ಐತಿಹಾಸಿಕ ಪಿಂಕ್ ಬಾಲ್ ಪಂದ್ಯಕ್ಕೆ ಭಾರತ- ಬಾಂಗ್ಲಾ ಸಜ್ಜು

ಕೋಲ್ಕತ್ತಾ, ನ. ೨೧- ಭಾರತ ಮತ್ತು ಬಾಂಗ್ಲಾ ದೇಶ ತಂಡಗಳ ನಡುವಿನ ಕೋಲ್ಕತ್ತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಾಳೆ ಹಗಲು ರಾತ್ರಿ ಟೆಸ್ಟ್ ಪಂದ್ಯ ನಡೆಯಲಿದೆ. ಈಗಾಗಲೇ ನಾಳಿನ ಪಂದ್ಯಕ್ಕಾಗಿ ಟಿಕೆಟ್ ಗಳು ಭರ್ತಿಯಾಗಿದ್ದು ಈ ಐತಿಹಾಸಿಕ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲ್ಲಿನಲ್ಲಿ ನಿಂತಿದ್ದಾರೆ.
ಈ ಪಂದ್ಯಕ್ಕಾಗಿ ಪಿಂಕ್ ಬಾಲ್ ಬಳಸುತ್ತಿರುವುದು ವಿಶೇಷವೆನಿಸಿದೆ. ಈ ಪಿಂಕ್ ಬಾಲ್ ಬಳಸುತ್ತಿರುವುದರಿಂದ ದೊಡ್ಡ ಸವಾಲು ಎದುರಾಗಿದೆ ಎಂದು ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಈ ಅಭೂತ ಪೂರ್ವ ಕ್ಷಣವನ್ನು ಎದುರಿಸಲು ಭಾರತ ತಂಡ ಉತ್ಸುಕವಾಗಿದೆ. ಹಗಲು ರಾತ್ರಿ ಪಂದ್ಯದಲ್ಲಿ ಫಿಲ್ಡಿಂಗ್ ಮಾಡುವುದು ಕಷ್ಟಕರವಾಗಿದ್ದು ಪಿಂಕ್ ಬಾಲ್ ಬಳಸುತ್ತಿರುವುದರಿಂದ ಇದಕ್ಕೆ ಹೊಂದಿಕೊಳ್ಳಲು ಆಟಗಾರರಿಗೆ ಕಾಲಾವಕಾಶ ಬೇಕಾಗಿದೆ. ಈ ಪಿಂಕ್ ಬಾಲ್ ಬಳಸುತ್ತಿರುವುದರಿಂದ ಕ್ರಿಕೆಟ್ ಅಭಿಮಾನಿಗಳಲ್ಲಿ ಆಟಗಾರರು ಫೀಲ್ಡಿಂಗ್ ಹೇಗೆ ಮಾಡುತ್ತಾರೆ ಎಂಬ ಬಗ್ಗೆ ಕಾತುರದಿಂದ ನಿರೀಕ್ಷಿಸುತ್ತಿದ್ದಾರೆ ಎಂದು ಹೇಳಿದರು.
ನಾಳೆ ಪಂದ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ತಂಡದ ಬಾಟ್ಸ್ ಮನ್ ಗಳ ಜೊತೆ ವಿರಾಟ್ ಕೊಹ್ಲಿ ಚರ್ಚೆ ನಡೆಸಿದ್ದು ಬ್ಯಾಟಿಂಗ್ ತಂತ್ರಗಾರಿಕೆಯನ್ನು ಬದಲಾಯಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಆಟಗಾರರಿಗೆ ಹೇಳಿದ್ದಾರೆ. ಪಿಂಕ್ ಬಾಲ್ ನಲ್ಲಿ ಆಡುವುದು ನಿಜವಾಗಿಯೂ ವಿಭಿನ್ನ ಅನುಭವವಾಗಿದೆ. ತಂಡದ ಆಟಗಾರರು ಅಭ್ಯಾಸದ ವೇಳೆ ಈ ತಂತ್ರಗಾರಿಕೆಯ ಬಗ್ಗೆ ಹೆಚ್ಚಿನ ಗಮನಹರಿಸಿದ್ದಾರೆ ಎಂದು ಹೇಳಿದರು.
2 ಟೆಸ್ಟ್ ಗಳ ಕ್ರಿಕೆಟ್ ಸರಣಿಯಲ್ಲಿ ಭಾರತ ಮೊದಲ ಪಂದ್ಯದಲ್ಲಿ ಭರ್ಜರಿ ಜಯ ದಾಖಲಿಸಿದ್ದು, ಸರಣಿ ಕೈ ವಶಮಾಡಿಕೊಳ್ಳುವ ತವಕದಲ್ಲಿದೆ. ಆದರೆ ನಾಳೆಯಿಂದ ಆರಂಭವಾಗುವ ರಾತ್ರಿ ಹಗಲಿನ ಈ ಪಂದ್ಯದಲ್ಲಿ ಉಭಯ ತಂಡಗಳ ಆಟಗಾರರ ಪ್ರದರ್ಶನ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಬಿಸಿಸಿಐ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡ ನಂತರ ಸೌರವ್ ಗಂಗೂಲಿ, ಪಿಂಕ್ ಬಾಲ್ ಬಳಕೆಗೆ ಒತ್ತು ನೀಡಿದ್ದರು.

ಪೋಟೋ
ನಾಳೆಯಿಂದ ಕೊಲ್ಕತ್ತಾದಲ್ಲಿ ಭಾರತ ಮತ್ತು ಬಾಂಗ್ಲಾ ದೇಶಗಳ ನಡುವಿನ 2ನೇ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಭಾರತೀಯ ತಂಡದ ಆಟಗಾರರಾದ ಅಜಿಂನ್ ಕೆ. ರೆಹಾನೆ, ನಾಯಕ ವಿರಾಟ್ ಕೊಹ್ಲಿ, ಮಯಾಂಕ್ ಅಗರವಾಲ್ ಹಾಗೂ ರವೀಂದ್ರ ಜಡೇಜ ಅಭ್ಯಾಸ ನಡೆಸುತ್ತಿರುವುದು. ( 21 cricket)

Leave a Comment