ಐರಾವತ ಬಸ್‌ನಲ್ಲಿ ಸಾಗಿಸುತ್ತಿದ್ದ ೧೫ ಲಕ್ಷ ರೂ. ಮೌಲ್ಯದ ಬೆಳ್ಳಿದೀಪ ವಶ

ಬೆಂಗಳೂರು, ಜ. ೧೧- ಬೆಂಗಳೂರು-ವಿಜಯವಾಡ ಮಾರ್ಗದ ಐರಾವತ ಕ್ಲಬ್ ಕ್ಲಾಸ್ ವಾಹನದಲ್ಲಿ ೧೫ ಲಕ್ಷ ರೂ. ಮೌಲ್ಯದ ಬೆಳ್ಳಿಯ ದೀಪಗಳು ಹೊಸಕೋಟೆ ಟೋಲ್ ಬಳಿ ಕೆಎಸ್‌ಆರ್‌ಟಿಸಿ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ನಡೆಸಿದ ದಿಢೀರ್ ತಪಾಸಣೆಯಲ್ಲಿ ಪತ್ತೆಯಾಗಿದ್ದು ವಾಣಿಜ್ಯ ತೆರಿಗೆ ಇಲಾಖೆ ವಶಕ್ಕೆ ಒಪ್ಪಿಸಲಾಗಿದೆ.
ಹೊಸಕೋಟೆ ಟೋಲ್ ಬಳಿ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಭಾಕರ್ ರೆಡ್ಡಿ ವಿಭಾಗೀಯ ಭದ್ರತಾ ನಿರೀಕ್ಷಾ ಸಿ.ಕೆ. ರಮ್ಯ, ಸಂಚಾರ ನಿಯಂತ್ರಕ ಛಲಪತಿ ಅವರು ಬಸ್ ತಡೆದು ಪ್ರಯಾಣಿಕರ ಟಿಕೆಟ್‌ಗಳನ್ನು ಪರಿಶೀಲಿಸಿ ನಂತರ ವಾಹನ ಡಿಕ್ಕಿಯನ್ನು ತಪಾಸಣೆ ಮಾಡಲಾಯಿತು.
ಅನುಮಾನಸ್ಪದವಾಗಿ ಕಂಡು ಬಂದು ೪ ಬ್ಯಾಗ್‌ಗಳಿಗೆ ಟ್ಯಾಗ್‌ಗಳನ್ನು ಹಾಕಿರಲಿಲ್ಲ. ಈ ಬ್ಯಾಗ್‌ಗಳ ಬಗ್ಗೆ ಚಾಲಕರು ಮತ್ತು ನಿರ್ವಾಹಕರನ್ನು ತನಿಖೆಗೊಳಪಡಿಸಿದಾಗ ೬೯೯ ದೀಪಗಳು ಇವೆಯೆಂದು ಮಾಹಿತಿ ನೀಡಿದ್ದಾರೆ.
ಐರಾವತ ಕ್ಲಾಸ್ ಬಸ್‌ನಲ್ಲಿ ೪೫ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ವಿಭಾಗೀಯ ತಪಾಸಣಾ ತಂಡವು ಮುನ್ನೇಚ್ಚರಿಕೆ ವಹಿಸಿ ಪ್ರಯಾಣಿಕರಿಗೆ ತೊಂದರೆಯಾಗದಂತೆ ಪ್ರತ್ಯೇಕ ಚಾಲಕರು ಮತ್ತು ನಿರ್ವಾಹಕರು ಕರ್ತವ್ಯಕ್ಕೆ ನಿಯೋಜಿಸಿ ಬಸ್‌ನ್ನು ವಿಜಯವಾಡಕ್ಕೆ ಕಳುಹಿಸಿದ್ದಾರೆ. ಬಸ್‌ನಲ್ಲಿ ಕರ್ತವ್ಯ ನಿರ್ವಹಿಸಿದ್ದ ಚಾಲಕ ಮತ್ತು ನಿರ್ವಾಹಕರನ್ನು ತಮ್ಮ ವಶಕ್ಕೆ ಪಡೆದು ಅವರನ್ನು ಅಮಾನತುಗೊಳಿಸಲಾಗಿದೆ.
ದಿಢೀರ್ ತಪಾಸಣೆ ವೇಳೆ ಅನಧಿಕೃತ ಬೆಳ್ಳಿ ದೀಪಗಳನ್ನು ವಶಕ್ಕೆ ತೆಗೆದುಕೊಂಡು ಕರ್ತವ್ಯ ಪ್ರಜ್ಞೆ ಮೆರೆದ ವಿಭಾಗೀಯ ಅಧಿಕಾರಿಗಳನ್ನು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್ ಅಭಿನಂದಿಸಿದ್ದಾರೆ.

Leave a Comment