್ದೆ ಆದರೆ ಈಗ  ತಿಳಿಸುತ್ತಿದ್ದೇನೆ. ಎಂದು ಅಂಬರೀಶ್ ನಿಧನದ ದಿನ ನಡೆದ ಚರ್ಚೆಯ ವಿಷಯವನ್ನು ಚುನಾವಣಾ ಪ್ರಚಾರದಲ್ಲಿ ಹೇಳುವ ಮೂಲಕ ಸುಮಲತಾಗೆ ಮಂಡ್ಯದ ಬಗ್ಗೆ ಅಭಿಮಾನ ಇರಲಿಲ್ಲ ಎಂದು ಹೇಳುವ ಪ್ರಯತ್ನವನ್ನು ಅವರು ನಡೆಸಿದರು.

ತಾವು ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದವನು. ಶಿಕ್ಷಣ ಮುಗಿಸಿ ಸಿನಿಮಾ ವಿತರಕನಾಗಿ ತಮ್ಮ  ಜೀವನ ಆರಂಭಿಸಿದೆ. ಅಚಾನಕ್ ಆಗಿ ರಾಜಕೀಯಕ್ಕೆ ಬಂದೆ. ಅಲ್ಲಿಂದ ಇಲ್ಲಿಯವರೆಗೇ ತಮ್ಮ ಮನೆ ಬಳಿ ಕಷ್ಟ ಹೇಳಿಕೊಂಡು ಬಂದವರ ಜಾತಿ ಧರ್ಮ ಕೇಳದೆ ಸಹಾಯ ಮಾಡಿದ್ದೇನೆ ಎಂದು ಹೇಳಿದರು.

ತಾವು ನಿರ್ಮಾಪಕ ಆಗಿದ್ದವನು. ನಾನು ಇಂತವರನ್ನೇ ಹಾಕಿಕೊಂಡು ಸಿನೆಮಾ‌ ಮಾಡಿದ್ದೇನೆ, ನನ್ನಂಥ ನಿರ್ಮಾಪಕ ಇಲ್ಲದಿದ್ದರೆ ಇಂತಹವರೆಲ್ಲಾ ಎಲ್ಲಿ ಬದುಕುತ್ತವೆ. ಕಲಾವಿದರು ಎಂದು ಗೌರವ ಕೊಟ್ಟಿದ್ದಕ್ಕೆ ಹಳ್ಳಿ ಹಳ್ಳಿಯಲ್ಲಿ ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಸಿನೆಮಾದಲ್ಲಿ ನೋಡುವುದು ನಿಜ ಎಂದುಕೊಳ್ಳಬೇಡಿ. ನಿಮ್ಮ ಮನೆಯಲ್ಲಿ ನಡೆಯುತ್ತಿರುವುದು ನಿಜವಾದ ಜೀವನ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ , ನಟ ಯಶ್ ಹಾಗೂ ದರ್ಶನ್ ವಿರುದ್ಧ ಕುಮಾರಸ್ವಾಮಿ ಗುಡುಗಿದರು.

ಪಕ್ಷೇತರ ಅಭ್ಯರ್ಥಿ, ಮತದಾನಕ್ಕೂ ಮುನ್ನವೇ ಸಂಸದೆ ಆಗಿದ್ದೇನೆ ಎಂದು ಮೂರು ತಿಂಗಳಿಂದ ನಿಮ್ಮ ತಲೆಗೆ ತುಂಬಿದ್ದಾರೆ.  ತಾವು ಮಾಧ್ಯಮಗಳಿಂದ ಬದುಕಿಲ್ಲ. ಮಾಧ್ಯಮದವರು ಏನು ಬೇಕಾದರೂ ಬರೆದುಕೊಳ್ಳಲಿ, ತಾವು  ಇಂದು ಬದುಕಿರುವುದು ಜನತೆಯಿಂದ ಎಂದರು.

ತಾವು ಎರಡು ಬಾರಿ ಹೃದಯ ಚಿಕಿತ್ಸೆಗೆ ಒಳಗಾಗಿದ್ದೇನೆ. ಇಸ್ರೇಲ್‌ಗೆ ಹೋದಾಗಲೇ ತಮ್ಮ ಜೀವ ಹೋಗಬೇಕಾಗಿತ್ತು. ವೈದ್ಯರು ತಕ್ಷಣವೇ ಚಿಕಿತ್ಸೆ ನೀಡಬೇಕು ಎಂದರು. ಆದರೆ ನಾನು ಬಂದಿರುವುದು ರೈತರಿಗೆ ಒಳ್ಳೆಯದು ಮಾಡಲು ಎಂದು ಯಾವುದಾದರೂ ಮಾತ್ರೆ ಕೊಡಿ ಸಾಕು ಎಂದು ಹೇಳಿ ಚಿಕಿತ್ಸೆ ಪಡೆಯದೆ ನಿಮ್ಮ ಸೇವೆ ಸಲ್ಲಿಸುತ್ತಿದ್ದೇನೆ ಎಂದು ಅನಾರೋಗ್ಯದ ವಿಚಾರವನ್ನು ಪ್ರಚಾರದಲ್ಲಿ ಹೇಳುವ ಮೂಲಕ ಭಾವನಾತ್ಮಕ ಮತದಾರರನ್ನು ಸೆಳೆಯುವ ಯತ್ನ ನಡೆಸಿದರು.

Leave a Comment