ಐಎಂಎ ವಂಚನೆ : ನೊಂದವರ ’ನೋಟಾ’ ಅಭಿಯಾನ..!

ಬೆಂಗಳೂರು, ನ.೧೯- ಐ ಮಾನಿಟರಿ ಅಡ್ವೈಸರಿ ಸಮೂಹ ಸಂಸ್ಥೆ (ಐಎಂಎ) ವಂಚನೆ ಪ್ರಕರಣ ಸಂಬಂಧ ಯಾವುದೇ ನ್ಯಾಯ ದೊರೆತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ನೂರಾರು ಹೂಡಿಕೆದಾರರು, ಶಿವಾಜಿನಗರ ವಿಧಾನಸಭೆಯ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ವಿರುದ್ಧ ಮತದಾರರು ನೋಟಾ ಚಲಾಯಿಸುವ ಮೂಲಕ ತಿರಸ್ಕರಿಸಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಕೈಗೊಂಡಿದ್ದಾರೆ.

ಐಎಂಎ ಕಂಪನಿಯಲ್ಲಿ ಸ್ಥಳೀಯರಾದ ಶಿವಾಜಿನಗರ ನಿವಾಸಿಗಳೇ ಹೆಚ್ಚಿನ ಹಣವನ್ನು ಹೂಡಿಕೆ ಮಾಡಿದ್ದರು. ಜೂನ್ ಮಾಸದಲ್ಲಿ ಪ್ರಕರಣ ಬೆಳಕಿಗೆ ಬಂದಿದ್ದರೂ, ಗ್ರಾಹಕರಿಗೆ ಹಣ ವಾಪಸ್ಸು ಅಥವಾ ಪರಿಹಾರ ಒದಗಿಸುವ ಯಾವುದೇ ಪ್ರಕ್ರಿಯೆಯನ್ನು ಸರ್ಕಾರ ಆಗಲಿ, ಇಲ್ಲಿನ ಜನಪ್ರತಿನಿಧಿಗಳಾಗಲಿ ಕೈಗೊಂಡಿಲ್ಲ.

ಇದರ ಜೊತೆಗೆ, ಅನಗತ್ಯವಾಗಿ ಉಪ ಚುನಾವಣೆ ಬಂದಿದೆ. ಹಾಗಾಗಿ, ನೋಟಾಕ್ಕೆ ಮತಚಲಾಯಿಸುವುದಾಗಿ ಕೆಲ ಹೂಡಿಕೆದಾರರು ವಾಟ್ಸಪ್, ಫೇಸ್‌ಬುಕ್, ಯೂಟ್ಯೂಬ್‌ನಲ್ಲಿ ಹೇಳಿಕೊಂಡಿದ್ದಾರೆ.
ಈಗಾಗಲೇ ಕೆಲವರು ವಾಟ್ಸಪ್ ಗ್ರೂಪ್‌ಗಳನ್ನು ರಚಿಸಿಕೊಂಡಿದ್ದು, ಡಿ.೫ರಂದು ಚುನಾವಣೆವರೆಗೆ ಕನಿಷ್ಠ ೧ ಲಕ್ಷ ಜನರನ್ನು ನೋಟಾ ಜಾಗತಿ ಅಭಿಯಾನದಲ್ಲಿ ತೊಡಗಿಸಿಕೊಳ್ಳುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿಸಲಾಗುತ್ತಿದೆ.

ವಿಡಿಯೋ ವೈರಲ್: ಫರ್ಹಾನ್ ರಶೀದ್ ಎಂಬುವರು ‘ಮುಸ್ಲಿಮ್ ಬ್ಲಾಗರ್’ ಹೆಸರಿನ ಫೇಸ್‌ಬುಕ್ ಪುಟ ರಚಿಸಿಕೊಂಡಿದ್ದು, ಇಲ್ಲಿನ ಸ್ಥಳೀಯ ರಾಜಕೀಯ ಮುಖಂಡರ ಹಾಗೂ ಐಎಂಎ ವಂಚನೆ ಪ್ರಕರಣದ ಆರೋಪಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿರುವ ವಿಡಿಯೋಗಳು ವೈರಲ್ ಆಗಿದ್ದು, ನೋಟಾಕ್ಕೆ ಮತ ಚಲಾಯಿಸುವ ಮೂಲಕ ಮುಸ್ಲಿಮ್ ನಾಯಕರಿಗೆ ಬುದ್ದಿ ಕಲಿಸುವಂತೆ ತಮ್ಮ ಸಂದೇಶಗಳಲ್ಲಿ ಹೇಳಿಕೊಂಡಿದ್ದಾರೆ.

ಸಭೆ, ಪ್ರತಿಭಟನೆ: ಸಾಮಾಜಿಕ ಜಾಲತಾಣಗಳ ಸಂದೇಶಗಳನ್ನು ಆಧರಿಸಿಯೇ ಸಭೆ ನಡೆಸುತ್ತಿರುವ ಅನೇಕ ಹೂಡಿಕೆದಾರರು, ಶಿವಾಜಿನಗರದ ಮತದಾರರಾಗಿದ್ದಾರೆ. ವಂಚನೆಗೊಳಗಾದ ಮಂದಿಗೆ ನ್ಯಾಯ ಒದಗಿಸಲು ಪ್ರತಿಭಟನೆ ನಡೆಸಿದರು, ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ, ಚುನಾವಣೆಯಲ್ಲಿ ನೋಟಾಕ್ಕೆ ಮತಚಲಾಯಿಸಲು ಒಮ್ಮತದಿಂದ ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ಅಷ್ಟೇ ಅಲ್ಲದೆ, ನೋಟಾಕ್ಕೆ ಮತಚಲಾಯಿಸುವ ಮೂಲಕ ಜನತೆಯ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆಲೆ ನೀಡುವ ಜತೆಗೆ ಇಲ್ಲಿನ ಅಭ್ಯರ್ಥಿಗಳಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದು ಹೆಸರು ಹೇಳಲು ಇಚ್ಛಿಸದ ಹೂಡಿಕೆದಾರರು ಮಾಹಿತಿ ನೀಡಿದರು.

‘ ಕಾನೂನು ಕ್ರಮ’
ಮತದಾನ ಪ್ರತಿಯೋರ್ವರ ಹಕ್ಕು. ಒಂದು ವೇಳೆ ಯಾರೊಬ್ಬ ಅಭ್ಯರ್ಥಿಗೂ ಮತದಾನ ಮಾಡಲು ಇಚ್ಛೆ ಇಲ್ಲದವರು ನೋಟಾ ಚಲಾಯಿಸಬಹುದು. ಆದರೆ ನೋಟಾ ಚಲಾಯಿಸಬೇಕೆಂದು ಯಾವುದೇ ವ್ಯಕ್ತಿ-ಸಂಘಟನೆಗಳು ಅಭಿಯಾನ ನಡೆಸಿದರೆ ಅದು ಇನ್ನೋರ್ವನ ಹಕ್ಕನ್ನು ಕಸಿದುಕೊಂಡಂತಾಗುತ್ತದೆ. ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಚುನಾವಣಾ ಅಧಿಕಾರಿಯೊಬ್ಬರು ತಿಳಿಸಿದರು.

ಐಎಂಎ ಆರೋಪಿ ಸ್ಪರ್ಧೆಯಲ್ಲಿ?

ಐಎಂಎ ವಂಚನೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಕೆಲವರು ಸ್ಪರ್ಧೆಯಲ್ಲಿ ರುವುದೇ ದುರಂತ ಸಂಗತಿ. ಅವರಿಂದ ನಮಗೆ ನ್ಯಾಯ ದೊರೆಯುವ ವಿಶ್ವಾಸವೇ ಇಲ್ಲ.ಹೀಗಾಗಿಯೇ, ಮತದಾರರ ಶಕ್ತಿಯನ್ನು ನೋಟಾದ ಮೂಲದ ತಿಳಿಸುತ್ತೇವೆ ಎಂದು ಹೂಡಿಕೆದಾರರು ಸಾಮಾಜಿಕ ಜಾಲತಾಣದ ಸಂದೇಶಗಳಲ್ಲಿ ಹೇಳಿಕೊಂಡಿದ್ದಾರೆ.

Leave a Comment