ಐಎಂಎ ವಂಚನೆ ಪ್ರಕರಣ, ಸಮಗ್ರ ತನಿಖೆಗೆ ಮಾಜಿ ಸಚಿವ ಎಸ್ ಆರ್ ಪಾಟೀಲ್ ಆಗ್ರಹ

ಬಾಗಲಕೋಟೆ, ಜೂನ್ 13 -ಐಎಂಎ ಜಾಗತಿಕ ವಂಚನೆ ಪ್ರಕರಣವಾಗಿದ್ದು, ನನ್ನ ರಾಜಕೀಯ ಜೀವನದಲ್ಲಿ ಇಂಥ ಪ್ರಕರಣ ನೋಡಿಲ್ಲ. ಆಡಿಯೋದಲ್ಲಿ ಸಚಿವ ರೋಷನ್ ಬೇಗ್ ಹೆಸರು ಇದೆ ಎನ್ನಲಾಗುತ್ತಿದ್ದು, ಆಡಿಯೋ ಕುರಿತ ಸತ್ಯಾಸತ್ಯತೆಯ ಬಗ್ಗೆ ತನಿಖೆ ಆಗಲಿ ಎಂದು ಮಾಜಿ ಸಚಿವ ಎಸ್ ಆರ್ ಪಾಟೀಲ್ ಆಗ್ರಹಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲು ಆಡಿಯೋದ ನೈಜತೆಯನ್ನು ಪರಿಶೀಲಿಸಬೇಕು. ಕೇವಲ ಧ್ವನಿ ಮುದ್ರಿಕೆ ಬಿಡುಗಡೆಯಿಂದ ರೋಷನ್ ಬೇಗ್ ಅವರನ್ನು ಆರೋಪಿ ಎಂದು ಶಂಕಿಸಲು ಆಗುವುದಿಲ್ಲ. ಅದರ ಕುರಿತು ಕೂಲಂಕಷವಾಗಿ ತನಿಖೆ ಆಗಬೇಕು. ಹಣ ಕಳೆದುಕೊಂಡ ಬಡವರಿಗೆ ತಕ್ಷಣ ಹಣ ವಾಪಸ್ಸು ಕೊಡಿಸುವ ಕೆಲಸ ದೋಸ್ತಿ ಸರ್ಕಾರ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಐಎಂಎ ಪ್ರಕರಣದಲ್ಲಿ ಮುಹ್ಮದ್ ಮನ್ಸೂರ್ ಖಾನ್ ಉದ್ದೇಶಪೂರ್ವಕವಾಗಿ ರೋಷನ್ ಬೇಗ್ ಅವರನ್ನು ಸಿಲುಕಿಸಲು ಪ್ರಯತ್ನಿಸಿರುವ ಸಾಧ್ಯತೆ ಇದೆ. ರೋಷನ್ ಬೇಗ್,  ಐಎಂಎ ಕಂಪನಿ ಸದಸ್ಯರಲ್ಲ‌. ಇದು ಅವರ ಕ್ಷೇತ್ರದಲ್ಲಿ ನಡೆದ ಘಟನೆ. ಇದಕ್ಕೆ ಬಣ್ಣ ಹಚ್ಚುವ ಕೆಲಸ ಕೂಡ ನಡೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆಯಾಗಿ ಕಷ್ಟದಲ್ಲಿರುವ ಹೂಡಿಕೆದಾರರಿಗೆ ಹಣ ಸಿಗಬೇಕು ಎಂದು ಅವರು ಆಗ್ರಹಿಸಿದರು.

Leave a Comment