ಐತಿಹಾಸಿಕ ಶ್ರೀ ಕಂಚು ಮಾರೆಮ್ಮ ದೇವಿಯ ಅದ್ಧೂರಿ ರಥೋತ್ಸವ

ರಾಯಚೂರು.ಜೂ.14- ಶ್ರೀ ಶ್ರೀ ಶ್ರೀ ಮಹಾ ಮಾತೆ ಕಂಚು ಮಾರೆಮ್ಮ ದೇವಿಯ 281ನೇ ಜಾತ್ರಾ ಮಹೋತ್ಸವ ಕಾರ್ಯಕ್ರಮ ರಥೋತ್ಸವ ನಿನ್ನೆ ಸಂಜೆ ಅದ್ಧೂರಿಯಾಗಿ ನಡೆಯಿತು.
ಹರಿಜನವಾಡದ ಸವಾರಮ್ಮ ದೇವಸ್ಥಾನದಿಂದ ಕಂಚು ಮಾರೆಮ್ಮ ದೇವಸ್ಥಾನದವರೆಗೂ ರಥೋತ್ಸವ ನಡೆಸಲಾಯಿತು. 281ನೇ ಜಾತ್ರಾ ಮಹೋತ್ಸವ ಅಂಗವಾಗಿ ಅದ್ಧೂರಿ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಭಕ್ತರ ಮಧ್ಯೆ ಕಂಚು ಮಾರೆಮ್ಮ ದೇವಿಯ ರಥೋತ್ಸವ ಅತ್ಯಂತ ವೈಭವದಿಂದ ನಡೆಸಲಾಯಿತು. ಐತಿಹಾಸಿಕ ಪಾರಂಪರಿಕ ಕಂಚು ಮಾರೆಮ್ಮ ದೇವಸ್ಥಾನಕ್ಕೆ ಹರಿಜನವಾಡ ಮಾತ್ರವಲ್ಲದೇ, ನಗರದ ವಿವಿಧ ಭಾಗದಿಂದಲೂ ಜನ ಆಗಮಿಸಿದ್ದರು.
ರಥೋತ್ಸವಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ವಸಂತಕುಮಾರ, ನಗರಸಭೆ ಸದಸ್ಯರು ಹಾಗೂ ದೇವಸ್ಥಾನ ಸಮಿತಿ ಚಾಲನೆ ನೀಡಿತು. ರಥೋತ್ಸವ ಹಿನ್ನೆಲೆ, ಭಾರೀ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ದೇವಸ್ಥಾನ ಸಮಿತಿಯಿಂದ ಶಾಂತಿ, ಸುವ್ಯವಸ್ಥೆಯಿಂದ ರಥೋತ್ಸವ ನಿರ್ವಹಣೆಗೆ ವಿಶೇಷ ಎಚ್ಚರಿಕೆ ವಹಿಸಲಾಗಿತ್ತು. ಅನೇಕ ಭಕ್ತಾದಿಗಳು ಸುಸಜ್ಜಿತ, ಅಲಂಕೃತ ರಥವನ್ನು ಭಕ್ತಿಪೂರ್ವಕವಾಗಿ ಮುಂದೆ ಸಾಗುವಂತೆ ನೆರವಾದರು.
ದಾರಿಯುದ್ಧಕ್ಕೂ ಶ್ರೀ ಮಹಾಮಾತೆ ಕಂಚು ಮಾರೆಮ್ಮ ದೇವಿ ಜಯಘೋಶ ಕೇಳುತ್ತಿದ್ದವು. ಮಹಿಳೆಯರು, ಮಕ್ಕಳು, ವಯೋವೃದ್ಧರು, ಸಾಲುಗಟ್ಟಿ ರಥೋತ್ಸವ ವೀಕ್ಷಿಸಿದರು. ಕಂಚು ಮಾರೆಮ್ಮ ಜಾತ್ರಾ ಮಹೋತ್ಸವ ಪ್ರತಿ ವರ್ಷ ಅತ್ಯಂತ ಅದ್ಧೂರಿಯಾಗಿ ನಿರ್ವಹಿಸುವ ಮೂಲಕ ದೇವಸ್ಥಾನ ಸಮಿತಿ ಕಾರ್ಯ ಅತ್ಯಂತ ಶ್ಲಾಘನೀಯವಾದದ್ದು. ಕಳೆದ ಸಲಕ್ಕಿಂತ ಈ ವರ್ಷ ಜಾತ್ರಾ ಮಹೋತ್ಸವವೂ ಮತ್ತಷ್ಟು ವೈಭವದಿಂದ ನಿರ್ವಹಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ವಸಂತಕುಮಾರ, ಮಾಡಗಿರಿ ನರಸಿಂಹಲು, ನಗರಸಭೆ ಸದಸ್ಯ ನಾಗರಾಜ. ಜೆ.ಮಾರೆಪ್ಪ, ರಾಮಸ್ವಾಮಿ, ಅಮರೇಶ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Comment