ಐಎಂಎ ವಂಚಕನಿಗೆ ಬಲೆ : ದೂರುಗಳ ಸರಮಾಲೆ ಬೆಚ್ಚಿ ಬಿದ್ದ ಪೊಲೀಸರು, ಅಧಿಕಾರಿಗಳ ಜತೆ ಸಚಿವರ ಚರ್ಚೆ

ಬೆಂಗಳೂರು, ಜೂ. ೧೧- ಹೆಚ್ಚಿನ ಬಡ್ಡಿ ಆಸೆ ತೋರಿಸಿ, ಸಾರ್ವಜನಿಕರಿಂದ ಠೇವಣಿ ಸಂಗ್ರಹಿಸಿ, ಪರಾರಿಯಾಗಿರುವ ಐಎಂಎ ಮಾಲೀಕ ಮಹಮದ್ ಮನ್ಸೂರ್ ಖಾನ್ ಪತ್ತೆಗೆ ನಗರ ಪೊಲೀಸರು ಜಾಲ ಬೀಸಿರುವ ಮಧ್ಯೆಯೇ ನಗರ ಮಾತ್ರವಲ್ಲದೆ, ರಾಜ್ಯದ ವಿವಿಧ ಭಾಗಗಳಲ್ಲಿ ಮೋಸಹೋಗಿರುವವರ ಸಂಖ್ಯೆ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿರುವುದು ಪೊಲೀಸರೇ ಬೆಚ್ಚಿಬೀಳುವಂತಾಗಿದೆ.

ಆಂಬಿಡೆಂಟ್ ನಂತರ, ಐಎಂಎ ಕಂಪನಿ, ಅಲ್ಪಸಂಖ್ಯಾತರನ್ನೇ ಗುರಿಯಾಗಿಸಿಕೊಂಡು ವಂಚಿಸಿರುವ ಸಂಬಂಧ ಆಕ್ರೋಶಗೊಂಡಿರುವ ಆ ಸಮುದಾಯದ ನಾಯಕರು, ಗೃಹ ಸಚಿವ ಎಂ.ಬಿ. ಪಾಟೀಲ್ ಅವರನ್ನು ಭೇಟಿ ಮಾಡಿ, ವಂಚನೆ ಕಂಪನಿಗಳ ಮೇಲೆ ಸೂಕ್ತ ಕ್ರಮ ಕೈಗೊಂಡು ಹೂಡಿಕೆದಾರರಿಗೆ ನ್ಯಾಯ ದೊರಕಿಸುವಂತೆ ಆಗ್ರಹಿಸಿದ್ದಾರೆ.

ಸಚಿವ ಜಮೀರ್ ಅಹಮದ್ ಅವರ ನೇತೃತ್ವದಲ್ಲಿ ಶಾಸಕರಾದ ಎನ್.ಎ. ಹ್ಯಾರಿಸ್, ರಿಜ್ವಾನ್ ಅಹಮದ್, ಇನ್ನಿತರ ಮುಖಂಡರ ನಿಯೋಗ ಸಚಿವ ಎಂ.ಬಿ. ಪಾಟೀಲ್ ಅವರನ್ನು ಭೇಟಿಮಾಡಿ, ಆಂಬಿಡೆಂಟ್, ಐಎಂಎ ಕಂಪನಿಗಳ ವಂಚನೆಯಿಂದ ಅಲ್ಪಸಂಖ್ಯಾತ ಸಮುದಾಯಕ್ಕೆ ಆಗಿರುವ ವಂಚನೆಯ ಮಾಹಿತಿಯನ್ನು ನೀಡಿ, ಕ್ರಮಕ್ಕೆ ಒತ್ತಾಯಿಸಿದರು.
ನಿಯೋಗದ ಜೊತೆ ಸುದೀರ್ಘ ಚರ್ಚೆ ನಡೆಸಿದ ಗೃಹ ಸಚಿವರು ಮಧ್ಯಾಹ್ನ 3 ಗಂಟೆಗೆ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಕರೆದಿದ್ದು, ವಂಚನಾ ಕಂಪನಿಗಳ ಬಗ್ಗೆ ಕೈಗೊಳ್ಳುವ ಕ್ರಮದ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಾಧ್ಯವಾಗದ ಪತ್ತೆ
ಸಾರ್ವಜನಿಕರಿಂದ ಸುಮಾರು 500 ಕೋಟಿ ರೂ. ಗಳಷ್ಟು ಹಣ ಹೂಡಿಕೆ ಮಾಡಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಆಡಿಯೋ ಹರಿಬಿಟ್ಟು ಪರಾರಿಯಾಗಿರುವ ಐಎಂಎ ಜ್ಯುವೆಲರ್ಸ್ ಮಾಲೀಕ ಮಹಮದ್ ಮನ್ಸೂರ್ ಖಾನ್ ಅವರನ್ನು ಪತ್ತೆ ಮಾಡಲು ನಗರ ಪೊಲೀಸರಿಗೆ ಇನ್ನೂ ಸಾಧ್ಯವಾಗಿಲ್ಲ.

ಜಯನಗರ ಹಾಗೂ ಶಿವಾಜಿನಗರದಲ್ಲಿದ್ದ ಮನೆಗೆ ಬೀಗ ಹಾಕಿ ಮನ್ಸೂರ್ ಖಾನ್, ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ಪರಾರಿಯಾಗಿದ್ದು, ಇಲ್ಲಿಯವರೆಗೆ ಆತನ ಸುಳಿವು ಸಿಕ್ಕಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮನ್ಸೂರ್ ಪತ್ತೆಗಾಗಿ ರಚಿಸಿರುವ ಐದು ವಿಶೇಷ ತಂಡಗಳು ಕಾರ್ಯಾಚರಣೆ ಕೈಗೊಂಡಿದ್ದು, ಮೊಬೈಲ್ ಸಂಖ್ಯೆಗಳು, ಸಿಸಿಟಿವಿ ಕ್ಯಾಮರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿ, ಆತನ ಸಂಬಂಧಿಕರು, ಸ್ನೇಹಿತರಿಂದ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ.

ಮನ್ಸೂರ್ ನಡೆಸುತ್ತಿದ್ದ ಶೈಕ್ಷಣಿಕ ಸಂಸ್ಥೆಗಳಿಗೂ ಬೀಗ ಹಾಕಲಾಗಿದೆ. ಕುಟುಂಬದೊಂದಿಗೆ ವಿದೇಶಕ್ಕೆ ಹಾರಿರುವ ಸಾಧ್ಯತೆಗಳಿದ್ದು, ವಿಮಾನ ನಿಲ್ದಾಣಗಳಲ್ಲೂ ಹದ್ದಿನ ಕಣ್ಣಿಡಲಾಗಿದೆ. ಇಲ್ಲಿಯವರೆಗೂ ಆತ್ಮಹತ್ಯೆ ಮಾಡಿಕೊಂಡಿರುವ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

ಪರಾರಿಯಾಗಿರುವ ಐಎಂಎ ಮಾಲೀಕ ಮನ್ಸೂರ್‌ನ ಎಲ್ಲಾ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದ್ದು, ಆತನ ಹಣಕಾಸಿನ ವಹಿವಾಟಿನ ಮೇಲೆ ನಿಗಾ ವಹಿಸಿದ್ದಾರೆ.

ಕ್ಯೂನಲ್ಲಿ ನಿಂತು ದೂರು
ಈ ನಡುವೆ ಐಎಂಎ ಜ್ಯುವೆಲರ್ಸ್ ಮಾರಾಟ ಪ್ರತಿನಿಧಿ ಮಹಮದ್ ಶಬಾದ್, ಸಂಸ್ಥೆಯ ಮಾಲೀಕರಿಗೆ ಏನೂ ಆಗಿಲ್ಲ, ಅವರು ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದ್ದಾರೆ.

ಐಎಂಎ ಜ್ಯುವೆಲರ್ಸ್‌ನಲ್ಲಿ ಹಣ ಹೂಡಿಕೆ ಮಾಡಿರುವ ಸುಮಾರು 4 ಸಾವಿರ ಮಂದಿ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಠಾಣೆಯಲ್ಲಿ ದೂರು ದಾಖಲಿಸಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು, ಸರತಿಸಾಲಿನಲ್ಲಿ ನಿಂತು ದೂರು ನೀಡುವವರ ಸಂಖ್ಯೆ ಹೆಚ್ಚಾಗಿದೆ.

ಈ ಮಧ್ಯೆ ಐಎಂಎ ಜ್ಯುವೆಲರ್ಸ್‌ನ ಬೌರಿಂಗ್ ಆಸ್ಪತ್ರೆಯ ಮುಂಭಾಗದ ಕಚೇರಿ ಮುಂದೆ ಅಹೋರಾತ್ರಿ ಪ್ರತಿಭಟನೆ ನಡೆಸಿರುವ ಹೂಡಿಕೆದಾರರು ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಹೋರಾಟ ನಡೆಸಲು ಮುಂದಾಗಿದ್ದಾರೆ.

ವಂಚನೆಗೊಳಗಾದವರು ನೀಡುತ್ತಿರುವ ದೂರುಗಳನ್ನು ಸ್ವೀಕರಿಸಲಾಗುತ್ತಿದ್ದು, ಧೈರ್ಯ ಹೇಳುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ. ನಗರ ಮಾತ್ರವಲ್ಲದೆ, ವಿವಿಧೆಡೆಗಳಲ್ಲಿನ ಸಾರ್ವಜನಿಕರು, ಐಎಂಎನಲ್ಲಿ ಹಣ ಹೂಡಿಕೆ ಮಾಡಿದ್ದು, ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ದೂರುಗಳನ್ನು ದಾಖಲಿಸುತ್ತಿದ್ದಾರೆ. ಅವುಗಳನ್ನು ಸ್ವೀಕರಿಸಿ ಧೈರ್ಯ ತುಂಬಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶೇ. 3 ರಷ್ಟು ಬಡ್ಡಿ
ಐಎಂಎ ಜ್ಯೂವೆಲರ್ಸ್ ಮಳಿಗೆಯಲ್ಲಿ ಚಿನ್ನಾಭರಣ ಕೊಳ್ಳುವವರಿಗೆ ಮೇಕಿಂಗ್ ಹಾಗೂ ವೇಸ್ಟೇಜ್ ಶುಲ್ಕ ವಿಧಿಸುತ್ತಿರಲಿಲ್ಲ. ಇದರಿಂದಾಗಿ ಮಳಿಗೆಯಲ್ಲಿ ಚಿನ್ನಾಭರಣ ಕೊಳ್ಳಲು ಜನ ಮುಗಿಬೀಳುತ್ತಿದ್ದರು. ಜನರನ್ನು ಚದುರಿಸಲು ಪೊಲೀಸರು ಲಘುಲಾಠಿ ಪ್ರಹಾರ ನಡೆಸುವ ಸ್ಥಿತಿ ಉಂಟಾಗುತ್ತಿತ್ತು.

ಜಯನಗರ, ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ಚಿನ್ನಾಭರಣ ಹೊಂದಿದ್ದ ಐಎಂಎ ಮಾಲೀಕ ಮನ್ಸೂರ್ ಬಹುಬೇಗ ಜನರಲ್ಲಿ ವಿಶ್ವಾಸ ಗಳಿಸಿದ್ದ. ನಮ್ಮಲ್ಲಿ ಹಣ ಹೂಡಿಕೆ ಮಾಡಿದರೆ, ಹೆಚ್ಚು ಬಡ್ಡಿ ನೀಡಲಾಗುತ್ತದೆ ಎಂದು ಹೇಳಿದ್ದರಿಂದ ಆತನನ್ನು ನಂಬಿ ಸಾಕಷ್ಟು ಮಂದಿ ಹಣ ಹೂಡುತ್ತಿದ್ದರು.

ಹಣ ಹೂಡಿಕೆ ಮಾಡಿದವರಿಗೆ ಬಾಂಡ್ ನೀಡಿ ಪ್ರತಿ ತಿಂಗಳು ಗ್ರಾಹಕರಿಗೆ ಬ್ಯಾಂಕ್ ಮೂಲಕವೇ ಸಾವಿರಾರು ರೂ. ಗಳ ಲಾಭಾಂಶವನ್ನು ಪಾವತಿಸಲಾಗುತ್ತಿತ್ತು. ಪ್ರತಿಯೊಂದಕ್ಕೂ ರಶೀದಿ ನೀಡಲಾಗುತ್ತಿದ್ದು, ಬ್ಯಾಂಕ್‌ನ ದಾಖಲೆಗಳಿದ್ದು, ಅದನ್ನು ಆಧರಿಸಿ ಹೂಡಿಕೆ ಮಾಡಿದವರಿಗೆ ನ್ಯಾಯ ಒದಗಿಸಲು ಪೊಲೀಸರಿಗೆ ಸಹಾಯವಾಗಲಿದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.

ವಂಚನೆ ಹೇಗೆ?
ಐಎಂಎ ಜ್ಯುವೆಲ್ಸ್ ನಿಂದ ಚಿನ್ನ, ವಜ್ರ ಖರೀದಿಸುವ ಗ್ರಾಹಕರಿಗೆ ಮೇಕಿಂಗ್ ಹಾಗೂ ವೇಸ್ಟೇಜ್ ಶುಲ್ಕ ವಿಧಿಸುತ್ತಿರಲಿಲ್ಲ.ಈ ಪ್ರಕಟಣೆ ನೋಡಿ ಜನ ಚಿನ್ನ ಖರೀದಿ ಮಾಡುತ್ತಿದ್ದರು. ಖರೀದಿಗೆ ಬಂದ ಗ್ರಾಹಕರಿಗೆ ಕಂಪನಿಯಲ್ಲಿ ಹಣ ಹೂಡುವಂತೆ ಸಿಬ್ಬಂದಿ ಪುಸಲಾಯಿಸುತ್ತಿದ್ದರು.

ಜ್ಯುವೆಲ್ಸ್ ಸಿಬ್ಬಂದಿಯ ಮಾತಿಗೆ ಮರುಳಾದ ಜನ ತಮ್ಮಲ್ಲಿದ್ದ ಹಣವನ್ನು ಹೂಡಿಕೆ ಮಾಡುತ್ತಿದ್ದರು. ೧ ಲಕ್ಷ ರೂ. ಗೆ ೩ ಸಾವಿರ ರೂ. ನಂತೆ ಕಂಪನಿ ಬಡ್ಡಿ ನೀಡುತಿತ್ತು.

ಕಂಪನಿ ಸರಿಯಾದ ಸಮಯದಲ್ಲಿ ಲಾಭಾಂಶ ನೀಡುತ್ತಿದ್ದ ಕಾರಣ ವಿಶ್ವಾಸಾರ್ಹತೆ ಗಳಿಸಿಕೊಂಡಿತ್ತು. ಲಾಭಾಂಶ ಪಡೆದ ಗ್ರಾಹಕರು ಸ್ನೇಹಿತರಿಗೆ ಹೇಳುತ್ತಿದ್ದ ಕಾರಣ ಅವರು ಹೂಡಿಕೆ ಮಾಡತೊಡಗಿದರು. ಭಾರೀ ಪ್ರಚಾರ ಸಿಕ್ಕಿದ ಪರಿಣಾಮ ಹೂಡಿಕೆ ಹೆಚ್ಚಾಯಿತು. ಆದರೆ ಕಳೆದ ೨-೩ ತಿಂಗಳಿನಿಂದ ಸಂಸ್ಥೆ ಬಡ್ಡಿ ನೀಡಿರಲಿಲ್ಲ. ಈ ನಡುವೆ ಜೂನ್ ೧೦ ರಂದು ಸಂಪೂರ್ಣ ಹಣ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಜೂ.೯ ರಂದು ಮಾಲೀಕ ಮನ್ಸೂರ್ ಅಲಿ ಖಾನ್ ಆತ್ಮಹತ್ಯೆಯ ವಿಡಿಯೋ ವೈರಲ್ ಆದ ಬಳಿಕ ಮಳಿಗೆಯ ಮುಂದೆ ಜನರು ಜಮಾಯಿಸಿ ಹೂಡಿದ್ದ ಹಣವನ್ನು ಕೇಳಲು ಆರಂಭಿಸಿದರು.

ಮನ್ಸೂರ್ ಸುರಕ್ಷಿತ
ಐಎಂಎ ಮಾಲೀಕ ಮಹಮದ್ ಮನ್ಸೂರ್‌ ಅವರು ಸುರಕ್ಷಿತರಾಗಿದ್ದು, ಯಾವುದೇ ತೊಂದರೆಯಾಗಿಲ್ಲ ಎಂದು ಸಂಸ್ಥೆಯ ಸೇಲ್ಸ್ ಅಸೋಸಿಯೇಟ್ ಮಹಮದ್ ಶಬಾದ್ ಸ್ಪಷ್ಟನೆ ನೀಡಿದ್ದಾರೆ.

ಮನ್ಸೂರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ವದಂತಿಗಳನ್ನು ನಂಬಬೇಡಿ. ಅವರಿಗೆ ಯಾವುದೇ ತೊಂದರೆಯಾಗಿಲ್ಲ. ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವುದು ಸುಳ್ಳು ಎಂದಿದ್ದಾರೆ.

ನಮ್ಮ ಮಾಲೀಕರು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ, ಭದ್ರತೆಯ ಉದ್ದೇಶದಿಂದ ಬೇರೆ ಕಡೆ ಹೋಗಿರಬಹುದು. ಅವರ ಹೆಸರಿನಲ್ಲಿ ಹರಿಬಿಟ್ಟಿರುವ ಆಡಿಯೋದಲ್ಲಿ ರೋಷನ್ ಬೇಗ್ ಅವರ ಹೆಸರನ್ನು ಸೃಷ್ಟಿ ಮಾಡಲಾಗಿದ್ದು, ಈ ಸಂಬಂಧ ಸೈಬರ್ ಪೊಲೀಸರಿಗೆ ದೂರು ನೀಡಿದ್ದೇವೆ ಎಂದಿದ್ದಾರೆ.

Leave a Comment