ಏಷ್ಯನ್ ಗೇಮ್ಸ್‌ನಲ್ಲಿ ಸೈನಾಗೆ ಕಂಚು

ಜಕಾರ್ತ, ಆ.೨೭-ಇಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಅಗ್ರಮಾನ್ಯ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹವಾಲ್ ಕಂಚಿನ ಪದಕಗಳಿಸಿ ನಿರಾಸೆ ಮೂಡಿಸಿದ್ದಾರೆ. ಆದರೆ ಏಷ್ಯನ್ ಗೇಮ್ಸ್‌ನಲ್ಲಿ ವೈಯಕ್ತಿಕ ವಿಭಾಗದಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಬ್ಯಾಡ್ಮಿಂಟನ್ ಆಟಗಾರ್ತಿ ಪ್ರಶಸ್ತಿಗಳಿಸಿರುವುದು ವಿಶೇಷವೆನಿಸಿದೆ.
ಇಂದು ನಡೆದ ಸೆಮಿಫೈನಲ್ ಪಂದ್ಯದಲ್ಲಿ ವಿಶ್ವದ ನಂರ್ ಒನ್ ಆಟಗಾರ್ತಿ ಚೈನೀಸ್ ತೈಪೆಯ ತಾಯ್ ಟಜು ಯಿಂಗ್ ಎದುರು ಸೈನಾ ನೆಹ್ವಾಲ್ ೧೭-೨೧, ೧೪-೨೧ ನೇರ ಸೆಟ್ ಗಳಿಂದ ಪರಾಭವಗೊಂಡರು. ಕೇವಲ ೩೬ ನಿಮಿಷಗಳ ಕಾಲ ನಡೆದ ಆಟದಲ್ಲಿ ತಾಯ್ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದರು.
ಈ ಮೂಲಕ ಚಿನ್ನ ಗೆಲುವು ಕನಸು ಕಾಣುತ್ತಿದ್ದ ಸೈನಾ ನೆಹ್ವಾಲ್ ಕಂಚಿನ ಪದಕಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ೧೯೮೨ರಲ್ಲಿ ಏಷ್ಯನ್ ಗೇಮ್ಸ್‌ನಲ್ಲಿ ಸೈಯ್ಯದ್ ಮೋದಿ ಕಂಚಿನ ಪದಕ ಗೆದ್ದುಕೊಂಡಿದ್ದರು. ಇದಾದ ನಂತರ ಈಗ ಸೈನಾ ಬ್ಯಾಡ್ಮಿಂಟನ್‌ನಲ್ಲಿ ಕಂಚಿನ ಪದಕ ಗೆಲ್ಲುವಲ್ಲಿ ಸಫಲರಾಗಿದ್ದಾರೆ.
ಆರಂಭದಲ್ಲಿ ಉಭಯ ಆಟಗಾರರ ನಡುವೆ ಭಾರೀ ಪೈಪೋಟಿ ಕಂಡುಬಂದಿತ್ತು. ಆದರೆ ತಾಯ್ ಬ್ಯಾಕ್ ಹ್ಯಾಂಡ್‌ನಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ್ದು ಸೈನಾ ಸೋಲಿಗೆ ಪ್ರಮುಖ ಕಾರಣವಾಯಿತು. ಆದರೆ ಸೈನಾ ತಿರುಗೇಟು ನೀಡಿ ಅಂಕವನ್ನು ೮-೮ ಸಮನಾಗಿಸಿಕೊಂಡರು. ತೈಪೆ ಶಟಲರ್ ನಾಲ್ಕು ನೇರ ಅಂಕಗಳನ್ನು ಗಳಿಸುವ ಮೂಲಕ ೧೫-೧೦ರಿಂದ ಮುನ್ನಡೆ ಸಾಧಿಸಿದ್ದು ಆಟದ ವೈಶಿಷ್ಟ್ಯವಾಗಿತ್ತು.
೨೦೧೮ರ ಋತುವಿನಲ್ಲಿ ಮೂರು ಪಂದ್ಯಗಳು ಸೇರಿದಂತೆ ಒಟ್ಟು ೯ ಪಂದ್ಯಗಳಲ್ಲಿ ತಾಯ್ ಎದುರು ಸೈನಾ ಸೋಲು ಅನುಭವಿಸಿದ್ದಾರೆ.

Leave a Comment