ಏಷ್ಯನ್ ಶೂಟಿಂಗ್ ಚಾಂಪಿಯನ್‌ಶಿಪ್: ಸೌರಭ್ ಚೌಧರಿಗೆ ಬೆಳ್ಳಿ

ದೋಹಾ, ನ 11 – ಇಲ್ಲಿ ನಡೆಯುತ್ತಿರುವ 14ನೇ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ತರುಣ ಸೌರಭ್ ಚೌಧರಿ ಅವರು 10ಮೀ ಏರ್ ಪಿಸ್ತೂಲ್ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.

ವಿಶ್ವಕಪ್ ಹಾಗೂ ಏಷ್ಯನ್ ಕ್ರೀಡಾಕೂಟದ ಚಿನ್ನದ ಪದಕ ವಿಜೇತ 17ರ ಪ್ರಾಯದ ಸೌರಭ್, ಪ್ರಶಸ್ತಿ ಸುತ್ತಿನಲ್ಲಿ 244.5 ಅಂಕ ಪಡೆಯುವ ಮೂಲಕ ಎರಡನೇ ಸ್ಥಾನ ಪಡೆದರು. ಭಾರತದ ಶೂಟರ್‌ಗಿಂತ ಅತ್ಯುತ್ತಮ ಪ್ರದರ್ಶನ ತೋರಿದ ಉತ್ತರ ಕೊರಿಯಾದ ಕಿಮ್ ಸಾಂಗ್ ಗುಕ್ ಅವರು 246.5 ಅಂಕಗಳೊಂದಿಗೆ ಚಿನ್ನದ ಪದಕ ಮುಡಿಗೇರಿಸಿಕೊಂಡರು.

ಇರಾನ್‌ನ ಫೊರುಗುಯಿ ಜಾವೇದ್ 221.8 ಅಂಕಗಳನ್ನು ಪಡೆಯುವ ಮೂಲಕ ಕಂಚಿನ ಪದಕಕ್ಕೆೆ ತೃಪ್ತಿಪಟ್ಟರು. 583 ಅಂಕಗಳೊಂದಿಗೆ ಸೌರಭ್ ಚೌಧರಿ ಹಾಗೂ ಅಭಿಷೇಕ್ ವರ್ಮಾ ಅವರು ಅಂತಿಮ ಸುತ್ತಿಗೆ ಕ್ರಮವಾಗಿ ಏಳನೇ ಹಾಗೂ ಆರನೇ ಸ್ಥಾನಗಳೊಂದಿಗೆ ಅರ್ಹತೆ ಪಡೆದಿದ್ದರು. ಅಭಿಷೇಕ್ ವರ್ಮಾ ಅವರು ಅಂತಿಮ ಸುತ್ತಿನಲ್ಲಿ 181.5 ಅಂಕಗಳೊಂದಿಗೆ ಐದನೇ ಸ್ಥಾನಕ್ಕೆೆ ತೃಪ್ತಿಪಟ್ಟುಕೊಂಡಿದ್ದರು.

ಚೌಧರಿ ಹಾಗೂ ವರ್ಮಾ ಇಬ್ಬರೂ ಈಗಾಗಲೇ ಟೋಕಿಯೊ ಒಲಿಂಪಿಕ್ಸ್‌‌ಗೆ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಏರ್ ಪಿಸ್ತೂಲ್ ವಿಭಾಗದಲ್ಲಿ ಇರಾನ್, ಉತ್ತರ ಕೊರಿಯಾ ಹಾಗೂ ಪಾಕಿಸ್ತಾನ ಒಲಿಂಪಿಕ್ಸ್‌ ಅರ್ಹತೆ ಪಡೆಯುವಲ್ಲಿ ಸಫಲವಾಗಿದೆ. ಭಾರತ ಹಾಗೂ ಚೀನಾ ಈಗಾಗಲೇ ಗರಿಷ್ಠ ಎರಡು ಸ್ಥಾನಗಳನ್ನು ಪಡೆದುಕೊಂಡಿವೆ.

Leave a Comment