ಐಎಂಎ ವಂಚಕನ 26 ಸ್ಥಿರಾಸ್ತಿ ಪತ್ತೆ

ಬೆಂಗಳೂರು, ಜೂ ೧೯- ಬಹುಕೋಟಿ ವಂಚನೆ ನಡೆಸಿ ಪರಾರಿಯಾಗಿರುವ ಐಎಂಎ ಮಾಲೀಕನ 26 ಸ್ಥಿರಾಸ್ತಿ‌ಗಳನ್ನು ಗುರುತಿಸಿರುವ ವಿಶೇಷ ತನಿಖಾ ತಂಡ (ಎಸ್ ಐಟಿ) ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಐಎಂಎ ಕಂಪನಿಯ ಮಾಲೀಕನಿಗೆ ಸೇರಿದ ಮಹಮ್ಮದ್ ಮನ್ಸೂರ್ ಖಾನ್‌ಗೆ ಸೇರಿದ ವಾಣಿಜ್ಯ ಕಟ್ಟಡಗಳು, ಶಾಲಾ ಜಾಗ, ಜಮೀನು, ಅಪಾರ್ಟ್‌ಮೆಂಟ್, ಮನೆ, ಸೇರಿ 26 ಸ್ಥಿರಾಸ್ತಿ ಗಳನ್ನು ಪತ್ತೆ ಹಚ್ಚಿ ತನಿಖೆ ತೀವ್ರಗೊಳಿಸಲಾಗಿದೆ ಎಂದು ತನಿಖಾ ತಂಡದ ಡಿಸಿಪಿ ಎಸ್.ಗಿರೀಶ್ ಅವರು ತಿಳಿಸಿದ್ದಾರೆ.
ಪತ್ತೆ ಹಚ್ಚಿರುವ ಸ್ಥಿರಾಸ್ತಿ‌ಗಳ ಮೌಲ್ಯದ ಅಂದಾಜು ಮಾಡಲಾಗುತ್ತಿದ್ದು ಅದರ ವಿವರವನ್ನು ಕಲೆ ಹಾಕಿ ನ್ಯಾಯಾಲಯಕ್ಕೆ ಸಲ್ಲಿಸಿ ಮುಟ್ಟುಗೋಲು ಹಾಕಿಕೊಳ್ಳುವ ಸಂಬಂಧ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಜಯನಗರದ ಐಎಂಎ ಜ್ಯೂವೆಲಱ್ಸ್ ಮಳಿಗೆ ಮೇಲೆ ದಾಳಿ ನಡೆಸಿ 13 ಕೋಟಿ ಮೌಲ್ಯದ 43 ಕೆ.ಜಿ. ಚಿನ್ನ, 17.6 ಕೋಟಿ ಮೌಲ್ಯದ 5964 ಕ್ಯಾರೆಟ್ ವಜ್ರ, ತಲಾ ಒಂದೂವರೆ ಕೋಟಿ ಮೌಲ್ಯದ 520 ಕೆ.ಜಿ. ಬೆಳ್ಳಿ, ಸೈಲ್ಟರ್ ಡೈಮೆಂಡ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮನ್ಸೂರ್ ನ ವಿಚ್ಛೇದಿತ ಪತ್ನಿ ತಬಸ್ಸಮ್ ಬಾನು ಅವರ ಶಿವಾಜಿನಗರದ ಗುಲ್ಫನ್ ಅಪಾರ್ಟ್‌ಮೆಂಟ್‌ನ ಮನೆಯಲ್ಲಿ 39.5 ಲಕ್ಷ ಮೌಲ್ಯದ ಒಂದು ಕೆ.ಜಿ. 500 ಗ್ರಾಂ ಚಿನ್ನ, 1.5 ಕೆ.ಜಿ. ಬೆಳ್ಳಿ, 2.69 ಲಕ್ಷ ನಗದು ಸೇರಿ 40 ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದಲ್ಲದೇ ತಿಲಕ್ ನಗರದ ಎಸ್.ಆರ್.ಕೆ.ಗಾರ್ಡನ್‌ನಲ್ಲಿ ಹೊಂದಿರುವ 1.20 ಕೋಟಿ ಮೌಲ್ಯದ ಅಪಾರ್ಟ್‌ಮೆಂಟ್ ದಾಖಲಾತಿಗಳನ್ನು ವಶಪಡಿಸಿಕೊಂಡು ತನಿಖೆಯನ್ನು ತೀವ್ರಗೊಳಿಸಲಾಗಿದೆ ಎಂದು ಗಿರೀಶ್ ಹೇಳಿದರು.
ಐಎಂಎ ಕಂಪನಿಯ ಸ್ತಿರಾಸ್ಥಿಗಳಲ್ಲಿ ಶೋಧನಾ ಕಾರ್ಯ ಮುಂದುವರೆಸಲಾಗಿದ್ದು ಅಲ್ಲಿರುವ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಮನ್ಸೂರ್ ಖಾನ್ ನಡೆಸುತ್ತಿದ್ದ ಔಷಧ ಫಾರ್ಮ ಆಸ್ಪತ್ರೆಯಲ್ಲೂ ಶೋಧನೆ ನಡೆಸಲಾಗುತ್ತಿದೆ ಎಂದು ಗಿರೀಶ್ ತಿಳಿಸಿದರು.

* ಐಎಂಎ ಮಾಲೀಕ ಮನ್ಸೂರ್ ಖಾನ್ ನ 26 ಸ್ಥಿರಾಸ್ತಿ ಪತ್ತೆ ಹಚ್ಚಿದ ಎಸ್ಐಟಿ
* ವಾಣಿಜ್ಯ ಕಟ್ಟಡ, ಜಮೀನು, ಅಪಾರ್ಟ್‌ಮೆಂಟ್ ಸೇರಿ ಸ್ಥಿರಾಸ್ತಿ ಗಳ ಶೋಧನೆ
* ವಿಚ್ಛೇದಿತ 3ನೇ ಪತ್ನಿ ತಬಸ್ಸಮ್ ಬಾನು ಮನೆಯಲ್ಲಿ ಚಿನ್ನ ಬೆಳ್ಳಿ ಸೇರಿ 40 ಲಕ್ಷ ಪತ್ತೆ
* ತಿಲಕ್ ನಗರದ ಎಸ್.ಆರ್.ಕೆ. ಗಾರ್ಡನ್ ನ 1.20 ಕೋಟಿ ಅಪಾರ್ಟ್‌ಮೆಂಟ್ ದಾಖಲೆ ವಶ

Leave a Comment