ಒಂದು ಎಕರೆ ಸ್ಥಳ ದಾನ ಮಾಡಿದ ವ್ಯಾಪಾರಿ

ಕಾಸರಗೋಡು, ಆ. ೨೪- ರಾಜ್ಯದಲ್ಲಿ ನೆರೆ ಸಂತ್ರಸ್ಥರಿಗೆ ಪರಿಹಾರ, ಸಾಮಗ್ರಿಗಳು ಹರಿದು ಬರುತ್ತಿದ್ದರೆ ಇತ್ತ ಕುಟುಂಬವೊಂದು ತಮ್ಮ ಒಂದು ಎಕರೆ ಸ್ಥಳವನ್ನು ದಾನ ಮಾಡುವ ಮೂಲಕ ಮಾದರಿಯಾಗಿದ್ದಾರೆ. ಉದುಮದ ವ್ಯಾಪಾರಿ ಪಿ.ಎ. ರವೀಂದ್ರನ್, ಉಷಾ ಪುತ್ರ ಅಖಿಲ್ ಅವರು ತಮ್ಮ ಹೆಸರಲ್ಲಿದ್ದ ಸ್ಥಳವನ್ನು ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದು, ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸ್ಥಳದಾನಗೈದರು. ಹೊಸದುರ್ಗ ತಾಲೂಕಿನ ಉದುಮ ಗ್ರಾಮದಲ್ಲಿರುವ ಸರ್ವೇ ನಂ.೪೪/೬/ಎಬಿಇ ಒಳಪಟ್ಟ ಒಂದು ಎಕರೆ ಸ್ಥಳದ ಆಧಾರಪತ್ರ, ಸ್ಥಳ ನಕ್ಷೆ, ಸ್ಥಳ ತೆರಿಗೆ ಕಟ್ಟಿದ ರಶೀದಿ ಸಹಿತ ಸ್ಥಳವನ್ನು ಪರಿಹಾರ ನಿಧಿಗೆ ನೀಡಲು ಅಗತ್ಯವಾದ ದಾಖಲೆಗಳು ಸಹಿತ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಡಾ.ಸಜಿತ್ ಬಾಬು ಅವರಿಗೆ ಹಸ್ತಾ೦ತರಿಸುವ ಮೂಲಕ ಗಮನಸೆಳೆದಿದ್ದಾರೆ.
ಭೂಮಿಯ ಮೌಲ್ಯ ೭೫ ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಗುರುವಾರದಂದು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ರವೀಂದ್ರನ್ ಕುಟುಂಬ ಸ್ಥಳವನ್ನು ದಾಖಲೆಗಳೊಂದಿಗೆ ಹಸ್ತಾಂತರಿಸಿದ್ದಾರೆ. ಕೇರಳ ಭೂ ಹಸ್ತಾಂತರ ನಿಯಮದ ಆಧಾರದಲ್ಲಿ ಪ್ರಸ್ತುತ ಹಸ್ತಾಂತರಗೊಳ್ಳಲಿರುವ ಭೂ ಸ್ಥಳಕ್ಕೆ ಸ್ಟ್ಯಾ೦ಪ್ ಡ್ಯೂಟಿ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Leave a Comment