ಐಟಿ ದಾಳಿ 2,000 ಕೋಟಿ ರೂ. ಅಕ್ರಮ ಹಣ ಪತ್ತೆ

ಹೈದರಾಬಾದ್, ಫೆ. ೧೪- ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಅಧಿಕಾರಿಗಳು, ಆಂಧ್ರ ಪ್ರದೇಶ, ತೆಲಂಗಾಣ, ದೆಹಲಿ, ಪುಣೆ ಸೇರಿದಂತೆ, ದೇಶದ ವಿವಿಧ ಭಾಗಗಳಲ್ಲಿ ನಡೆಸಿದ ಮಿಂಚಿನ ದಾಳಿಯಲ್ಲಿ 2 ಸಾವಿರ ಕೋಟಿ ರೂ. ಗಳಿಗೂ ಅಧಿಕ ಮೊತ್ತದ ದಾಖಲೆಗಳಿಲ್ಲದ ಅಕ್ರಮ ಹಣ ಪತ್ತೆಯಾಗಿದ್ದು, ರಾಜಕಾರಣಿಗಳು ಮತ್ತು ಅಧಿಕಾರಗಳ ವಲಯದಲ್ಲಿ ಭಾರೀ ಸಂಚಲನ ಉಂಟುಮಾಡಿದೆ.
ಹೈದರಾಬಾದ್, ವಿಜಯವಾಡ, ವಿಶಾಖಪಟ್ಟಣ, ಪುಣೆ, ದೆಹಲಿ ನಗರಗಳಲ್ಲಿ ಅಧಿಕಾರಿಗಳು ಏಕಕಾಲಕ್ಕೆ ಗುತ್ತಿಗೆದಾರರು, ಉಪಗುತ್ತಿಗೆದಾರರು ಹಾಗೂ ಪ್ರಮುಖ ವ್ಯಕ್ತಿಗಳ ಮನೆ ಹಾಗೂ ಕಚೇರಿಗಳು ಸೇರಿದಂತೆ, ಸುಮಾರು 40 ಕಡೆ ಕಳೆದ ವಾರ ದಾಳಿ ನಡೆಸಿ, ಬೃಹತ್ ಪ್ರಮಾಣದ ಲೆಕ್ಕಪತ್ರಗಳಿಲ್ಲದ ಹಣವನ್ನು ಜಪ್ತಿ ಮಾಡಿದ್ದಾರೆ. ಈ ದಾಳಿಗಳಿಂದ ವಿಶೇಷವಾಗಿ ಆಂಧ್ರದ ರಾಜಕೀಯದಲ್ಲಿ ತಲ್ಲಣ ಉಂಟಾಗಿದೆ. ಮಾಜಿ ಮುಖ್ಯಮಂತ್ರಿ ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಅವರ ಮಾಜಿ ಆಪ್ತ ಕಾರ್ಯದರ್ಶಿ ಪೆಂಡ್ಯಾಲ ಶ್ರೀನಿವಾಸ್ ಅವರ ನಿವಾಸದ ಮೇಲೂ ಕೇಂದ್ರದ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಅಲ್ಲದೆ, ಕಡಪ ಜಿಲ್ಲೆಯ ಪಿಡಿಪಿ ಅಧ್ಯಕ್ಷ ಶ್ರೀನಿವಾಸುಲು ರೆಡ್ಡಿ ಮತ್ತು ಇತರ ಕೆಲವು ಗುತ್ತಿಗೆದಾರರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ಮಾಡಿರುವುದು ಹಲವು ರೀತಿಯ ವ್ಯಾಖ್ಯಾನಗಳಿಗೆ ವೇದಿಕೆಯಾಗಿದೆ.
ನಾಯ್ಡು ಅವರ ಮಾಜಿ ಆಪ್ತ ಕಾರ್ಯದರ್ಶಿ ಶ್ರೀನಿವಾಸ್ ಅವರ ವಿಜಯವಾಡ ನಿವಾಸದ ಮೇಲೆ ಐಟಿ ಅಧಿಕಾರಿಗಳು 5 ದಿನಗಳ ಕಾಲ ನಿರಂತರ ದಾಳಿ ನಡೆಸಿ, ಹಲವಾರು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದಾರೆ. ಬೋಯನಪಲ್ಲಿ ಟಿಡಿಪಿ ಮುಖಂಡ ವಿನೋದ್ ಕುಮಾರ್ ಅವರ ಸಹೋದರ ಬೋಯನಪಲ್ಲಿ ಶ್ರೀನಿವಾಸ್ ರಾವ್ ಅವರ ನಿವಾಸದ ಮೇಲೂ ದಾಳಿ ನಡೆದಿದೆ.
ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿರುವ ಪ್ರಮುಖ ಮೂರು ಮೂಲಭೂತ ಸೌಕರ್ಯ ಕಂಪನಿಗಳ ಮೇಲೂ ಸಿಬಿಡಿಟಿ ಅಧಿಕಾರಿಗಳು ದಾಳಿ ನಡೆಸಿ, ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಬೋಗಸ್ ಗುತ್ತಿಗೆದಾರರ ಮುಖಾಂತರ ಹಣ ವರ್ಗಾವಣೆಯಾಗುತ್ತಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇ-ಮೇಲ್, ವಾಟ್ಸಪ್ ಸಂದೇಶ ಹಾಗೂ ವಿದೇಶಿ ವಹಿವಾಟು ಕುರಿತ ವಿವರಣೆ ಇಲ್ಲದಂತಹ ಕಾಗದ ಪತ್ರಗಳು ಸೇರಿದಂತೆ, ಸಾಕ್ಷ್ಯಾಧಾರಗಳನ್ನು ಅಧಿಕಾರಿಗಳು ತನಿಖೆ ವೇಳೆ ವಶಕ್ಕೆ ಪಡೆದಿದ್ದಾರೆ.
ಪ್ರಾಥಮಿಕ ಅಂದಾಜಿನ ಪ್ರಕಾರ ಸುಮಾರು 2 ಸಾವಿರ ಕೋಟಿ ರೂ. ಗಳ ಅಕ್ರಮ ನಗದು ಪತ್ತೆಯಾಗಿದ್ದು, 2 ಕೋಟಿಗೂ ಅಧಿಕ ಮೊತ್ತದ ವಹಿವಾಟುಗಳನ್ನು ಯಾವುದೇ ಬ್ಯಾಂಕ್ ಖಾತೆ ಹಾಗೂ ತೆರಿಗೆ ಲೆಕ್ಕಪರಿಶೋಧನೆಗೆ ಸಿಗದಂತೆ, ವಹಿವಾಟು ನಡೆಸಿರುವುದು ಪತ್ತೆಯಾಗಿದೆ ಎಂದು ಅಧಿಕಾರಿಗಳು ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಲವಾರು ಕೋಟಿ ರೂ. ಗಳ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದು, ಅಧಿಕಾರಿಗಳು ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದ್ದಾರೆ.
* ಆಂಧ್ರ, ತೆಲಂಗಾಣ ಸೇರಿ ಹಲವೆಡೆ ಐಟಿ ಅಧಿಕಾರಿಗಳ ದಾಳಿ.
* ಚಂದ್ರಬಾಬು ನಾಯ್ಡು ಮಾಜಿ ಆಪ್ತ ಕಾರ್ಯದರ್ಶಿಗೂ ಕಂಟಕ.
* ಆಂಧ್ರ ರಾಜಕಾರಣದಲ್ಲಿ ತಲ್ಲಣ ಮೂಡಿಸಿದ ದಾಳಿ ಪ್ರಕರಣ.
* ಗುತ್ತಿಗೆದಾರರು ಹಾಗೂ ಉದ್ದಿಮೆದಾರರಿಗೂ ಐಟಿ ಬಿಸಿ.
* ಒಟ್ಟು 40 ಕಡೆಗಳಲ್ಲಿ ಏಕಕಾಲಕ್ಕೆ ಮಿಂಚಿನ ದಾಳಿ.
* ದಾಖಲೆ ಪತ್ರಗಳ ಸತ್ಯಾಸತ್ಯತೆ ಪರಿಶೀಲಿಸುತ್ತಿರುವ ಅಧಿಕಾರಿಗಳು.

Leave a Comment