ಐಎಂಎ ವಂಚನೆಗೆ ಒಳಗಾದವರಿಂದ ವಾಟ್ಸ್ ಆಪ್ ಗ್ರೂಪ್ ರಚನೆ

ಮೈಸೂರು, ಜೂನ್ 14: ಐಎಂಎ ಮೋಸದ ಜಾಲ ಮೈಸೂರಿಗೂ ವ್ಯಾಪಿಸಿದೆ. ಇಲ್ಲಿನ ನೂರಾರು ಮಂದಿ ಅಧಿಕ ಬಡ್ಡಿ ಆಸೆಗೆ ಹಣ ಹೂಡಿ ವಂಚನೆಗೆ ಒಳಗಾಗಿದ್ದಾರೆ. ನಗರದೆಲ್ಲೆಡೆ, ಹುಣಸೂರು, ಕೆ.ಆರ್ ನಗರ, ಪಿರಿಯಾಪಟ್ಟಣದಲ್ಲಿಯೂ ಅನೇಕ ಜನರು ಕಂಪನಿಯಲ್ಲಿ ಹೂಡಿ ಹಣ ಕಳೆದುಕೊಂಡಿದ್ದಾರೆ.

ಮೈಸೂರಿನಲ್ಲಿ ಐಎಂಎ ವಿರುದ್ಧ 1500ಕ್ಕೂ ಹೆಚ್ಚು ದೂರು ದಾಖಲು

ಅಂತಹವರನ್ನು ಮೈಸೂರಿನ ಯುವಕರು ವಾಟ್ಸಪ್ ಗ್ರೂಪ್ ಮಾಡುವ ಮೂಲಕ ಸಂಘಟಿಸಿ ಹೋರಾಟ ನಡೆಸಲು ಅಣಿಗೊಳಿಸುತ್ತಿದ್ದಾರೆ. ಇಂಜಿನಿಯರ್ ಶಬ್ ರೆಹಮಾನ್ ಐಎಂಎ ವಿಕ್ಟಿಮ್ ವಾಟ್ಸಪ್ ಗ್ರೂಪ್ ರಚಿಸಿದ್ದಾರೆ. ಎಷ್ಟು ಹಣ ಹೂಡಿಕೆ ಮಾಡಿರುವುದು, ಪ್ರಕರಣ ಯಾವ ಹಂತದಲ್ಲಿದೆ ಎಂಬಿತ್ಯಾದಿ ಮಾಹಿತಿಗಳನ್ನು ಕಲೆ ಹಾಕಿ ಇಲ್ಲಿ ಹಂಚಿಕೊಳ್ಳಲಾಗುತ್ತದೆ. ಅಲ್ಲದೆ ಹಣ ಹೂಡಿ ವಂಚನೆಗೊಳಗಾದವರು ಸಾರ್ವಜನಿಕ ಸಭೆ ನಡೆಸುತ್ತಾರೆ. ಜೂ.15, ಶನಿವಾರ ಮಧ್ಯಾಹ್ನ 3ಕ್ಕೆ ಮೈಸೂರು – ಬೆಂಗಳೂರು ರಸ್ತೆಯಲ್ಲಿನ ಬನ್ನಿಮಂಟಪದ ರಿಲಯನ್ಸ್ ಫಂಕ್ಷನ್ ಹಾಲ್ ನಲ್ಲಿ ಸಭೆ ನಡೆಯಲಾಗಿದೆ.

ಇದರೊಟ್ಟಿಗೆ ಈಗಾಗಲೇ ಮೋಸ ಹೋದವರು ವಾಟ್ಸ್‌ಆಪ್ ಗ್ರೂಪ್‌ ನಲ್ಲಿ, ಹಣ ಕಳೆದುಕೊಂಡವರು ಹೇಗೆ ಪಡೆದುಕೊಳ್ಳಬಹುದೆಂಬ ಚರ್ಚೆಯನ್ನೂ ಮಾಡುತ್ತಾ ಹೋರಾಟಕ್ಕೆ ಅಣಿಯಾಗಿದ್ದಾರೆ. ತಮ್ಮ ಬಡಾವಣೆಯ, ಬಂಧುಗಳ, ಸ್ನೇಹಿತರ ಗ್ರೂಪ್‌ಗಳನ್ನು ರಚಿಸಿಕೊಂಡು ದೂರು ನೀಡುವಂತೆ ಮನವಿ ಮಾಡುತ್ತಿದ್ದಾರೆ. ದೂರು ನೀಡಲು ಏನೇನು ಬೇಕು, ಎಲ್ಲಿಗೆ ಬರಬೇಕು, ಯಾವ ಕ್ರಮ ಅನುಸರಿಸಬೇಕು ಎಂಬ ವಿವರಗಳನ್ನೂ ಗ್ರೂಪ್ ನಲ್ಲಿ ಹಾಕುತ್ತಿದ್ದಾರೆ.

Leave a Comment