ಐಎಂಎ ಪ್ರಕರಣ ರೋಷನ್ ಬೇಗ್ ವಿರುದ್ಧ ಮತ್ತೆ ಹೈಕಮಾಂಡ್ ಗೆ ದೂರು ;ದಿನೇಶ್ ಗುಂಡೂರಾವ್

ಬೆಂಗಳೂರು, ಜೂ 18- ಐಎಂಎ ವಂಚನೆ ಪ್ರಕರಣದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ರೋಷನ್ ಬೇಗ್ ಹೆಸರನ್ನು ಮೊಹಮದ್ ಮನ್ಸೂರ್ ಪ್ರಸ್ತಾಪ ಮಾಡಿರುವ ಹಿನ್ನಲೆಯಲ್ಲಿ ಬೇಗ್ ವಿರುದ್ಧ ಹೈಕಮಾಂಡ್ಗೆ ದೂರು ನೀಡಲು ಪಕ್ಷ ತೀರ್ಮಾನಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಎಂಎ ಬಹುಕೋಟಿ ಹಗರಣದಲ್ಲಿ ರೋಷನ್ ಬೇಗ್ ಹೆಸರನ್ನು ಮನ್ಸೂರ್ ಆಡಿಯೋದಲ್ಲಿ ಉಲ್ಲೇಖಿಸಿದ್ದರು.ಈ ನಡುವೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರ ಬಳಿ ಮನ್ಸೂರ್ ಖಾನ್ ಕರೆದೊಯ್ದು ಸಹಾಯ ಮಾಡುವಂತೆ ರೋಷನ್ ಬೇಗ್ ಮನವಿ ಮಾಡಿದ ವಿಚಾರ ಬೆಳಕಿಗೆ ಬಂದ ಹಿನ್ನಲೆಯಲ್ಲಿ ಹೈಕಮಾಂಡ್ ಗೆ ದೂರು ನೀಡಲು ಅಧ್ಯಕ್ಷ ದಿನೇಶ್ ಗುಂಡೂರಾವ್ ತೀರ್ಮಾನಿಸಿರುವುದಾಗಿ ಅವರು ತಿಳಿಸಿದರು.

ಮಾಧ್ಯಮಗಳ ಮುಂದೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಓರ್ವ ಬಪೂನ್ ಎಂದು , ಪಕ್ಷದ ಹಿರಿಯ ನಾಯಕರು ಸಚಿವ ಸ್ಥಾನವನ್ನು ಹಣಕ್ಕಾಗಿ ಮಾರಿಕೊಂಡಿದ್ದಾರೆಂದು ರೋಷನ್ ಬೇಗ್ ಆರೋಪಿಸಿದ್ದರು.ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ಗೆ ದೂರು ನೀಡಲು ಕೈ ನಾಯಕರು ನಿರ್ಧರಿಸಿದ್ದಾರೆ. ಈಗಾಗಲೇ ನಾಯಕತ್ವ ಪ್ರಶ್ನಿಸಿದ ಆರೋಪದಲ್ಲಿ ದೂರು ನೀಡಲಾಗಿದ್ದು ,ಐಎಂಎ ವಂಚನೆ ಪ್ರಕರಣದಲ್ಲಿ ಎರಡನೆ ದೂರನ್ನು ನೀಡಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದರು.

ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನಿಗಮ ಮಂಡಳಿ ಅಧ್ಯಕ್ಷರ ನೇಮಕದ ವಿಚಾರ ಇನ್ನೂ ಚರ್ಚೆಯಾಗಿಲ್ಲ. ಸಂಪುಟ ವಿಸ್ತರಣೆಯಾದ ಬಳಿಕ ಯಾವ ಶಾಸಕರೂ ಅಸಮಾಧಾನ ಗೊಂಡಿಲ್ಲ. ಯಾರು ಪಕ್ಷಕ್ಕೆ ನಿಷ್ಠರಾಗಿರುತ್ತಾರೋ ಅಂಥವರನ್ನು ಸಂಪುಟ ಪುನಾರಚನೆ ವೇಳೆ ಮಂತ್ರಿ ಮಾಡಲಾಗುವುದು. 8 ತಿಂಗಳಲ್ಲಿ ಸಂಪುಟ ಪುನಾರಚನೆ ಮಾಡಲಿದ್ದೇವೆ ಎಂದು ದಿನೇಶ್ ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್, ಸಚಿವ ಡಿ ಕೆ ಶಿವಕುಮಾರ್ ದೆಹಲಿಗೆ ತೆರಳಿರೋ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ನಾಯಕರು ದೆಹಲಿಗೆ ತೆರಳುವುದು ಹೊಸತೇನಲ್ಲ, ಅದು ದೊಡ್ಡ ವಿಚಾರವೂ ಅಲ್ಲ. ವೈಯಕ್ತಿಕ ಕಾರಣಗಳಿಗಾಗಿ ಸಿದ್ದರಾಮಯ್ಯ ಅವರು ದೆಹಲಿಗೆ ಹೋಗಿರಬಹುದು. ಆದರೆ ಪರಮೇಶ್ವರ್ ಹಾಗೂ ಡಿಕೆ ಶಿವಕುಮಾರ್ ಅವರು ಸರ್ಕಾರದ ಕೆಲಸದ ಮೇಲೆ ದೆಹಲಿಗೆ ತೆರಳಿದ್ದಾರೆ. ಅದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಅವರು ತಿಳಿಸಿದರು.
ಐಎಂಎ ವಂಚನೆ ಪ್ರಕರಣದ ಬಗ್ಗೆ ಮುಖ್ಯಮಂತ್ರಿಗೆ ನಿನ್ನೆ ದಿನೇಶ್ ಗುಂಡೂರಾವ್ ಪತ್ರ ರವಾನೆ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪ್ರಕರಣದಲ್ಲಿ ಸಾರ್ವಜನಿಕರಿಗೆ ಸಾಕಷ್ಟು ಅನ್ಯಾಯವಾಗಿದೆ.
ಅನ್ಯಾಯವಾದವರಿಗೆ ನ್ಯಾಯ ಸಿಗಬೇಕು ಎಂಬುದು ನಮ್ಮ ಸದುದ್ದೇಶವಾಗಿದೆ. ಇಂತಹ ಪ್ರಕರಣಗಳು ಪುನರಾವರ್ತನೆಯಾಗದಂತೆ ಮನವಿ ಮಾಡಿದ್ದೇನೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಗೆ ಪತ್ರ ಬರೆದಿದ್ದೇನೆ ಎಂದರು.

ಜಿಂದಾಲ್ ಜಮೀನು ಪರಭಾರೆ ವಿಚಾರದ ಬಗ್ಗೆ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಹೋರಾಟದ ಎಚ್ಚರಿಕೆ ನೀಡಿದ್ದಾರೆಂಬ ಪ್ರಶ್ನೆಗೆ ಉತ್ತರಿಸಿದ ಅವರು , ಹಿಂದೆ ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರದಲ್ಲಿ
ಬಿ ಎಸ್ ಯಡಿಯೂರಪ್ಪ ಕೈಗಾರಿಕಾ ಸಚಿವರಾಗಿದ್ದರು. ಆಗ ಜಿಂದಾಲ್ ಸಂಸ್ಥೆಗೆ ಗುತ್ತಿಗೆ-ಮಾರಾಟ ಮಾಡುವ ಒಪ್ಪಂದದ ತೀರ್ಮಾನ ತೆಗೆದುಕೊಳ್ಳಲಾಗಿದೆ. ಅಂದು ಆನಂದ್ ಸಿಂಗ್ ಸಹ ಬಿಜೆಪಿ ಪಕ್ಷದಲ್ಲಿಯೇ ಇದ್ದರು. ಜಿಂದಾಲ್ ಪ್ರಕರಣ ಸಂಬಂಧ ಸಚಿವ ಸಂಪುಟ ಉಪಸಮಿತಿಯನ್ನು ರಚಿಸಲಾಗಿದೆ. ಆನಂದ್ ಸಿಂಗ್ ತಮ್ಮ ಅಭಿಪ್ರಾಯವನ್ನು ಸಂಪುಟ ಉಪಸಮಿತಿ ಮುಂದೆ ಮಂಡಿಸಲಿ. ಸಮಿತಿ ಎಲ್ಲವನ್ನೂ ಪರಿಶೀಲಿಸಿ ಸರ್ಕಾರಕ್ಕೆ ವರದಿ ನೀಡಲಿದೆ , ಇದರಿಂದ ಯಾರಿಗೂ ಅನ್ಯಾಯವಾಗುವುದಿಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದರು.

Leave a Comment