ಐ‌ಐ‌ಐಟಿಗೆ ಅನುದಾನ – ಕಟ್ಟಡ ನಿರ್ಮಾಣಕ್ಕೆ ಶೀಘ್ರ ನಿರ್ಧಾರ

ದಲಿತ ಕುಟುಂಬಗಳಿಗೆ ಪರ್ಯಾಯ ಕೃಷಿ ಯೋಗ್ಯ ಜಮೀನು
ರಾಯಚೂರು.ಫೆ.25- ಹಿಂದುಳಿದ ಜಿಲ್ಲೆಯಲ್ಲಿ ಐ‌ಐ‌ಐಟಿ ಸಂಸ್ಥೆ ಆರಂಭಿಸುವ ಮೂಲಕ ಜಿಲ್ಲೆಯಲ್ಲಿ ಶೈಕ್ಷಣಿಕ ಮತ್ತು ಸಮಗ್ರಾಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಿದ್ದು, ಪ್ರಸಕ್ತ ವರ್ಷದಿಂದ ಐ‌ಐ‌ಐಟಿಯನ್ನು ಜಿಲ್ಲೆಯಲ್ಲಿ ಆರಂಭಿಸಲಾಗುತ್ತದೆಂದು ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ್ ನಾರಾಯಣ ಅವರು ಹೇಳಿದರು.
ಅವರಿಂದು ವಡವಾಟಿ ಸೀಮಾಂತರದಲ್ಲಿ ಐ‌ಐ‌ಐಟಿ ಸ್ಥಳ ವೀಕ್ಷಣೆ ನಂತರ ಮಾತನಾಡುತ್ತಾ, ತಕ್ಷಣವೇ ಐ‌ಐ‌ಐಟಿ ಆರಂಭಿಸುವ ಉದ್ದೇಶದಿಂದ ಹೈದ್ರಾಬಾದ್‌ನಲ್ಲಿ ತರಗತಿ ನಿರ್ವಹಿಸಲಾಗುತ್ತಿತ್ತು. ಪ್ರಸಕ್ತ ವರ್ಷದಿಂದ ಇದನ್ನು ಸರ್ಕಾರಿ ಇಂಜನಿಯರಿಂಗ್ ಕಾಲೇಜಿನಲ್ಲಿ ನಡೆಸಲಾಗುತ್ತದೆ. ಐ‌ಐ‌ಐಟಿ ನಿರ್ವಹಣೆಗೆ ಅಗತ್ಯವಾದ 11 ಕೋಟಿ ರೂ. ಹಣ ಪ್ರತಿ ವರ್ಷ ನೀಡಲಾಗುತ್ತದೆ.
ವಡವಾಟಿ ಸೀಮಾಂತರದಲ್ಲಿ ಐ‌ಐ‌ಐಟಿ ಕಟ್ಟಡ ನಿರ್ಮಾಣಕ್ಕೆ ನೀಡಲಾದ 65 ಎಕರೆ ಸ್ಥಳದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲು ಸರ್ಕಾರ ಅಗತ್ಯ ಅನುದಾನ ಬಿಡುಗಡೆ ಮಾಡಲಿದೆ.
ಐ‌ಐ‌ಐಟಿಗೆ ನೀಡಿದ ಜಮೀನನ್ನು ಈಗಾಗಲೇ ದಲಿತ ಕುಟುಂಬಗಳಿಗೆ ನೀಡಲಾಗಿದೆ ಎನ್ನುವ ವಿಷಯ ಅವರ ಗಮನಕ್ಕೆ ತಂದಾಗ ಐ‌ಐ‌ಐಟಿ ಜಮೀನಿನ ಅಕ್ಕಪಕ್ಕದಲ್ಲಿ ಇನ್ನೂ 56 ಎಕರೆ ಸರ್ಕಾರಿ ಜಮೀನಿದ್ದು, ಇದನ್ನು ದಲಿತ ಕುಟುಂಬದವರಿಗೆ ನೀಡಲಾಗುತ್ತದೆಂದು ಭರವಸೆ ನೀಡಿದ್ದಾರೆ.
ಕೃಷಿಗೆ ಯೋಗ್ಯವಾದಂತಹ ಜಮೀನನ್ನು ರೈತರಿಗೆ ನೀಡಲಾಗುತ್ತದೆ. ಐ‌ಐ‌ಐಟಿ ರಾಯಚೂರು ಜಿಲ್ಲೆಯಲ್ಲಿ ಆರಂಭಿಸಲಾಗುತ್ತಿದೆ. ಆದರೆ, ಇಲ್ಲಿಯ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಹೈದ್ರಾಬಾದ್ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಈ ಸಂಸ್ಥೆಯಲ್ಲಿ ಪ್ರವೇಶ ಪಡೆಯಲು ಮೀಸಲಾತಿ ಇಲ್ಲದಿರುವುದರಿಂದ ಸಮಸ್ಯೆಯಾಗಿದೆ. ಕೇಂದ್ರ ಸರ್ಕಾರದ ಮೇಲೆ ಒತ್ತಡವೇರಿ ಮೀಸಲಾತಿ ಸೌಲಭ್ಯ ದೊರೆಯುವಂತೆ ಮಾಡಲಾಗುತ್ತದೆಯೇ? ಎನ್ನುವ ಪ್ರಶ್ನೆಗೆ ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲು ಸರ್ಕಾರ ಬದ್ಧವಾಗಿದೆಂದು ಹೇಳಿದರು.
ಐ‌ಐ‌ಐಟಿ ಜಿಲ್ಲೆಯ ಆರಂಭಿಸುವ ಮೂಲಕ ಈ ಭಾಗದಲ್ಲಿ ತಾಂತ್ರಿಕ ಪರಿಣಿತಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎನ್ನುವುದು ಸರ್ಕಾರದ ಉದ್ದೇಶವಾಗಿದೆ. ಇದರಿಂದ ಈ ಭಾಗದ ತಾಂತ್ರಿಕ ಕಾಲೇಜುಗಳಿಗೆ ಬಹುದೊಡ್ಡ ಬೆಂಬಲ ದೊರೆಯಲಿದೆ. ಇದರಿಂದ ಸಂಶೋಧನೆಗಳು ಫಲಕಾರಿಯಾಗುತ್ತವೆ. ಶಾಸಕ ಕೆ.ಶಿವನಗೌಡ ನಾಯಕ ಅವರ ಈ ಪ್ರಯತ್ನದಿಂದ ಐ‌ಐ‌ಐಟಿ ಜಿಲ್ಲೆಗೆ ಬರುತ್ತಿದೆ. ಸಿಟಿ ಸೆಂಟರ್‌ಗೂ ಸ್ಥಳ ನೀಡುವಂತೆ ಶಾಸಕ ಶಿವರಾಜ ಪಾಟೀಲ್ ಅವರಲ್ಲಿ ಕೇಳಿದ್ದೇನೆ. ಒಟ್ಟಾರೆಯಾಗಿ ಐ‌ಐ‌ಐಟಿಯಿಂದ ಜಿಲ್ಲೆಗೆ ಅನುಕೂಲವಾಗಲಿದೆಂದರು.
ದೆಹಲಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, ಪೌರತ್ವ ಕಾಯ್ದೆ ಬಗ್ಗೆ ಹೊಸ ಚರ್ಚೆ ಸಾಧ್ಯವಿಲ್ಲವೆಂದು ಹೇಳಿದರು. ಎನ್ಆರ್‌ಸಿ ಮತ್ತು ಎನ್‌ಪಿಆರ್ ಜಾರಿಗೊಳಿಸಿದ್ದು ಕಾಂಗ್ರೆಸ್. ನಾವೇಷ್ಟೇ ಕಾನೂನು ತಂದರೂ ಇದಕ್ಕೆ ಸಂಬಂಧಿಸಿ ಭಯಭೀತಿ ಇದ್ದೇ ಇರುತ್ತದೆ. ಈ ಕಾಯ್ದೆಯಿಂದ ಮುಸ್ಲೀಂರು ದೇಶದಿಂದ ಹೊರ ಹೋಗಲು ಸಾಧ್ಯವೇ? ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಅವರು ದೇಶವನ್ನು ದಾರಿ ತಪ್ಪಿಸುವ ಕೆಲಸ ನಡೆಸಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.
ಸಚಿವರನ್ನು ಐ‌ಐ‌ಐಟಿಗೆ ಹಂಚಿಕೆಯಾದ ಜಮೀನಿನ ಮಾಲೀಕರು ಭೇಟಿಯಾಗಿ ತಮ್ಮ ಸಮಸ್ಯೆ ತೋಡಿಕೊಂಡರು.

Leave a Comment