ಒಂಟಿ ವೃದ್ಧನ ಕೊಲೆ ರಹಸ್ಯ ಬೇಧಿಸಿದ ಪೊಲೀಸರು ನಾಲ್ವರ ವಿಚಾರಣೆ

ಮಂಗಳೂರು, ಸೆ.೧೧- ಸುಳ್ಯ ತಾಲೂಕಿನ ಪಂಜ ಸಮೀಪದ ಪಂಬೆತ್ತಡಿ ಗ್ರಾಮದ ವೃದ್ಧ ಕಲ್ಚಾರು ಸುಬ್ರಹ್ಮಣ್ಯ ಭಟ್ ಅವರ ಸಾವಿನ ರಹಸ್ಯವನ್ನು ಪೋಲಿಸರು ಬೇಧಿಸುವಲ್ಲಿ ಸಫಲರಾಗಿದ್ದಾರೆ. ಮೃತ ಸುಬ್ರಹ್ಮಣ್ಯ ಭಟ್ ಒಂಟಿಯಾಗಿ ಪತ್ನಿ ಮತ್ತು ಮಕ್ಕಳಿಂದ ದೂರವಿದ್ದು ಪಂಬೆತ್ತಾಡಿಯ ಅವರ ಮನೆಯಲ್ಲಿ ವಾಸಿಸುತಿದ್ದರು. ಮನೆಗೆ ಅಡಿಕೆ ಸುಲಿಯಲೆಂದು ಬಂದಿದ್ದವರೇ ಕೊಲೆ ಕೃತ್ಯದಲ್ಲಿ ಭಾಗಿಯಾಗಿರಬೇಕೆಂಬ ಶಂಕೆಯ ಆಧಾರದಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆಯ ಸಂಪೂರ್ಣ ವಿವರ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಕೊಲೆಗೆ ಸಹಕರಿಸಿದ, ಅಡಿಕೆ ಮಾರಾಟ ಮಾಡಿರುವ ವ್ಯಕ್ತಿಗಳನ್ನೂ ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
ಕೊಲೆಗೀಡಾದ ಭಟ್ಟರಿಗೆ ಒಂಬತ್ತು ಎಕರೆ ತೋಟವಿದ್ದು, ಅದರ ಜೊತೆಗೆ ಲೇವಾದೇವಿ ವ್ಯವಹಾರವನ್ನು ನಡೆಸುತಿದ್ದರೂ ಎನ್ನಲಾಗಿದೆ. ಅತೀ ಕಡಿಮೆ ಖರ್ಚಿನಲ್ಲಿ ಜೀವಿಸುತ್ತಿದ್ದ ಅವರು, ಹಣವನ್ನು ಕೂಡಿಡುವ ಪವೃತಿಯವರಾಗಿದ್ದರೂ ಎನ್ನಲಾಗುತ್ತಿದೆ. ಪರಿಸರದ ಹಾಗೂ ಕುಟುಂಬದ ಸದಸ್ಯರೊಂದಿಗೆ ಕಡಿಮೆ ಬೆರೆಯುತ್ತಿದ್ದೂದರಿಂದ ಅವರು ನಿಧನರಾಗಿ ಹಲವು ದಿನಗಳಾದರೂ ಅದು ಹೊರಜಗತ್ತಿಗೆ ತಿಳಿದಿರಲಿಲ್ಲ. ಆ ೭ ರಂದು ಸೊಸೈಟಿಯ ನೋಟಿಸು ಕೊಡಲು ಹೋದ ಪೋಸ್ಟ್ ಮ್ಯಾನ್ ಎಷ್ಟೋ ಬಾಗಿಲು ಬಡಿದರೂ ಬಾಗಿಲು ತೆರೆಯದಿದ್ದಾಗ, ಹಾಗೂ ಮನೆಯ ಒಳಗಡೆಯಿಂದ ದುರ್ನಾತ ಬರುತಿದ್ದುದರಿಂದ ಅನುಮಾನಗೊಂಡು ಈ ವಿಷಯವನ್ನು ಸ್ಥಳಿಯರಲ್ಲಿ ತಿಳಿಸಿದುದರಿಂದ, ಭಟ್ ಅವರ ಸಾವಿನ ವಿಷಯ ಹೊರಜಗತ್ತಿಗೆ ತಿಳಿದುಬಂದಿತ್ತು.
ತಲೆಯಲ್ಲಿ ಅಳವಾದ ಗಾಯದ ಗುರುತು ಮತ್ತು ಅಂಗಳದಲ್ಲಿ ಅಡಿಕೆಗೆ ಹಾಸಿದ್ದ ಟಾರ್ಪಲಿನ ಮೇಲ್ಗಡೆಯಿಂದ ಪಿಕಪ್ ಹಾದು ಹೋಗಿ ಹರಿದ ಗುರುತು ಅವರ ಸಾವಿನ ಬಗ್ಗೆ ಅನುಮಾನ ಸೃಷ್ಟಿಸಿತ್ತು. ಲೇವಾದೇವಿ ವ್ಯವಹಾರದಲ್ಲಿ ಅವರೊಟ್ಟಿಗೆ ತೊಡಗಿಸಿಕೊಂಡವರು, ಅವರಿಗೆ ಹಣ ಮರಳಿಸದೇ ಬಾಕಿ ಇದ್ದವರು ಅವರನ್ನು ಕೊಲೆ ಮಾಡಿರಬಹುದೇ ಎಂಬ ಅನುಮಾನಗಳು ಸಾರ್ವಜನಿಕವಾಗಿ ಹುಟ್ಟಿಕೊಂಡಿತ್ತು.ಅದಕ್ಕೆ ಕಾರಣ ಹಲವು ಇದ್ದವು. ಜಿಪುಣರಾಗಿದ್ದ ಮೃತರು, ತಾವು ಬದುಕಿರುವವರೆಗೆ ಟಾರ್ಪಲಿನ ಮೇಲೆ ಗಾಡಿ ಹಾಯಿಸಲು ಬಿಡುವ ಸಾಧ್ಯತೆಯೇ ಇಲ್ಲ ಎಂಬುದು ಸ್ಥಳಿಯರ ಹಾಗೂ ಅವರನ್ನು ಚೆನ್ನಾಗಿ ಬಲ್ಲವರ ಅಭಿಪ್ರಾಯವಾಗಿತ್ತು. ಹಾಗಾಗಿ ಅವರ ಸಾವಿನ ಬಳಿಕ ಅ ಮನೆಗೆ ಪಿಕ್ ಅಪ್ ಬಂದು ಹೋಗಿದೆ ಎಂಬ ಸಣ್ಣ ಸುಳಿವಿನ ಅಧಾರದಲ್ಲಿ ಸಾವಿನ ತನಿಖೆಯನ್ನು ಪೊಲೀಸರು ಆರಂಭಿಸಿದರು ಎನ್ನಲಾಗಿದೆ. ಮನೆಯಲ್ಲಿ ಅಡಿಕೆ ಸುಲಿದ ಸಿಪ್ಪೆ ಇದ್ದುದರಿಂದ ಮತ್ತು ಅಷ್ಟೇ ಪ್ರಮಾಣದಲ್ಲಿ ಸುಲಿದಿಟ್ಡ ಅಡಿಕೆ ಕಾಣದೇ ಇದ್ದುದು ಹಲವರ ಅನುಮಾನಕ್ಕೆ ಕಾರಣವಾಗಿತ್ತು. ಅವರು ಸಾಮನ್ಯವಾಗಿ ಅಡಿಕೆ ಹಾಕುವ ಮಂಡಿಗೆ ಈ ಭಾರಿ ಅಡಿಕೆ ಹಾಕದೇ ಇದದ್ದು ,ಅವರ ಸಾವಿನ ಜಟಿಲತೆಯನ್ನು ಹೆಚ್ಚು ಮಾಡಿತ್ತು ಎನ್ನಲಾಗಿದೆ.
ಅಡಿಕೆ ಸುಲಿಯುವ ಕೆಲಸದಲ್ಲಿ ತೊಡಗಿಸಿಕೊಂಡಿರುವ ಕಾಣಿಯೂರು ಮೂಲದ ಇಬ್ಬರು, ಮೃತರ ಮನೆಗೆ ಅಡಿಕೆ ಸುಲಿಯಲೆಂದು ಹೋಗಿದ್ದು, ಅಲ್ಲಿ ಭಟ್ ಅವರ ಒಂಟಿತನದ ಲಾಭ ಪಡೆದು ಅಡಿಕೆ ಕಳ್ಳತನಕ್ಕೆ ಪ್ರಯತ್ನಿಸಿದ್ದು, ಅದಕ್ಕಾಗಿ ಸುಬ್ರಹ್ಮಣ್ಯ ಭಟ್ ಅವರನ್ನು ಕೊಲೆ ಮಾಡಿದಾರೆ ಎಂದು ಹೇಳಾಲಾಗುತ್ತಿದೆ. ಬಳಿಕ ಕಾಣಿಯೂರು ಮೂಲದ ಪಿಕಪ್ ಒಂದರ ಮೂಲಕ ಈ ಅಡಿಕೆಯನ್ನು ಕಾಣಿಯೂರಿನ ಅಡಿಕೆ ವ್ಯಾಪರಿಯೊಬ್ಬರಿಗೆ ಮಾರಿದ್ದಾರೆ ಎನ್ನಲಾಗುತ್ತಿದೆ. ಅಡಿಕೆ ಸುಲಿಯಲು ಹೋದ ಇಬ್ಬರು, ಅಡಿಕೆ ಸಾಗಾಟಕ್ಕೆ ಸಹಕರಿಸಿದ ಪಿಕಪ್ ಮಾಲಕ ಹಾಗೂ ಅಡಿಕೆ ಖರಿದೀಸಿದ ವ್ಯಾಪಾರಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

Leave a Comment