ಐಎಂಎ ಕಂಪನಿ ನಿರ್ದೇಶಕರ ವಿಚಾರಣೆ

ಬೆಂಗಳೂರು, ಜೂ. ೧೩-ಐ.ಎಂ.ಎ ಕಂಪನಿಯ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿರುವ 7 ಮಂದಿ ನಿರ್ದೇಶಕರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ಪ್ರಕರಣದ ಸಂಬಂಧ ಬಂಧಿಸಲಾಗಿದ್ದ ಕಂಪನಿಯ ನಿರ್ದೇಶಕರಾದ ನಿಜಾಮ್‌ವುದ್ದೀನ್, ನಾಸೀರ್ ಹುಸೇನ್, ನವೀದ್ ಅಹ್ಮದ್, ಹರ್ಷದ್ ಖಾನ್, ವಾಸಿಂ, ಅನ್ವರ್ ಪಾಷಾ ಹಾಗೂ ದಾದಾಪೀರ್‌ನನ್ನು ವಿಚಾರಣೆಗೊಳಪಡಿಸಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಬಂಧಿತ ಈ 7 ಮಂದಿ ನಿರ್ದೇಶಕರನ್ನು ನಿನ್ನೆ ರಾತ್ರಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಅವರನ್ನು ತಡರಾತ್ರಿಯೇ ವಶಕ್ಕೆ ತೆಗೆದುಕೊಂಡ ಡಿಐಜಿ ರವಿಕಾಂತೇಗೌಡ ನೇತೃತ್ವದ ಎಸ್‌ಐಟಿ ಅಧಿಕಾರಿಗಳು ರಹಸ್ಯ ಸ್ಥಳದಲ್ಲಿ ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಕಂಪನಿಯ ಮಾಲೀಕ ಮೊಹ್ಮದ್ ಮನ್ಸೂರ್‌ಖಾನ್ ಎಲ್ಲಿದ್ದಾನೆ? ಆತನ ಕುಟುಂಬ ಸದಸ್ಯರು ಅವನ ಜೊತೆಗಿದ್ದಾರೆಯೇ? ಆತನ ವ್ಯವಹಾರ ಎಲ್ಲೆಲ್ಲಿ ನಡೆಯುತ್ತಿತ್ತು? ಜ್ಯುವೆಲ್ಸ್ , ರಿಯಲ್ ಎಸ್ಟೇಟ್, ಕಟ್ಟಡ ನಿರ್ಮಾಣ, ಔಷಧಿ ಫಾರ್ಮ ಸೇರಿದಂತೆ ಯಾವ ಯಾವ ಕ್ಷೇತ್ರಗಳಲ್ಲಿ ಹಣ ತೊಡಗಿಸಲಾಗಿದೆ ಎಂಬುದರ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
ತನಿಖಾ ತಂಡದಲ್ಲಿರುವ ಸಿಸಿಬಿಯ ಡಿಸಿಪಿ ಗಿರೀಶ್ ಅವರ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದ್ದು, ಸಮಗ್ರ ಮಾಹಿತಿ ಪಡೆದುಕೊಳ್ಳಲಾಗುತ್ತಿದ್ದು, ವಿಚಾರಣೆಯಲ್ಲಿ ನಿರ್ದೇಶಕರುಗಳು ಕಂಪನಿಯ ಮಾಲೀಕನ ಬಗ್ಗೆ ಮಾಹಿತಿ ನೀಡಲು ಹಿಂದೆಟು ಹಾಕುತ್ತಿದ್ದಾರೆಂದು ಮೂಲಗಳು ತಿಳಿಸಿವೆ.
20 ಸಾವಿರ ದೂರು
ಈ ನಡುವೆ ಐಎಂಎ ಕಂಪನಿಯಿಂದ ವಂಚನೆಗೊಳಗಾದ 20 ಸಾವಿರಕ್ಕೂ ಹೆಚ್ಚು ಮಂದಿ ದೂರು ನೀಡಿದ್ದು, ಮೇಲ್ನೋಟಕ್ಕೆ ಸುಮಾರು 800 ಕೋಟಿಯವರೆಗೆ ವಂಚನೆ ನಡದಿದೆ. ದೂರುಗಳನ್ನು ಪಟ್ಟಿ ಮಾಡಿ ಬಂಡಲ್ ಕಟ್ಟಿ ಅವುಗಳನ್ನು ಎಸ್‌ಐಟಿಗೆ ಶಿವಾಜಿನಗರ ಪೊಲೀಸರು ಹಸ್ತಾಂತರಿಸಿದ್ದಾರೆ.
ದೂರಗಳಲ್ಲಿ ನಮೂದಿಸಿರುವ ವಂಚನೆ, ಅದಕ್ಕೆ ಲಗ್ಗತ್ತಿಸಿರುವ ದಾಖಲೆಪತ್ರಗಳು ಹಾಗೂ ಐಎಂಎ ಕಂಪನಿಯು ಅಡಮಾನವಿಟ್ಟುಕೊಂಡಿರುವ ಆಸ್ತಿಪ-ಪಾಸ್ತಿಗಳ ಪರಿಶೀಲನೆ ನಡೆಸಲಾಗುತ್ತಿದೆ. ಐಎಂಎ ಕಂಪನಿಯಿಂದ ಯಾಱ್ಯಾರಿಗೆ ಹಣ ನೀಡಲಾಗಿದೆ ಎಂಬ ಮಾಹಿತಿ ಕೂಡ ಪಡೆದುಕೊಳ್ಳಲಾಗುತ್ತಿದೆ.
ಸಿಬ್ಬಂದಿ ವಿಚಾರಣೆ
ಕಳೆದ 10 ವರ್ಷಗಳಲ್ಲಿ ಐಎಂಎ ಕಂಪನಿಯು ನಡೆಸಿರುವ ವಹಿವಾಟು ಹೂಡಿಕೆದಾರರಿಗೆ ನೀಡಿರುವ ಬಡ್ಡಿ, ಕಂಪನಿಯಲ್ಲಿರುವ ಸುಮಾರು 488 ಕೋಟಿ ಚಿರಾಸ್ಥಿ, ಟನ್ ಗಟ್ಟಲೆ ಬಂಗಾರದ ಮಾಹಿತಿಯೂ ಪಡೆದುಕೊಳ್ಳಲಾಗುತ್ತಿದೆ.
ಕಂಪನಿಯ ಜ್ಯುವೆಲ್ಸ್, ರಿಯಲ್ ಎಸ್ಟೇಟ್ ಹಾಗೂ ಔಷಧಿ ಫಾರ್ಮಾಗಳನ್ನು ನೋಡಿಕೊಳ್ಳುತ್ತಿದ್ದ ಪ್ರಮುಖ ಸಿಬ್ಬಂದಿಯ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
ಐಟಿ ತನಿಖೆ ಶುರು
ಐಎಂಎ ಕಂಪನಿಯಲ್ಲಿ ಸುಮಾರು 800 ಕೋಟಿಗೂ ಹೆಚ್ಚು ವಂಚನೆಯಾಗಿರುವುದು ದೂರುಗಳಿಂದ ಕಂಡು ಬಂದ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಹಾಗೂ ಜಾರಿನಿರ್ದೇಶನಾಲಯ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ಕಂಪನಿಯಿಂದ ನಡೆದಿರುವ ಹಣಕಾಸು ವ್ಯವಹಾರದ ಮಾಹಿತಿಯನ್ನು ಪಡೆದುಕೊಳ್ಳುತ್ತಿರುವ ಅಧಿಕಾರಿಗಳು ಅವುಗಳ ಪರಿಶೀಲನೆ ನಡೆಸಿದ್ದು, ಆದಾಯ ತೆರಿಗೆ ವಂಚಿಸುವ ಬಗ್ಗೆಯೂ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಮುಂದುವರೆದ ದೂರು
ಶಿವಾಜಿನಗರದ ಎಸ್‌ಎನ್ ಕನ್ವೇನ್ಷನ್ ಹಾಲ್‌ನ ತಾತ್ಕಾಲಿಕ ದೂರು ಸ್ವೀಕಾರ ಕೇಂದ್ರದಲ್ಲಿ ಇಂದೂ ಸಹ ವಂಚನೆಗೊಳಗಾದವರು ದೂರು ನೀಡಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಎಸ್‌ಐಟಿ ರಚನೆಯಾಗಿರುವುದರಿಂದ ಅಲ್ಲಿಗೆ ದೂರು ನೀಡಬೇಕೇ? ಇಲ್ಲವೇ ಪೊಲೀಸ್ ಠಾಣೆಯಲ್ಲಿಯೇ ದೂರು ನೀ‌‌ಡಬೇಕೇ ಎನ್ನುವ ಗೊಂದಲ ಬೇಡ, ಯಾವ ಠಾಣೆಯಲ್ಲಿ ಬೇಕಾದರೂ ವಂಚನೆಗೊಳಗಾದವರು ದೂರು ನೀಡಿದರೆ ಅವುಗಳನ್ನು ಎಸ್‌ಐಟಿಗೆ ವರ್ಗಾಯಿಸಲಾಗುವುದೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

* ಐಎಂಎ ವಂಚನೆ 20 ಸಾವಿರಕ್ಕೂ ಹೆಚ್ಚು ದೂರು.
* ಐಎಂಎ ನಿರ್ದೇಶಕರ ತೀವ್ರ ವಿಚಾರಣೆ.
* ಎಸ್‌ಐಟಿಯಿಂದ ತೀವ್ರಗೊಂಡ ತನಿಖೆ.
* ವಂಚನೆಯ ದೂರುಗಳು ಎಸ್‌ಐಟಿಗೆ ವರ್ಗಾವಣೆ.
* ಸುಮಾರು 800 ಕೋಟಿ ರೂ. ವಂಚನೆ ಪತ್ತೆ.

Leave a Comment