ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿ: ಕೊಹ್ಲಿ ನಂ.೧

ನವದೆಹಲಿ, ಆ ೫- ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಬಿಡುಗಡೆ ಮಾಡಿರುವ ಟೆಸ್ಟ್ ಕ್ರಿಕೆಟ್ ಬ್ಯಾಟ್ಸ್ ಮನ್‌ಗಳ ಪಟ್ಟಿಯಲ್ಲಿ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅಗ್ರಸ್ಥಾನಕ್ಕೇರಿದ್ದಾರೆ.

ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಟೆಸ್ಟ್‌ನಲ್ಲಿ ೨೦೦ ರನ್ ಗಳಿಸುವ ಮೂಲಕ ಕೊಹ್ಲಿ ಅಗ್ರ ಸ್ಥಾನಕ್ಕೇರಿದ್ದಾರೆ. ೬೭ ಟೆಸ್ಟ್‌ನಲ್ಲಿ ಒಟ್ಟು ೯೩೪ ಅಂಕಗಳಿಸುವ ಮೂಲಕ ಅಗ್ರಸ್ಥಾನ ಗಳಿಸಿರುವ ಕೊಹ್ಲಿ, ಸ್ಮಿತ್ ಹಾಗೂ ಜೋ ರೂಟ್ ಅವರನ್ನು ಹಿಂದಿಕ್ಕಿದ್ದಾರೆ.
ಇಂದು ಬಿಡುಗಡೆಯಾಗಿರುವ ಐಸಿಸಿ ಟೆಸ್ಟ್ ಪಟ್ಟಿಯಲ್ಲಿ ೩೨ ತಿಂಗಳು ಟೆಸ್ಟ್ ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ ಭದ್ರವಾಗಿದ್ದ ಸ್ಟೀವ್ ಸ್ಮಿತ್ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಬಾಲ್ ಟ್ಯಾಂಪರಿಂಗ್ ಪ್ರಕರಣದಿಂದ ಒಂದು ವರ್ಷ ನಿಷೇಧಕ್ಕೊಳಗಾಗಿದ್ದರೂ ೫ ತಿಂಗಳಿಂದ ನಂ ೧ ಸ್ಥಾನದಲ್ಲೇ ಮುಂದುವರಿದಿದ್ದರು. ಆದರೆ ಕೊಹ್ಲಿಯ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದ ೩೧ ಅಂಕವನ್ನು ಪಡೆದಿದ್ದು ೯೦೩ ಇದ್ದ ಅವರ ಅಂಕ ೯೩೪ಕ್ಕೆ ತಲುಪಿದೆ.

೯೪೭ ಅಂಕ ಹೊಂದಿದ್ದ ಸ್ಮಿತ್ ೧೮ ಅಂಕ ಕುಸಿತ ಕಂಡು ೯೨೯ಕ್ಕೆ ಇಳಿದಿದ್ದು ೨ ನೇ ಸ್ಥಾನದಲ್ಲಿದ್ದಾರೆ. ೮೬೫ ಅಂಕವಿರುವ ಜೋ ರೂಟ್ ೩ನೇಸ್ಥಾನ, ೪ನೇ ಸ್ಥಾನದಲ್ಲಿ ಕೇನ್‌ವಿಲಿಯಮ್ಸ್(೮೪೭), ೫ ನೇ ಸ್ಥಾನದಲ್ಲಿ ಡೇವಿಡ್ ವಾರ್ನರ್(೮೨೦), ೬ ನೇಸ್ಥಾನದಲ್ಲಿ ಪೂಜಾರ(೭೯೧) ಇದ್ದಾರೆ.
೨೦೧೭ರಲ್ಲಿ ಐದನೇ ಸ್ಥಾನದಲ್ಲಿದ್ದ ಕೊಹ್ಲಿ ಈ ವರ್ಷ ಆಕರ್ಷಕ ಹಾಗೂ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ ಟೆಸ್ಟ್‌ನಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ೨೦೧೮ರ ಫೆಬ್ರವರಿಯಲ್ಲಿ ಬಿಡುಗಡೆಯಾದ ಏಕದಿನ ಹಾಗೂ ಟಿ೨೦ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕ ಪಟ್ಟಿಯಲ್ಲಿ ಕೊಹ್ಲಿ ಅಗ್ರಸ್ಥಾನದಲ್ಲಿದ್ದರು.

ಭಾರತದ ಕ್ರಿಕೆಟಿಗರಾದ ಸಚಿನ್ ತೆಂಡಲ್ಕೂರ್, ರಾಹುಲ್ ದ್ರಾವಿಡ್, ಗೌತಮ್ ಗಂಭೀರ್, ಸುನಿಲ್ ಗವಸ್ಕರ್, ವಿರೇಂದ್ರ ಸೆಹ್ವಾಗ್, ದಿಲೀಪ್ ವೆಂಗಸ್ಕರ್, ನಂತರ ವಿರಾಟ್ ಕೊಹ್ಲಿ ಅವರು ಟೆಸ್ಟ್‌ನಲ್ಲೂ ಅಗ್ರಸ್ಥಾನಕ್ಕೇರಿದ ಹೆಮ್ಮೆಯ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.

ಇಂಗ್ಲೆಂಡ್ ಆಡಿದ ೧೦೦೦ನೇ ಐತಿಹಾಸಿಕ ಪಂದ್ಯದಲ್ಲಿ ಭಾರತದ ವಿರುದ್ಧ ರೋಚಕ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹೊರತುಪಡಿಸಿ ಉಳಿದ್ಯಾವ ಆಟಗಾರರಿಂದಲೂ ನಿರೀಕ್ಷಿತ ಪ್ರದರ್ಶನ ಮೂಡಿಬರಲಿಲ್ಲ. ಟೀಂ ಇಂಡಿಯಾದ ಬ್ಯಾಟಿಂಗ್ ಪ್ರದರ್ಶನ ಸಾಕಷ್ಟು ಟೀಕೆಗೆ ಗುರಿಯಾದ ಬೆನ್ನಲೇ ಪಂದ್ಯದಲ್ಲಿ ಕೊಹ್ಲಿ ಒಟ್ಟು ೨೦೦ ರನ್ ಕಲೆ ಹಾಕುವ ಮೂಲಕ ಅಗ್ರಸ್ಥಾನ ಪಡೆದಿದ್ದಾರೆ. ಇನ್ನು ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ಏಷ್ಯಾ ತಂಡಗಳಿಗೆ ಗೆಲುವಿಲ್ಲ ಎನ್ನುವ ದಾಖಲೆ ಮುಂದುವರಿದೆ. ೧೭ ಪಂದ್ಯಗಳಲ್ಲಿ ಇಲ್ಲಿ ಏಷ್ಯನ್ ತಂಡಗಳು ಜಯ ಸಾಧಿಸಿಲ್ಲ. ಇದೊಂದು ವಿಶ್ವ ದಾಖಲೆ ಸಹ ಎನ್ನಬಹುದು.

Leave a Comment