ಏಸು ಪ್ರತಿಮೆ ನಿರ್ಮಾಣ: ಫೆ. 25 ಡಿಸಿ  ಕಚೇರಿ ಮುತ್ತಿಗೆ

ರಾಮನಗರ,ಫೆ.14: ಕನಕಪುರದ ಹಾರೋಬೆಲೆಯ ಕಪಾಲ ಬೆಟ್ಟದಲ್ಲಿ ಜಗತ್ತಿನ ಎತ್ತರದ ಏಸು ಪ್ರತಿಮೆ ನಿರ್ಮಾಣ ವಿರೋಧಿ ಹೋರಾಟ ಮತ್ತೆ ಚುರುಕಾಗಿದೆ. ಏಸು ಪ್ರತಿಮೆ ನಿರ್ಮಾಣ ತಡೆಗಟ್ಟುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದು ಆರೋಪಿಸಿ ಹಿಂದೂ ಜಾಗರಣಾ ವೇದಿಕೆ ಇದೇ ತಿಂಗಳ 25 ರಂದು ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಕಲು ನಿರ್ಧರಿಸಿದೆ.

ರಾಮನಗರದ ಪ್ರವಾಸಿ ಮಂದಿರದಲ್ಲಿ ಹಿಂದೂ ಜಾಗರಣಾ ವೇದಿಕೆ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಿಂದೂ ಜಾಗರಣ ವೇದಿಕೆ ಜಿಲ್ಲಾಧ್ಯಕ್ಷ ಗಜೇಂದ್ರ ಸಿಂಗ್, ಇದೇ ತಿಂಗಳ 25 ರಂದು ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹೋರಾಟ ಹಮ್ಮಿಕೊಂಡಿರುವುದಾಗಿ ತಿಳಿಸಿದರು.

“ಈಗಾಗಲೇ ಮುನೇಶ್ವರ ಬೆಟ್ಟ ಉಳಿಸಿ ಎಂದು ಕನಕಪುರ ಚಲೋ ಕಾರ್ಯಕ್ರಮದ ಮೂಲಕ ಮುನೇಶ್ವರ ಬೆಟ್ಟದಲ್ಲಿ ನಿರ್ಮಾಣಗೊಂಡಿರುವ ಅಕ್ರಮ ಕಟ್ಟಡ, ಏಸು ಪ್ರತಿಮೆ ನಿರ್ಮಾಣಕ್ಕೆ ಸಂಗ್ರಹಿಸಿರುವ ಕಲ್ಲು ಮತ್ತು ಇತರೆ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಬೇಕು” ಎಂದು ಆಗ್ರಹಿಸಿದರು.

ಸರ್ಕಾರದಿಂದ ಮಂಜೂರಾಗಿರುವ ಜಮೀನನ್ನು ವಾಪಸ್ಸು ಪಡೆಯಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ, ಜಿಲ್ಲಾಧಿಕಾರಿಗಳು ಏಸು ಪ್ರತಿಮೆ ನಿರ್ಮಾಣದ ವಿರುದ್ಧ ಕ್ರಮ ಕೈಗೊಳ್ಳಲು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ಇನ್ನು ಜನವರಿಯಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಹಾಗೂ ರಾಜ್ಯಪಾಲರಿಗೆ ಏಸು ಪ್ರತಿಮೆ ನಿರ್ಮಾಣ ತಡೆಗಟ್ಟುವಂತೆ ಜನವರಿ 25 ರವರೆಗೆ ಗಡುವು ನೀಡಲಾಗಿತ್ತು.

ಆದರೆ ಇಲ್ಲಿಯವರೆಗೆ ಸರ್ಕಾರ ಹಾಗೂ ಜಿಲ್ಲಾಡಳಿತದ ವಿಳಂಬ ನೀತಿ ಅನುಸರಿಸುತ್ತಿರುವ ಹಿನ್ನೆಲೆಯಲ್ಲಿ ಕೋಲಾರದಲ್ಲಿ ನಡೆದ ಹಿಂದೂ ಜಾಗರಣಾ ವೇದಿಕೆಯ ತ್ರೈವಾರ್ಷಿಕ ಸಮ್ಮೇಳನದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವ ನಿರ್ಣಯ ಕೈಗೊಂಡಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಸುರೇಶ್ ತಿಳಿಸಿದರು.

 

Leave a Comment