ಐಎಂಎ ವಂಚನೆ ಪ್ರಕರಣ ಇಡಿ ಮುಂದೆ ವಿಚಾರಣೆಗೆ ಹಾಜರಾಗಲಿರುವ ಸಚಿವ ಜಮೀರ್ ಅಹಮದ್

ಬೆಂಗಳೂರು,ಜು 5- ಐಎಂಎ ವಂಚನೆ ಪ್ರಕರಣ ಸಂಬಂಧ ಇಂದು ಸಚಿವ ಜಮೀರ್ ಅಹ್ಮದ್ ಖಾನ್ ಜಾರಿ ನಿರ್ದೇಶನಾಲಯ(ಇಡಿ)ದ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ.

ರಿಚ್ಮಂಡ್ ಟೌನ್‍ನ ಸರ್ಫೆಂಟೈನ್ ರಸ್ತೆಯಲ್ಲಿರುವ ನಿವೇಶನವನ್ನು ಮನ್ಸೂರ್ ಖಾನ್‍ಗೆ  ಜಮೀರ್ ಮಾರಾಟ ಮಾಡಿದ್ದರು. ಈ ಬಗ್ಗೆ ವಿವರಣೆಗೆ ಹಾಜಾರಾಗುವಂತೆ ಇಡಿ ಅಧಿಕಾರಿಗಳು ಜಮೀರ್ ಅವರಿಗೆ  ನೋಟೀಸ್ ನೀಡಿದ್ದರು. ಜೂನ್ 5 ರಂದು ಖುದ್ದು ಹಾಜರಾಗಿ ಐಎಂಎ ಹಗರಣ ಆರೋಪಿ ಮನ್ಸೂರ್ ಖಾನ್ ಜೊತೆ ನಡೆಸಿದ ನಿವೇಶನ ಮಾರಾಟ ಸಂಬಂಧ ಮಾಹಿತಿ ನೀಡುವಂತೆ ನೋಟಿಸ್ ಜಾರಿಗೊಳಿಸಲಾಗಿತ್ತು.

ಕಳೆದ ವಾರ ಸಚಿವರ ಸೆವೆನ್ ಮಿನಿಸ್ಟರ್ಸ್ ಕ್ವಾಟ್ರಸ್‍ನ ಸರ್ಕಾರಿ ಮನೆಗೆ ತೆರಳಿ ಸಚಿವರಿಗೆ  ಇಡಿ ಅಧಿಕಾರಿಗಳು ನೋಟಿಸ್ ನೀಡಿದ್ದರು. ನೋಟಿಸ್ ತಲುಪಿದ ನಂತರ ಪ್ರತಿಕ್ರಿಯೆ ನೀಡಿದ್ದ ಜಮೀರ್ ಅವರು, ರಿಚ್ಮಂಡ್ ಟೌನ್‍ನಲ್ಲಿ ಖರೀದಿಸಿದ ಎರಡು ಪ್ರಾಪರ್ಟಿ ಇಡಿ ಅಧಿಕಾರಿಗಳು ಮಾಹಿತಿ ಕೇಳಿದ್ದಾರೆ. ಈ ಪ್ರಾಪರ್ಟಿ ಖರೀದಿಸಲು 2 ಕೋಟಿ ರೂ. ಮುಂಗಡ ಹಣ ಪಾವತಿಸಿ ಜೂನ್‍ನಲ್ಲಿ ನೋಂದಾಯಿಸಿಕೊಂಡಿದ್ದೇನೆ. ಕಾನೂನು ಪ್ರಕಾರವಾಗಿ ನಿವೇಶನ ಮಾರಾಟ ಮಾಡಿದ್ದೇನೆ. ಇಡಿ ವಿಚಾರಣೆಗೆ ಹಾಜರಾಗಿ ಎಲ್ಲಾ ದಾಖಲಾತಿಗಳನ್ನ ನೀಡಿ ವಿವರಣೆ ನೀಡುತ್ತೇನೆ ಎಂದಿದ್ದರು.

ನೋಟೀಸ್ ನೀಡಿರುವ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಶಾಂತಿನಗರದ ಇಡಿ ಕಚೇರಿಗೆ ಸಚಿವರು ಹಾಜರಾಗಲಿದ್ದು, ಅಧಿಕಾರಿಗಳ ಮುಂದೆ ವಿಚಾರಣೆ ಎದುರಿಸಲಿದ್ದಾರೆ.

Leave a Comment