ಐತಿಹಾಸಿಕ ಖಾಸಬಾವಿ: ರಾಶಿ ಗಟ್ಟಲೇ ಕಸ ಸಂಗ್ರಹ

ರಾಯಚೂರು.ಆ.13- ಐತಿಹಾಸಿಕ ಖಾಸಬಾವಿಯಲ್ಲಿ ರಾಶಿ ಗಟ್ಟಲೇ ಕಸ ಸಂಗ್ರಹವಾಗಿದ್ದರೂ ಸ್ವಚ್ಛತೆಗೆ ನಗರಸಭೆ ಕಾಳಜಿ ವಹಿಸದಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗುವಂತಾಗಿದೆ.
ಗಣೇಶ ಚತುರ್ಥಿಗೆ ದಿನಗಣನೆ ಸಮೀಪಿಸುತ್ತಿರುವ ಹಿನ್ನೆಲೆ, ನಗರದ ವಿವಿಧ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಲ್ಪಡುವ ಗಣೇಶ ಮೂರ್ತಿಗಳನ್ನು ಖಾಸಬಾವಿಯಲ್ಲಿ ಅದ್ಧೂರಿಯಾಗಿ ವಿಸರ್ಜನೆ ಮಾಡುವುದು ವಾಡಿಕೆ. ಚತುರ್ಥಿಗೆ ಇನ್ನು 11 ದಿನಗಳು ಬಾಕಿಯಿದ್ದರೂ, ಐತಿಹಾಸಿಕ ಬಾವಿಯ ನಾಲ್ಕು ಬದಿಯಲ್ಲಿ ಸಂಗ್ರಹಗೊಂಡಿರುವ ರಾಶಿಗಟ್ಟಲೇ ಕಸ ವಿಲೇವಾರಿ ಸೇರಿ ಶುಚಿತ್ವಕ್ಕೆ ಕನಿಷ್ಟ ಕಾಳಜಿವಹಿಸದ ನಗರಸಭೆ ನಿಷ್ಕಾಳಜಿ ನಡೆ ಗಜಾನನ ಸಮಿತಿ ಸಂಚಾಲಕರನ್ನು ಕೆರಳುವಂತೆ ಮಾಡಿದೆ. ಪ್ರತಿ ವರ್ಷ ಗಣೇಶ ಚತುರ್ಥಿ ಅಂಗವಾಗಿ ಐತಿಹಾಸಿಕ ಖಾಸಬಾವಿ ಸ್ವಚ್ಛಗೊಳಿಸಿ ಮೂರ್ತಿಗಳ ವಿಸರ್ಜನೆಗೆ ಸಕಲ ಸಿದ್ಧತೆ ಕಾರ್ಯ ಕೈಗೊಳ್ಳಲಾಗುತ್ತಿತ್ತು.
ಪ್ರಸಕ್ತ ಸಾಲಿನ ಚತುರ್ಥಿಗೆ ದಿನಗಣನೆ ಬಾಕಿಯಿದ್ದರೂ ಉದ್ದೇಶಿತ ಬಾವಿಯಲ್ಲಿ ರಾಶಿಗಟ್ಟಲೆ ಸಂಗ್ರಹಗೊಂಡಿರುವ ಕಸ ವಿಲೇವಾರಿಗೆ ನಗರಸಭೆ ಅಧಿಕಾರಿಗಳಾಗಲಿ, ಸಂಬಂಧಪಟ್ಟ ಸದಸ್ಯರಾಗಲಿ ಜಾಗೃತವಹಿಸದಿರುವುದು ಗಮನಾರ್ಹವಾಗಿದೆ. ಇತ್ತೀಚಿನ ದಿನಮಾನದಲ್ಲಿ ಖಾಸಬಾವಿಯಲ್ಲಿ ಬೇಲಿ ಬೆಳೆದು ಅಸ್ವಚ್ಛತೆ ತಾಂಡವಾಡುತ್ತಿರುವಂತಾಗಿರುವುದು ಈ ಬಗ್ಗೆ ನಗರಸಭೆ ಯಾವೊಬ್ಬಾಧಿಕಾರಿ ವಾಸ್ತವ ಪರಿಶೀಲನೆಗೆ ಎಚ್ಚೇಳದಿರುವುದು ನಿವಾಸಿಗಳ ಕಣ್ಣು ಕೆಂಪಾಗುವಂತೆ ಮಾಡಿದೆ.
ಖಾಸಬಾವಿ ಸ್ವಚ್ಛತೆಗೆ ಹಲವು ಬಾರಿ ಮನವಿ ಸಲ್ಲಿಸಿದರೂ, ಸ್ವಚ್ಛತೆಗೆ ಎಚ್ಚೇಳದ ನಗರಸಭೆ ಬೇಜವಾಬ್ದಾರಿಗೆ ಸಮಿತಿ ಪದಾಧಿಕಾರಿಗಳು ಹಿಡೀಶಾಪ ಹಾಕುವಂತಾಗಿದೆ. ಬಾವಿಯಲ್ಲಿ ಕಸ-ಕಡ್ಡಿ ಹಾಕದಂತೆ ಸುತ್ತಮುತ್ತಲಿನ ಸ್ಥಳೀಯ ನಿವಾಸಿಗಳು ಮನವಿ ಮಾಡಿದರೂ, ಕ್ಯಾರೆ ಎನ್ನದ ಮೇಲಾಡಳಿತ ಹಳೆ ಚಾಳಿ ಮುಂದುವರೆಸಿ, ಬಾವಿಯನ್ನು ಕಸದ ಕೂಪವಾಗಿ ಮಾರ್ಪಡುವಂತೆ ಮಾಡಲಾಗಿದೆ. ನಿದ್ರೆಗೆ ಜಾರಿರುವ ನಗರಸಭೆ ಆಡಳಿತ ಮಂಡಳಿ ತಕ್ಷಣವೇ ಎಚ್ಚೆತ್ತು ಐತಿಹಾಸಿಕ ಖಾಸಬಾವಿ ಸ್ವಚ್ಛತೆಗೆ ಮುಂದಾಗಬೇಕೆನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

Leave a Comment