ಏಷ್ಯನ್ ಗೇಮ್ಸ್- ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ ಸೌರಭ್ ಅಭಿಷೇಕ್‌ಗೆ ಕಂಚು

ಜಕಾರ್ತ, ಆ ೨೧- ಏಷ್ಯನ್ ಗೇಮ್ಸ್‌ನಲ್ಲಿ ಏರ್ ಪಿಸ್ತೂಲ್ ವಿಭಾಗದಲ್ಲಿ ಪದಕದ ಬೇಟೆ ಮುಂದುವರೆದಿದೆ. ಇಂದು ನಡೆದ ಏರ್ ಪಿಸ್ತೂಲ್ ವಿಭಾಗದಲ್ಲಿ ರೈತನ ಪುತ್ರನಾದ ಭಾರತದ ೧೬ರ ಹರೆಯದ ಶೂಟರ್ ಸೌರಭ್ ಚೌಧರಿ ಚಿನ್ನ ಗೆಲುವು ಸಾಧಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಇದರ ಜತೆಗೆ ಇದೇ ವಿಭಾಗದಲ್ಲಿ ಅಭಿಷೇಕ್ ವರ್ಮಾ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದಾರೆ.

ಪುರುಷರ ೧೦ ಮೀಟರ್ ಏರ್ ಪಿಸ್ತೂಲ್ ಫೈನಲ್’ನಲ್ಲಿ ಸೌರಭ್ ಚೌಧರಿ ಚಿನ್ನದ ಗೆಲ್ಲುವುದರೊಂದಿಗೆ ದೇಶದ ಕೀರ್ತಿ ಹೆಚ್ಚಿಸಿದಲ್ಲದೇ, ಜಪಾನಿನ ಅನುಭವಿ ಶೂಟರ್ ಟೋಮೋಯೂಕಿ ಅವರನ್ನು ಹಿಂದಿಕ್ಕಿ ಚಿನ್ನ ಗೆಲ್ಲುವಲ್ಲಿ ಭಾರತದ ಕ್ರೀಡಾಪಟು ಯಶಸ್ವಿಯಾಗಿದ್ದಾರೆ. ಇನ್ನು ಇದೇ ಪಂದ್ಯದಲ್ಲಿ ಶೂಟಿಂಗ್‌ನ ಆರಂಭದ ಹಂತಗಳಲ್ಲಿ ಹಿನ್ನಡೆ ಸಾಧಿಸಿದ್ದ ೨೯ ವರ್ಷದ ಅಭಿಷೇಕ್ ವರ್ಮಾ ಕಡೆಗೂ ಕೊರಿಯಾ ಸ್ಪರ್ಧಿಯನ್ನು ಹಿಂದಿಕ್ಕಿ ಕಂಚಿನ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇಂಡೋನೇಷಿಯಾದಲ್ಲಿ ನಡೆಯುತ್ತಿರುವ ೧೮ನೇ ಏಷ್ಯನ್ ಗೇಮ್ಸ್‌ನ ೧೦ ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ೨೪೦.೭ ಸ್ಕೋರ್ ಗಳಿಸುವ ಮೂಲಕ ಸೌರಭ್ ಚೌಧರಿ ಚಿನ್ನಕ್ಕೆ ಕೊರಳಿಡ್ಡಿದ್ದರು. ಜಪಾನಿನ ಟೋಮೋಯುಕಿ ಮಸ್ತಾದಾ ಅವರು ೨೩೯.೭ ಸ್ಕೋರ್ ಗಳಿಸುವ ಮೂಲಕ ಎರಡನೇ ಸ್ಥಾನ ಗಳಿಸಿ ಬೆಳ್ಳಿ ಪದಕ ಗಳಿಸಿದ್ದಾರೆ. ಅದೇ ವಿಭಾಗದಲ್ಲಿ ಸ್ಪರ್ಧೆಯಲ್ಲಿ ಅಭಿಷೇಕ್ ವರ್ಮಾ ಅವರು ೨೧೯.೩ ಸ್ಕೋರ್ ಗಳಿಸಿ ಕಂಚು ಪದಕ ಪಡೆದಿದ್ದಾರೆ. ಇದರೊಂದಿಗೆ ಭಾರತ ಈ ವರೆಗೆ ಮೂರು ಚಿನ್ನ ಪಡೆದಿದ್ದು, ೨ ಬೆಳ್ಳಿ ಹಾಗೂ ೩ ಕಂಚು ಪದಕ ಗೆದ್ದಿದೆ.

ರೈತನ ಪುತ್ರನ ಸಾಧನೆ
ಮೀರತ್‌ನ ಕಾಲಿನಾ ಗ್ರಾಮ ಮೂಲದ ರೈತನೊರ್ವ ಪುತ್ರನಾದ ಸೌರಭ್ ಚೌಧರಿ ಅವರು ಇದೇ ಮೊದಲ ಬಾರಿಗೆ ಪುರಷರ ಹಿರಿಯರ ವಿಭಾಗದ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಸ್ಪರ್ಧಿಸಿ ಚಿನ್ನ ಗೆದ್ದು ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಕೆಲ ತಿಂಗಳ ಹಿಂದೆ ಜರ್ಮನಿಯಲ್ಲಿ ನಡೆದಿದ್ದ ಕಿರಿಯರ ವಿಶ್ವಕಪ್‌ನಲ್ಲಿ ಚಿನ್ನ ಗೆದ್ದು ಬಿಗಿದ್ದರು. ಸದ್ಯ ೧೧ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಸೌರಭ್ ವಿಶ್ವ ಚಾಂಪಿಯನ್‌ಗಾಗಿ ಮೊಟುಕುಗೊಳಿಸಿ ಕಠಿಣ ಅಭ್ಯಾಸ ನಡೆಸಿದ್ದರು.

ಮೀರತ್‌ನಿಂದ ೫೩ ಕಿಮೀ ದೂರದಲ್ಲಿರುವ ಬಾಗ್‌ಪಾತ್‌ನ ಬಿನೋಲಿಯಲ್ಲಿರುವ ಅಮಿತ್ ಶೋರೋನ್ ಅಕಾಡಮಿಯಲ್ಲಿ ಸೌರಬ್ ಏರ್ ಪಿಸ್ತೂಲ್‌ನ ಟ್ರಿಕ್ಸ್‌ಗಳನ್ನು ಕರಗತ ಮಾಡಿಕೊಂಡಿದ್ದರು. ಇಂದಿನ ಗೆಲುವಿಗೆ ಬಗ್ಗೆ ಅತೀವ ಸಂತಸ ವ್ಯಕ್ತಪಡಿಸಿರುವ ಸೌರಭ್ ಅವರು ನಾನು ಸಮಯಸಿಕ್ಕಾಗ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಇಚ್ಚಿಸುತ್ತೇನೆ. ಆದರೆ ಹೆಚ್ಚಾಗಿ ತರಬೇತಿಯಲ್ಲಿ ನಿರತನಾಗಿರುತ್ತೇನೆ. ನನ್ನ ಹಳ್ಳಿಗೆ ಹೋದಾಗ ತಂದೆಗೆ ನೆರವಾಗುತ್ತೇನೆ ಎಂದು ಹೇಳಿದ್ದಾರೆ.

ಶ್ಲಾಘನೆ
ಚಿನ್ನ ಗೆದ್ದ ಸೌರಭ್ ಸಾಧನೆಯನ್ನು ಕ್ರೀಡಾಪಟು ಅಭಿನವ್ ಬಿಂದ್ರಾ ವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಅಲ್ಲದೇ ಎಲ್ಲೆಡೆ ಸೌರಭ್‌ಗೆ ಅಭಿನಂದನೆಯ ಮಹಾಪೂರವೇ ಹರಿದು ಬಂದಿದೆ.

Leave a Comment