ಐಟಿ ದಾಳಿಯ ಹಿಂದೆ ಷಾ, ಮೋದಿ ಷಡ್ಯಂತ್ರ: ಸಿಎಂ ಸಿದ್ದರಾಮಯ್ಯ

(ನಮ್ಮ ಪ್ರತಿನಿಧಿಯಿಂದ)
ಕಲಬುರಗಿ, ಆ. ೧೩: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದವರನ್ನು ಗುರಿಯಾಗಿಟ್ಟು ಕೊಂಡು ಆದಾಯ ತೆರಿಗೆ ಇಲಾಖೆ(ಐಟಿ) ದಾಳಿ ನಡೆಸುವದರ ಹಿಂದೆ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಷಡ್ಯಂತ್ರವಿದೆ ಇಂತಹ ಬೆದರಿಕೆಗೆ ಕಾಂಗ್ರೆಸ್ ಪಕ್ಷ ಹೆದರುವದಿಲ್ಲ  ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಹೇಳಿದರು.

ಅವರು ಆಳಂದನಲ್ಲಿ  ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆಗೆ ಆಗಮಿಸಿ ಹೆಲಿಪ್ಯಾಡ್‌ದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಇಂಧನ ಸಚಿವ ಡಿ.ಕೆ. ಶಿವಕುಮಾರ, ರಮೇಶ ಜಾರಕಿಹೋಳಿ, ಲಕ್ಷ್ಮೀ ಹೆಬ್ಬಾಕರ, ಗೊವಿಂದರಾಜ ಸೇರಿದಂತೆ ಕಾಂಗ್ರೆಸ್ ಪಕ್ಷದವರನ್ನೆ ಆದಾಯ ತೆರಿಗೆ ಇಲಾಖೆ ಗುರಿ ಮಾಡುತ್ತಿದೆ. ಹಾಗಾದರೆ ಬಿಜೆಪಿ ಪಕ್ಷದವರು ಸತ್ಯ ಹರಿಶ್ಚಂದ್ರನ ವಂಶದವರೇ ಎಂದು ಪ್ರಶ್ನಿಸಿದರು. ಬಿಜೆಪಿ ಸಾಮಾಜಿಕ ನ್ಯಾಯದ ವಿರೋಧಿ ಪಕ್ಷ. ದಲಿತ, ಅಲ್ಪಸಂಖ್ಯಾತರ, ಹಿಂದುಳಿದ ವರ್ಗಗಳು ಈಗಲೂ ಕಾಂಗ್ರೆಸ್ ಪಕ್ಷದೊಂದಿಗೆ ಇದ್ದಾರೆ. ಸಾಮಾಜಿಕ ಭದ್ರತೆ ಇಲ್ಲದವರು ಮಾತ್ರ ಬಿಜೆಪಿಯವರು ಎಂದರು.

ಅಮಿತ ಶಾಹಾ ಅವರು ಮೂರು ದಿನ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಅವಧಿಗೆ ಮುನ್ನ ಚುನಾವಣೆ ನಡೆಯುತ್ತದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿ ಕಾಂಗ್ರೆಸ್ ಪಕ್ಷ ಪೂರ್ಣಾವಧಿ ಅಧಿಕಾರ ನಡೆಸುತ್ತದೆ. ಅಮಿತ ಶಹಾ ಮತ್ತು ನರೇಂದ್ರ ಮೋದಿ ಇಲ್ಲಿಯೇ ಠಿಕಾಣಿ ಹೂಡಲಿ ೨೦೧೮ರ ಚುನಾವಣೆಯಲ್ಲಿ  ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುವದು ಖಚಿತ. ನಮಗೆ ಬೆದರಿಕೆಯಿಲ್ಲ ಎಂದರು. ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಆಗುತ್ತಾರೆ ಎಂದು ಜನಾರ್ಧನ ಪೂಜಾರಿ ಅವರು  ಹೇಳಿಕೆ ನೀಡಿದ್ದಾರೆ ಎಂಬ ಪ್ರಶ್ನೆಗೆ ಶಾಸಕಾಂಗ ಸಭೆ ಮತ್ತು ಪಕ್ಷದ ಹೈಕಮಾಂಡ್ ಈ ಬಗ್ಗೆ ನಿರ್ಣಯ ತೆಗೆದುಕೊಳ್ಳುತ್ತದೆ ಅವರ ತಿರ್ಮಾನ ಅಂತಿಮ ಅಲ್ಲ ಎಂದು ಪ್ರತಿಕ್ರಿಯೆ ನೀಡಿದರು.

ನಮ್ಮ ಹತ್ತಿರ ಇರುವದು ಸೂಜಿ ಕತ್ತರಿಯಲ್ಲ, ಬಿಜೆಪಿಯವರ ಹತ್ತಿರ ಕತ್ತರಿ ಇದೆ. ನಾವು ಹೊಲಿಯುವ ಕೆಲಸ ಮಾಡುತ್ತೇವೆ. ಅವರು ಕತ್ತರಿಸುವ ಕೆಲಸ ಮಾಡುತ್ತಾರೆ ಎಂದು ವೀರಶೈವ ಮತ್ತು ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾಪನೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ ಕಾನೂನು ಚೌಕಟ್ಟಿನಲ್ಲಿ ಏನು ಮಾಡಬೇಕು ಅದನ್ನೆ ಮಾಡುತ್ತೇವೆ ಎಂದರು.

ಚಿತ್ರನಟ ಉಪೇಂದ್ರ ಅವರು ಹೊಸ ಪಕ್ಷ ಕಟ್ಟುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ,ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ  ಅವಕಾಶವಿದೆ. ಯಾರು  ಬೇಕಾದರೂ ರಾಜಕೀಯ ಪಕ್ಷ ಕಟ್ಟಬಹುದು ಅದಕ್ಕೆ ನಮ್ಮ ಸ್ವಾಗತವಿದೆ ವಿರೋಧವಿಲ್ಲ ಎಂದರು.

ಕಾಂಗ್ರೆಸ್ ಲೋಕಸಭಾ ಸಂಸದಿಯ ನಾಯಕ ಮಲ್ಲಿಕಾರ್ಜುನ ಖರ್ಗೆ,ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ, ಆಳಂದ ಶಾಸಕ ಬಿ.ಆರ್. ಪಾಟೀಲ, ಗಡಿನಾಡು ಪ್ರಾಧಿಕಾರದ ಅಧ್ಯಕ್ಷ ಬಾಬುರಾವ ಚಿಂಚನಸೂರ, ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಮಾಲೀಕಯ್ಯ ಗುತ್ತೇದಾರ,ಪ್ರಾದೇಶಿಕ ಆಯುಕ್ತ ಹರ್ಷಗುಪ್ತಾ, ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ, ಜಿಪಂ ಸಿಇಓ ಹೆಪ್ಸಿಬಾರಾಣಿ ಕೊರ್ಲಪಾಟಿ, ಎಸ್‌ಪಿ ಎನ್ ಶಶಿಕುಮಾರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

Leave a Comment