ಐಎಂಎ ಸಂಸ್ಥೆಯ ಏಳು ನಿರ್ದೇಶಕರು ಎಸ್ಐಟಿ ವಶಕ್ಕೆ; ತೀವ್ರಗೊಂಡ ತನಿಖೆ

ಬೆಂಗಳೂರು, ಜೂನ್ 13 – ಐಎಂಎ ಜ್ಯುವೆಲ್ಲರ್ಸ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಸಂಸ್ಥೆಯ ಏಳು ಜನ ನಿರ್ದೇಶಕರನ್ನು ಕರ್ಮಷಿಯಲ್ ಸ್ಟ್ರೀಟ್ ಪೊಲೀಸರು ಬಂಧಿಸಿದ್ದು, 10 ದಿನಗಳ ಕಾಲ ಅವರನ್ನು ಎಸ್ಐಟಿ ವಶಕ್ಕೆ ಪಡೆಯಲಾಗಿದೆ.

ನಿಜಾಮುದ್ದೀನ್ ಖಾನ್, ನಾಸಿರ್ ಹುಸೇನ್, ನವೀದ್ ಅಹ್ಮದ್, ಅರ್ಷದ್ ಖಾನ್, ವಾಸಿಂ, ಅನ್ಸರ್ ಪಾಷಾ ಮತ್ತು ದಾದಾ ಪೀರ್ ಬಂಧಿತ ಸಂಸ್ಥೆಯ ನಿರ್ದೇಶಕರು. ಕಂಪನಿ ಮಾಲೀಕ ಮುಹ್ಮದ್ ಮನ್ಸೂರ್ ಖಾನ್ ಬಳಸುತ್ತಿದ್ದ ರೇಂಜ್ ರೋವರ್ ಹಾಗೂ ಜಾಗ್ವಾರ್ ಕಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ಬುಧವಾರ ರಾತ್ರಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ಕೋರಮಂಗಲದ  4ನೇ ಎಸಿಎಂಎಂ ನ್ಯಾಯಾಲಯ 10 ದಿನಗಳ ಕಾಲ ಅವರನ್ನು ಪೊಲೀಸ್ ವಶಕ್ಕೆ ನೀಡಿತ್ತು. ಅವರನ್ನು ಹಲಸೂರು ಪೊಲೀಸ್ ಠಾಣೆಯಲ್ಲಿ ಇರಿಸಲಾಗಿತ್ತು. ಇಂದು ಎಲ್ಲಾ ಪ್ರಕ್ರಿಯೆ ಪೂರ್ಣಗೊಂಡ ನಂತರ ಅವರನ್ನು ಎಸ್‌ಐಟಿಗೆ ಹಸ್ತಾಂತರಿಸಲಾಗಿದೆ.

ಬಂಧಿತರು ವಂಚನೆ ಹಾಗೂ ಮನ್ಸೂರ್ ಖಾನ್ ನಾಪತ್ತೆ ಹಿಂದೆ ತಮ್ಮದೇನು ಕೈವಾಡವಿಲ್ಲ. ಎಲ್ಲಾ ರೀತಿಯ ತನಿಖೆಗೆ ತಾವು ಸಹಕರಿಸಲು ಸಿದ್ಧ ಎಂದು ಪೂರ್ವ ವಿಭಾಗದ ಡಿಸಿಪಿ ರಾಹುಲ್ ಕುಮಾರ್ ಶಹಾಪುರ ಅವರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಡಿಐಜಿ ರವಿಕಾಂತೇಗೌಡ ನೇತೃತ್ವದ ಸಿಐಟಿ ತಂಡದಲ್ಲಿ ಬೆಂಗಳೂರು ನಗರ ಅಪರಾಧ ವಿಭಾಗದ ಪೊಲೀಸ್ ಉಪ ಆಯುಕ್ತ ಎಸ್.ಗಿರೀಶ್, ಸಿಸಿಬಿ ಸಹಾಯಕ ಪೊಲೀಸ್ ಆಯುಕ್ತ ಬಾಲರಾಜು, ಸಿಐಡಿ ಡಿವೈಎಸ್‍ಪಿ ಕೆ.ರವಿಶಂಕರ್, ರಾಜ್ಯ ಗುಪ್ತಚರ ದಳ ಡಿವೈಎಸ್‍ಪಿ ರಾಜ ಇಮಾಮ್ ಖಾಸಿಂ, ಕರ್ನಾಟಕ ಲೋಕಾಯುಕ್ತ ಬೆಂಗಳೂರು ಎಸ್‍ಐಟಿ ದಳದ ಡಿವೈಎಸ್‍ಪಿ ಅಬ್ದುಲ್ ಖಾದರ್, ಕರ್ನಾಟಕ ಲೋಕಾಯುಕ್ತ ಪೊಲೀಸ್ ಇನ್ಸ್ ಪೆಕ್ಟರ್ ಸಿ.ಆರ್.ಗೀತಾ, ಬಿಡಿಎ ಪೊಲೀಸ್ ಇನ್ಸ್ ಪೆಕ್ಟರ್ ಎಲ್.ವೈ.ರಾಜೇಶ್, ಬೆಂಗಳೂರು ನಗರ ಸಿಸಿಬಿ ಪೊಲೀಸ್ ಇನ್ಸ್ ಪೆಕ್ಟರ್ ಅಂಜನ್ ಕುಮಾರ್, ಬೆಂಗಳೂರು ಎಸ್‍ಸಿಆರ್ ಬಿ ಪೊಲೀಸ್ ಇನ್ಸ್ ಪೆಕ್ಟರ್ ಎನ್.ತನ್ವೀರ್ ಅಹ್ಮದ್, ಬೆಂಗಳೂರು ನಗರ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ಬಿ.ಕೆ.ಶೇಖರ್ ಇದ್ದಾರೆ.

ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಎಸ್‌ಐಟಿ, ಇಂದು  ಐಎಂಎನ ಕೇಂದ್ರ ಕಚೇರಿಗೆ ತೆರಳಿ ಬೀಗಮುದ್ರೆ ಜಡಿದು ಕಚೇರಿಯನ್ನು ಜಪ್ತಿಮಾಡಿದೆ. ಅದೇ  ರೀತಿ ಕಂಪನಿಯ ಇತರ ಆಸ್ತಿಗಳನ್ನು ಪತ್ತೆ ಹಚ್ಚುವ ಕೆಲಸದಲ್ಲಿ ಅಧಿಕಾರಿಗಳು  ನಿರತರಾಗಿದ್ದಾರೆ

Leave a Comment