ಐಎಂಎ ವಂಚನೆ ವಿಜಯಶಂಕರ್ ಸೇರಿ ಮೂವರ ವಿರುದ್ಧ ಎಫ್‌ಐಆರ್

ಬೆಂಗಳೂರು,ನ.೧೦-ಬಹುಕೋಟಿ ಐಎಂಎ ವಂಚನೆ ಪ್ರಕರಣದ ತನಿಖೆ ಮುಂದುವರಿಸಿರುವ ಸಿಬಿಐ ಅಧಿಕಾರಿಗಳು ಅಮಾನತುಗೊಂಡಿರುವ ಜಿಲ್ಲಾಧಿಕಾರಿ ಬಿ.ಎಂ. ವಿಜಯ ಶಂಕರ್ ಸೇರಿ ಮೂವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದೆ.

ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ನಿವಾಸದ ಮೇಲೆ ಎರಡು ದಿನಗಳ ಹಿಂದೆ ದಾಳಿ ನಡೆಸಿದ್ದ ಸಿಬಿಐ ಅಧಿಕಾರಿಗಳು ಬೆಂಗಳೂರು ನಗರದ ಜಿಲ್ಲಾಧಿಕಾರಿಯಾಗಿದ್ದ ಬಿ.ಎಂ. ವಿಜಯಶಂಕರ್, ಬೆಂಗಳೂರು ಉತ್ತರ ಉಪ ವಿಭಾಗಾಧಿಕಾರಿ ಎಲ್.ಸಿ. ನಾಗರಾಜ್, ಗ್ರಾಮಲೆಕ್ಕಿಗ ಮಂಜುನಾಥ್ ವಿರುದ್ಧ ಎಫ್‌ಐಆರ್ ದಾಖಲಿಸಿ ಕೊಂಡಿದ್ದಾರೆ. ಐಎಂಎ ಪ್ರಕರಣದಲ್ಲಿ ಸಿಬಿಐ ದಾಖಲಿಸಿಕೊಂಡಿರುವ ಮೂರನೇ ಎಫ್‌ಐಆರ್ ಇದಾಗಿದೆ.

ಸಂಸ್ಥೆ ಪರ ವರದಿ ನೀಡಲು ಐಎಂಎ ನಿರ್ದೇಶಕರಿಂದ ಗ್ರಾಮ ಲೆಕ್ಕಿಗ ಮಂಜುನಾಥ್ ಮೂಲಕ ವಿಜಯಶಂಕರ್ ಮತ್ತು ನಾಗರಾಜ್ ಲಂಚ ಪಡೆದಿದ್ದರು. ಐಎಂಎ ಹಾಗೂ ಅಧಿಕಾರಿಗಳ ನಡುವೆ ಮಂಜುನಾಥ್ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದ. ಐಎಂಎ ಪರ ವರದಿ ನೀಡಿದ ಬಳಿಕ ಹಣ ಪಡೆದಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಸಿಬಿಐ ತಿಳಿಸಿದೆ.

೧.೫ ಕೋಟಿ ರೂ. ಲಂಚ
ಐಎಂಎ ಕಂಪನಿ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಅನುಮತಿ ನೀಡಲು ವಿಜಯ ಶಂಕರ್ ಐಎಂಎ ನಿರ್ದೇಶಕರಿಗೆ ೧.೫ ಕೋಟಿ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಅಲ್ಲದೆ, ಕಂಪನಿ ಪರ ವರದಿ ನೀಡಲು ನಾಗರಾಜ್ ೪ ಕೋಟಿ ರೂ. ಲಂಚ ಪಡೆದಿದ್ದರು. ಈ ಎಲ್ಲ ಕೆಲಸ ಮಾಡಿದ್ದಕ್ಕೆ ಮಂಜುನಾಥ್ ಐಎಂಎ ನಿರ್ದೇಶಕರಿಂದ ೮ ಲಕ್ಷ ರೂ. ಪಡೆದುಕೊಂಡಿದ್ದ. ವಿಜಯಶಂಕರ್ ಮತ್ತು ನಾಗರಾಜ್ ಲಂಚ ಪಡೆದ ಪ್ರಕರಣದ ವಿಚಾರಣೆಯನ್ನು ಈ ಹಿಂದೆ ಎಸಿಬಿಗೆ ವರ್ಗಾಯಿಸಲಾಗಿತ್ತು. ಇದೀಗ ಎಸಿಬಿ ಅಧಿಕಾರಿಗಳಿಂದ ಈ ಬಗ್ಗೆ ಮಾಹಿತಿ ಕಲೆ ಹಾಕಿರುವ ಸಿಬಿಐ ತನಿಖೆ ಚುರುಕುಗೊಳಿಸಿದೆ.

Leave a Comment