ಐಟಿ ಸಲ್ಲಿಕೆಗೆ ಆಧಾರ್ ಕಡ್ಡಾಯವಿಲ್ಲ: ಸುಪ್ರೀಂ

ನವದೆಹಲಿ, ಏ. ೨೧ – ವರಮಾನ ತೆರಿಗೆ ರಿಟರ್ನ್ ಸಲ್ಲಿಸಲು ಆಧಾರ್ ಕಾರ್ಡನ್ನು ಕಡ್ಡಾಯಗೊಳಿಸಬೇಕೇ ಬೇಡವೇ ಎಂಬ ವಿಚಾರದಲ್ಲಿ ಸುಪ್ರೀಂಕೋರ್ಟ್ ಮುಂದಿನ ವಾರ ತೀರ್ಮಾನ ಕೈಗೊಳ್ಳಲಿದೆ.

ಐಟಿ ರಿಟರ್ನ್ ಸಲ್ಲಿಸಲು ಆಧಾರ್ ಕಡ್ಡಾಯಗೊಳಿಸುವ ಅಗತ್ಯವೇನಿತ್ತು ಎಂದು ಸರ್ಕಾರವನ್ನು ಪ್ರಶ್ನಿಸಿರುವ ಸುಪ್ರೀಂಕೋರ್ಟ್ ಈ ಕ್ರಮವನ್ನು ಸಮರ್ಥಿಸಿಕೊಳ್ಳಬೇಕೆಂದು ಸರ್ಕಾರಕ್ಕೆ ಸೂಚಿಸಿದೆ.

ಸುಪ್ರೀಂಕೋರ್ಟ್ ಆಧಾರ್ ಕಾರ್ಡನ್ನು ಒಂದು ಆಯ್ಕೆಯಾಗಿಟ್ಟುಕೊಳ್ಳಬೇಕೆಂದು ತೀರ್ಪು ಕೊಟ್ಟ ನಂತರವೂ ನೀವು ಆಧಾರ್ ಕಾರ್ಡನ್ನು ಕಡ್ಡಾಯ ಮಾಡಿರುವುದರ ಉದ್ದೇಶವೇನೆಂದು ಕೋರ್ಟ್ ಸರ್ಕಾರವನ್ನು ಪ್ರಶ್ನಿಸಿದೆ.

ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಉತ್ತರಿಸಿ ಪ್ಯಾನ್ ಕಾರ್ಡ್ ನಂಬರ್‌ಗಳನ್ನು ಶೆಲ್ ಕಂಪನಿಗಳಿಂದ ಹಣ ವರ್ಗಾವಣೆಗೆ ಬಳಸಿಕೊಳ್ಳಲಾಗುತ್ತಿದೆ. ಇದನ್ನು ತಪ್ಪಿಸಲು ಆಧಾರ್ ಕಾರ್ಡನ್ನು ಕಡ್ಡಾಯ ಮಾಡುವುದೊಂದೇ ಬಾಕಿ ಉಳಿದಿರುವ ದಾರಿ ಎಂದು ವಿವರಿಸಿದ್ದಾರೆ.

ಕಳೆದ ಮಾರ್ಚ್ 22 ರಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಇನ್ನು ಮುಂದೆ ಆಧಾರ್ ಒಂದೇ ದೇಶದಲ್ಲಿ ಬಳಸುವ ಗುರುತಿನ ಚೀಟಿಯಾಗಿರಲಿದೆ, ವರಮಾನ ತೆರಿಗೆ ರಿಟರ್ನ್ ಸಲ್ಲಿಸಲು ಅದನ್ನು ಕಡ್ಡಾಯ ಮಾಡಲಾಗಿದೆ. ಇದರಿಂದ ತೆರಿಗೆ ತಪ್ಪಿಸಿ ಸುಳ್ಳು ಲೆಕ್ಕ ಕೊಡುವುದನ್ನು ತಡೆಯಬಹುದೆಂದು ಹೇಳಿದ್ದರು.

ಮಾರ್ಚ್ 27 ರಂದು ಸುಪ್ರೀಂಕೋರ್ಟ್ ನೀಡಿದ ಆದೇಶದಂತೆ ಸಾಮಾಜಿಕ ಕಲ್ಯಾಣ ಯೋಜನೆಯ ಪ್ರಯೋಜನ ಪಡೆಯಲು ಆಧಾರ್ ಕಡ್ಡಾಯ ಮಾ‌ಡಬಾರದೆಂಬ ಮಹತ್ವದ ಆದೇಶ ನೀಡಿತ್ತು. ಆದರೆ, ಬೇರೆ ಯೋಜನೆಗಳಿಗೆ ಆಧಾರ್ ಬೇಕಾಗಬಹುದೆಂದು ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠ ಹೇಳಿತ್ತು.

ಆಗಸ್ಟ್ 11, 2015ರ ಆದೇಶದಲ್ಲಿ ಸುಪ್ರೀಂಕೋರ್ಟ್ ಆಧಾರ್ ಕಾರ್ಡನ್ನು ಸಾರ್ವಜನಿಕ ವಿತರಣಾ ವ್ಯವಸ್ಥೆಯಿಂದ ಆಹಾರ ಧಾನ್ಯ ಪಡೆಯಲು ಮತ್ತು ಎಲ್‌ಪಿಜಿ ಸಿಲಿಂಡರ್ ಪಡೆಯಲು ಮಾತ್ರ ಬಳಸಬೇಕೆಂದು ಆದೇಶ ನೀಡಿತ್ತು. ಅಕ್ಟೋಬರ್ 1, 2015 ರಂದು ತನ್ನ ಆದೇಶವನ್ನು ಮಾರ್ಪಡಿಸಿ ನರೇಗ, ವೃದ್ಧಾಪ್ಯ ಪಿಂಚಣಿ ಯೋಜನೆ, ಪ್ರಾವಿಡೆಂಟ್ ಫಂಡ್, ಪ್ರಧಾನಿ ಜನಧನ್ ಯೋಜನೆಗಳಿಗೂ ಬಳಸಬಹುದೆಂದು ತೀರ್ಪು ನೀಡಿತ್ತು.

Leave a Comment