ಒಂಟಿ ಮರಗಳು ಮತ್ತು ಅಲಕ್ಷಿತ ಮಂಗಳ ಮುಖಿಯರ ನಂಟು

ಛಾಯಾಚಿತ್ರಗ್ರಹಣ ಕೇವಲ ದೃಶ್ಯಾತ್ಮಕ ಆನಂದಕ್ಕಾಗಿ ವಸ್ತುವಿನ ಸೆರೆಹಿಡಿಯುವಿಕೆ ಮಾತ್ರವಾಗಿರದೆ, ನಮ್ಮ ಕಲ್ಪನೆ ಹಾಗೂ ಗ್ರಹಿಕೆಗೆ ಅತೀತವಾದ ಅನುಭೂತಿಯಾಗಿದೆ. ‘ಒಂಟಿ ಮರಗಳು ಹಾಗೂ ಅನ್ಯ ಲಿಂಗದ ಉಡುಗೆ ತೊಟ್ಟ, ಮಂಗಳಮುಖಿಯರಂಥ ಅಲಕ್ಷಿತರು’ ಪ್ರಕೃತಿಯೊಂದಿಗೆ ಅನನ್ಯವಾಗಿ ಬೆರೆತು ಹೋಗಿರುವುದನ್ನು ಇಷ್ಟೊಂದು ಸಮರ್ಪಕವಾಗಿ ಮನಸೆಳೆಯುವಂತೆ ಸೆರೆಹಿಡಿದಿರುವುದಕ್ಕೆ ಈ ಛಾಯಾಚಿತ ಪ್ರದರ್ಶನ ಸಾಕ್ಷಿಯಾಗಿದೆ. ಖ್ಯಾತ ಛಾಯಚಿತ್ರ ಪತ್ರಕರ್ತರಾದ ಕೆ.ವೆಂಕಟೇಶ್ ಅವರು ಕೈಚಳಕದಲ್ಲಿ ಮೂಡಿಬಂದಿರುವ ಈ ವಿಶೇಷ ಛಾಯಚಿತ್ರ ಪ್ರದರ್ಶನ ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ನ ೧೮ರಿಂದ ೨೧ವರೆಗೂ ಬೆಳಿಗ್ಗೆ ೧೦ರಿಂದ ರಾತ್ರಿ ೭ವರೆಗೂ ನಡೆಯಲಿದೆ.

mangalamukiyaru2
ಒಂದೆಡೆ ಒಂಟಿ ವೃಕ್ಷಗಳು ಒಂಟಿ ಹೃದಯಗಳೊಂದಿಗೆ ಸಮ್ಮಿಳಿತವಾಗಿರುವುದು ಪರಸ್ಪರ ಒಬ್ಬರಿಗೊಬ್ಬರು ಜೀವ ತುಂಬುವಂತಿದ್ದರೂ, ಭಾರತದ ಟೆಕ್ ತಾಣಗಳಲ್ಲಿ ಅವರ ಉತ್ಸಾಹೀ ಅಸ್ತಿತ್ವ ಉದಾಸೀನ ಧೋರಣೆಯ, ಸಂವೇದನಾರಹಿತ ಮನಸುಗಳ ದೃಷ್ಟಿಯಲ್ಲಿ ಗೌಣವಾಗಿಯೇ ಉಳಿದಿದೆ. ಈ ಬೃಹದಾಕಾರದ ಮರಗಳು ಮುಖ್ಯ ರಸ್ತೆಗಳಲ್ಲಿ ಮತ್ತು ವಾಸ ಸ್ಥಳಗಳಲ್ಲಿ ಹಸಿರು ಛಾವಣಿಯನ್ನು ಹರಡಿಕೊಂಡು, ಎಲ್ಲರಿಗೂ ಆಶ್ರಯದಾತರಾಗಿ ಉದ್ಯಾನ ನಗರಿಯ ಅವಿಭಾಜ್ಯ ಭಾಗವೇ ಆಗಿವೆ. ಆದರೆ ಸುಮಿತ್ರಾರಂತಹ ಮಂಗಳಮುಖಿಯರು, ಲಿಂಗ ಪ್ರಧಾನ ಅಥವಾ ಪೂರ್ವಾಗ್ರಹ ಪೀಡಿತ ಸಮಾಜದಲ್ಲಿ ಒಂದು ಗುರುತಿಸುವಿಕೆಗಿಂತ ಹೆಚ್ಚಾಗಿ ಅಸ್ಮಿತೆ, ಗೌರವಾದರ ಹಾಗೂ ತಮ್ಮನ್ನು ಅಂಗೀಕರಿಸಿಕೊಳ್ಳುವ ಮನಃಸ್ಥಿತಿಗಾಗಿ ಹಂಬಲಿಸುತ್ತಾರೆ.
ಗ್ಲಾಮರ್ ಲೋಕದಲ್ಲಿ ತಮ್ಮ ಸೊಬಗನ್ನು ಪ್ರದರ್ಶಿಸುತ್ತಾ ಆರ್ಥಿಕ ಲಾಭಕ್ಕಾಗಿ ಯಾವುದೋ ಉತ್ಪನ್ನದ ಜಾಹೀರಾತಿಗಾಗಿ ನಡೆದಾಡುವ ರೂಪದರ್ಶಿಗಳನ್ನು ಬಿಂಬಿಸುವ ಬದಲಾಗಿ, ಈ ರೀತಿ ವಿಶೇಷವಾಗಿ ಛಾಯಾಚಿತ್ರ ಪ್ರದರ್ಶನ ಆಯೋಜಿಸಿ, ವಿಷಯಕ್ಕೆ ನ್ಯಾಯ ಒದಗಿಸುವ ಪ್ರಯತ್ನ ಮಾಡಿದ್ದಾರೆ. ನನಗೆ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿರುವ ಜನರನ್ನು ವಿಘಟಿಸುವ ದಾರಿಯ ಮಧ್ಯೆ ಅಥವಾ ಪಾದಚಾರಿ ಮಾರ್ಗಗಳಲ್ಲಿ ಬೆಳೆದು ನಿಂತಿರುವ ದೊಡ್ಡ ದೊಡ್ಡ ಮರಗಳ ಅಥವಾ ಬೃಹತ್ತಾದ ಕಾಂಡಗಳ ಇರುವಿಕೆ ಹಾಗೂ ಉಳಿದ ಎರಡು ಲಿಂಗಗಳ ನಡುವೆ ಸಿಲುಕಿಕೊಂಡಿರುವ ಮಂಗಳಮುಖಿಯರ ಜೀವನಗಳ ನಡುವೆ ಅತಿಯಾದ ಸಾಮ್ಯತೆ ಕಾಣಿಸುತ್ತದೆ. ಅವರಿಬ್ಬರು ಉಳಿದವರಿಗೂ ದೊರಕುವಂಥ ಲಕ್ಷ್ಯಕ್ಕೆ ಅರ್ಹರಾಗಿದ್ದಾರೆ; ಅವರಿಬ್ಬರನ್ನೂ ಸಮಾಜ ಸಮಾನವಾಗಿ ಕಂಡು, ವರ್ತಿಸಬೇಕಾಗಿದೆ” ಎಂಬುದು ಅವರ ಅಭಿಪ್ರಾಯ.

mangalamukiyaru3
ಪರಸ್ಪರ ಪೂರಕವಾಗಿರುವಂಥ ಮರಗಳು ಹಾಗೂ ಮಂಗಳಮುಖಿಯರು, ಸವಾಲಾಗಿರುವ ತಮ್ಮ ಬದುಕಿನಲ್ಲಿ ತಮ್ಮ ಕನಸುಗಳ ಬೆನ್ನು ಹತ್ತುತ್ತಿರುವ ಅಥವಾ ಅನಿಶ್ಚಿತತೆಗಳ ಜಗತ್ತಿನಲ್ಲಿ ಕಳೆದುಹೋಗಿರುವ ಜನರ ಗಮನವನ್ನು ತಮ್ಮ ಅಸ್ತಿತ್ವದತ್ತ ಸೆಳೆಯುತ್ತಿದ್ದಾರೆ. ಈ ಅಸಮಾನ ಜಗತ್ತಿನಲ್ಲಿಯೂ ಸಹ ಗಂಡು-ಹೆಣ್ಣುಗಳು ತಮ್ಮನ್ನು ತಾವು ಉಳಿಸಿ ಬೆಳೆಸಿ ಪೋಷಿಸಿಕೊಳ್ಳುವ ಅದೃಷ್ಟವನ್ನು ಹೊಂದಿರುವಾಗ, ಮಂಗಳಮುಖಿಯರು ತಮ್ಮ ಯೋಗಕ್ಷೇಮ ತಾವೇ ನೋಡಿಕೊಂಡು, ದೇವರ ಕೃಪೆಯನ್ನು ಬಯಸುವಂತಾಗಿದ್ದು, ಅವರ ಸ್ಥಿತಿಯೂ ದಾರಿ ಮಧ್ಯೆ ನಿಂತ ಮರಗಳ ಮುರಿದುಬಿದ್ದ ಕಾಂಡಗಳ ಸ್ಥಿತಿಯಂತಿದೆ. ಪೂರ್ಣ ಪ್ರಮಾಣದಲ್ಲಿ ಬೆಳೆದು ನಿಂತಿರುವ ಮರದೊಂದಿಗೆ ಸ್ನೇಹ ಬೆಸೆಯುವಲ್ಲಿ ಅಥವಾ ಅವುಗಳ ಕಾಂಡದೊಂದಿಗೆ ತಮ್ಮನ್ನು ತಾವು ಗುರುತಿಸಿಕೊಳ್ಳುವಲ್ಲಿ ಮಂಗಳಮುಖಿಯರು, ಜನರು ತಮ್ಮ ಬದುಕಿನತ್ತ ತೋರಿಸುವ ಉದಾಸೀನದಿಂದ ಇನ್ನಷ್ಟು ವೃದ್ಧಿಸಿರುವ ಅವರ ಒಡೆದುಹೋದ ಬದುಕಿನ ಒಂದು ಚಿತ್ರಣವನ್ನು ತೋರಿಸುತ್ತಾರೆ.
ಪ್ರಕೃತಿ ಮತ್ತು ಮನುಷ್ಯನ ಸಂಬಂಧ ಕಾಡಿನಷ್ಟು ಹಳೆಯದಾದುದು. ಆದರೆ ಆ ಸಂಬಂಧವನ್ನು ಯಾವಾಗಲೂ ಪುರುಷ ಅಥವಾ ಸ್ತ್ರೀಯೊಂದಿಗೆ ಸಂಯೋಜಿಸಿಕೊಂಡು ಅರ್ಥೈಸಲಾಗುತ್ತದೆಯೇ ವಿನಃ ಉಳಿದವರಂತೆಯೇ ಗೌರವ ಹಾಗೂ ಅಭಿಮಾನದೊಂದಿಗೆ ಬದುಕುವ ಎಲ್ಲಾ ಹಕ್ಕನ್ನೂ ಹೊಂದಿರುವ ಮಧ್ಯದಲ್ಲಿರುವವರನ್ನು ಒಳಗೊಳ್ಳುವುದಿಲ್ಲ. ಪ್ರಕೃತಿಯ ಭಾಗವಾಗಿರುವ ಮರಗಳು ಹಾಗೂ ಮರದ ಕಾಂಡಗಳು ದೈವದ ಸೃಷ್ಟಿ, ವಿಕಾಸ ಹಾಗೂ ವಿನಾಶಗಳ ಅಭಿವ್ಯಕ್ತಿಯೇ ಆಗಿವೆ. ಮಂಗಳಮುಖಿಯರಾದ ದೀಪು, ಸ್ಟೆಲ್ಲಾ, ಸುಶ್ಮಿತಾ ಹಾಗೂ ಇನ್ನೂ ಅನೇಕರೂ, ಲಯರಂತಹ ವಿರುದ್ಧ ಲಿಂಗದ ಉಡುಪುಧಾರಿಗಳೂ ಸಹ ಅವುಗಳಂತೆಯೇ ಆಗಿದ್ದು, ಅವರು ಸ್ತ್ರೀಯಂತೆ ಸೌಂದರ್ಯವತಿಯರೂ, ಪುರುಷರಂತೆ ಸಶಕ್ತರೂ ಆರೋಗ್ಯವಂತರೂ ಆಗಿದ್ದಾರೆ” ಎಂದು ಅಮೂರ್ತ ವಸ್ತು ವಿಷಯಗಳಿಗೆ ರೂಪ, ಆಕಾರಗಳನ್ನು ನೀಡಿ ಅವುಗಳನ್ನು ಸೃಜನಾತ್ಮಕ ಕಲಾಕೃತಿಯಾಗಿಸುವ ಛಾಯಾಚಿತ್ರಗ್ರಾಹಕರ ಅಭಿವ್ಯಕ್ತಿ ವಿಶಿಷ್ಟವಾದುದು.

Leave a Comment