ಒಂದನೇ ತರಗತಿಗೂ ಆನ್ ಲೈನ್: ಮಕ್ಕಳ ಮೇಲಾಗುವ ಪರಿಣಾಮದ ಬಗ್ಗೆ ವರದಿ ನೀಡಲು ನಿಮಾನ್ಸ್ ಗೆ ಸೂಚನೆ- ಸಚಿವ ಸುರೇಶ್ ಕುಮಾರ್

ಹಾಸನ, ಮೇ 23 – ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು ಸರ್ಕಾರ ಎಸ್.ಎಸ್ ಎಲ್.ಸಿ ಪರೀಕ್ಷೆಯನ್ನು ಅತ್ಯಂತ ಕಾಳಜಿಯಿಂದ ನಡೆಸಲಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಶತಮಾನದ ಸರ್ಕಾರಿ ಶಾಲೆಯ ಕಟ್ಟಡ ಸಮಸ್ಯೆಗೆ ಸಿಲುಕಿದ ಕುರಿತು ವಾಟ್ಸಪ್ ಸಂದೇಶ ನೋಡಿ ಸಕಲೇಶಪುರ ತಾಲ್ಲೂಕು ದೇವಾಲಕೆರೆ ಗ್ರಾಮಕ್ಕೆ ಅಗಮಿಸಿದ ಸಚಿವರು ಸ್ಥಳೀಯರೊಂದಿಗೆ ಸಭೆ ನಡೆಸಿ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

ಕೋವಿಡ್‌- 19 ಹಿನ್ನೆಲೆಯಲ್ಲಿ ಸುಮಾರು ಎರೆಡು ತಿಂಗಳ ಲಾಕ್ ಡೌನ್ ನಂತರ ವೇಳಾಪಟ್ಟಿ ಪ್ರಕಟಿಸಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಪರೀಕ್ಷೆ ನಡೆಸಲಾಗುವುದು ಎಂದು ಅವರು ಹೇಳಿದರು.

ಎಲ್ಲಾ ವಿದ್ಯಾರ್ಥಿಗಳಿಗೆ ಅವರು ಇರುವ ಊರುಗಳ ಪರೀಕ್ಷಾ ಕೇಂದ್ರಗಳಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತಿದೆ. ಪರೀಕ್ಷೆ ಬರೆಯಲಿರುವ ಎಲ್ಲಾ ‌8.5 ಲಕ್ಷ ವಿದ್ಯಾರ್ಥಿಗಳಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ‌ಸಂಸ್ಥೆ ವತಿಯಿಂದ ತಲಾ ಎರಡು ಮಾಸ್ಕ್ ನೀಡಲಾಗುತ್ತಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ಸ್ಯಾನಿಟೈಸರ್ ಹಾಕುವುದು, ಜಾಗೃತಿ ಮಾಡಿಸುವ ಕಾರ್ಯವನ್ನು ಈ‌ ಸಂಸ್ಥೆ ವತಿಯಿಂದ ಮಾಡಲಾಗುತ್ತದೆ. ಇನ್ನೂ ಅನೇಕ ಸಂಘ ಸಂಸ್ಥೆಗಳು ಇದರಲ್ಲಿ ಕೈ ಜೋಡಿಸುತ್ತಿವೆ ಎಂದು ಸಚಿವರು ಹೇಳಿದರು.

ಎಸ್ .ಎಸ್ .ಎಲ್.ಸಿ ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ನೋಡಿ ಕೆಸ್.ಎಸ್‌.ಆರ್.ಟಿ.ಸಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲು ಸಾರಿಗೆ ಸಚಿವರಲ್ಲಿ ಮಾನವಿ ಮಾಡಲಾಗುವುದು. ಪ್ರಯಾಣಿಕರ ಏರಿಕೆ ಅನುಸಾರ ಮಂದಿನ‌ ದಿನಗಳಲ್ಲಿ ಬಸ್‌ಗಳ ಓಡಾಟವೂ ಏರಿಕೆಯಾಗಲಿದೆ. ವಿದ್ಯಾರ್ಥಿಗಳು ಯಾವುದೇ ಆತಂಕ ಇಲ್ಲದೆ ಪರೀಕ್ಷೆ ಬರೆಯಬೇಕು ಎಂದು ಸಚಿವರು ಕರೆ ನೀಡಿದರು.

ಪರೀಕ್ಷಾ ಸಂದರ್ಭದಲ್ಲಿ ಕಂಟೋನ್ಮೆಂಟ್ ವಲಯಗಳಲ್ಲಿ ಇರುವವರಿಗೆ ಪೂರಕ ಪರೀಕ್ಷೆಗೆ ಅವಕಾಶ ನೀಡಿ ಅದನ್ನೂ ಈ ಸಾಮಾನ್ಯ ಪರೀಕ್ಷೆಯಂತೆ ಪರಿಗಣಿಸಲಾಗುವುದು ಎಂದು ಅವರು ಹೇಳಿದರು.

ಸರ್ಕಾರದ ಸೂಚನೆ ಬರುವವರೆಗೂ ಖಾಸಗಿ ಶಾಲೆಗಳು ದಾಖಲಾತಿ ಪ್ರಾರಂಭಿಸಬಾರದು, ಈ ವರ್ಷ ಶುಲ್ಕ ಏರಿಸಬಾರದು ಎಂಬ ಸೂಚನೆ ನೀಡಲಾಗಿದೆ ಎಂದ ಸಚಿವರು, ಒಂದನೇ ತರಗತಿಗೂ ಆನ್ ಲೈನ್ ಕ್ಲಾಸ್ ನಡೆಸಲಾಗುತ್ತಿದೆ. ಇದರಿಂದ ಮಕ್ಕಳ ಮೇಲಾಗುವ ಪರಿಣಾಮದ ಬಗ್ಗೆ ನಿಮಾನ್ಸ್ ನಿಂದ‌ ವರದಿ ಕೇಳಲಾಗಿದೆ. ವರದಿ ಬಂದ ನಂತರ ಅದಕ್ಕೆ ಅನುಸಾರ ಕ್ರಮ ವಹಿಸಲಾಗುವುದು ಎಂದು ಸುರೇಶ್ ಕುಮಾರ್ ಹೇಳಿದರು

ಮುಂಬರುವ ದಿನಗಳಲ್ಲಿ ಕೊರೋನಾ ಸೋಂಕಿಗೆ ಔಷಧಿ ಸಿದ್ಧವಾಗುವ ನಿರೀಕ್ಷೆ ಇದೆ. ಆದರೂ ಈವರಗೆ ಕೊರೋನಾ ಸೋಂಕು ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳು ಯಶಸ್ವಿಯಾಗಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.

ಸಕಲೇಶಪುರ ತಾಲ್ಲೂಕಿನ ದೇವಲಕೆರೆ ಶಾಲೆ ಕಟ್ಟಡ ಸಮಸ್ಯೆ ಗಮನಿಸಲಾಗಿದೆ. ಗ್ರಾಮದ ಶಿಕ್ಷಣದ ಏಳಿಗೆಗೆ ನೂರು ವರ್ಷಗಳ ಹಿಂದೆಯೇ ದಾನವಾಗಿ ಪಡೆದ ಜಮೀನಿನ ಬಗ್ಗೆ ಇರುವ ತಕರಾರನ್ನು ಶೀಘ್ರವಾಗಿ ನ್ಯಾಯ ಸಮ್ಮತವಾಗಿ ಬಗೆಹರಿಸಲಾಗುವುದು . ವಾಟ್ಸಪ್ ಸಂದೇಶ ಗಮನಿಸಿ ತಾವು ಇಲ್ಲಿಗೆ ಆಗಮಿಸಿದ್ದಾಗಿ ಶಿಕ್ಷಣ ಸಚಿವರು ಹೇಳಿದರು.

ಶಾಸಕರಾದ ಎಚ್.ಕೆ ಕುಮಾರಸ್ವಾಮಿ ಹಾಗೂ ಮಾಜಿ ಶಾಸಕ ಎಚ್.ಎಂ ವಿಶ್ವನಾಥ್ ಅವರು ಈ ಸಂದರ್ಭದಲ್ಲಿ ಮಾತನಾಡಿ ಶಿಕ್ಷಣ ಸಚಿವರೇ ದೇವಾಲಕೆರೆಗೆ ಅಗಮಿಸಿರುವುದು ಪ್ರಶಂಸನೀಯ. ಅವರ ಸೇವಾ ನಿಷ್ಠೆ, ಬದ್ಧತೆ ಅನುಕರಣೀಯ. ಸಾರ್ವಜನಿಕರ ಹಿತದೃಷ್ಟಿಯನ್ನು ಗಮನದಲ್ಲಿರಿಸಿಕೊಂಡು ಗ್ರಾಮಾದ ಶಾಲೆ ಕಟ್ಟಡದ ಬಳಕೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

Leave a Comment