ಏಷ್ಯನ್ ಅಥ್ಲೆಟಿಕ್ಸ್ ಆಯೋಗದ ಸದಸ್ಯೆಯಾಗಿ ಪಿ.ಟಿ ಉಷಾ ನೇಮಕ

ನವದೆಹಲಿ, ಆ ೧೪- ಏಷ್ಯಾ ಮಟ್ಟದಲ್ಲಿ ಅತ್ಯುತ್ತಮ ಸಾಧನೆಗೈದ ಭಾರತದ ಮಾಜಿ ಓಟಗಾರ್ತಿ ಪಿ.ಟಿ ಉಷಾ ಅವರನ್ನು ಏಷ್ಯನ್ ಅಥ್ಲೆಟಿಕ್ಸ್ ಒಕ್ಕೂಟದ ಅಥ್ಲೆಟಿಕ್ಸ್ ಆಯೋಗದ ಸದಸ್ಯೆಯಾಗಿ ನೇಮಕ ಮಾಡಲಾಗಿದೆ.

೫೫ರ ಪ್ರಾಯದ ಪಿ.ಟಿ ಉಷಾ ಅವರು ಒಂದು ಕಾಲದಲ್ಲಿ ಏಷ್ಯಾದಲ್ಲೇ ಅತ್ಯುತ್ತಮ ಅಗ್ರ ಓಟಗಾರ್ತಿಯಾಗಿದ್ದರು. ಏಷ್ಯನ್ ಅಥ್ಲೆಟಿಕ್ಸ್ ಅಸೋಸಿಯೇಷನ್ ಅಥ್ಲೆಟಿಕ್ಸ್ ಆಯೋಗಕ್ಕೆ ಆರು ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಗಿದ್ದು, ೧೯೯೨ರ ಒಲಿಂಪಿಕ್ಸ್‌ನ ಹ್ಯಾಮರ್ ಥ್ರೋ ವಿಭಾಗದಲ್ಲಿ ಚಿನ್ನದ ಪದಕ ವಿಜೇತೆ ಉಜ್ಬೇಕಿಸ್ತಾನದ ಅಬ್ದುವಾಲಿಯೆವ್ ಈ ಸಮಿತಿಗೆ ಮುಖ್ಯಸ್ಥರಾಗಿ ಆಯ್ಕೆ ಮಾಡಲಾಗಿದೆ.

ದೇಶದ ಪರ ಅಥ್ಲೆಟಿಕ್ಸ್ ಆಯೋಗ ಸದಸ್ಯೆಯಾಗಿ ಆಯ್ಕೆಯಾಗಿರುವುದಕ್ಕೆ ಹೆಮ್ಮ ಪಡುತ್ತೇನೆ ಎಂದು ಪಿ.ಟಿ ಉಷಾ ಸಂತಸ ಹಂಚಿಕೊಂಡಿದ್ದಾರೆ. ಚೀನಾದ ವಾಂಗ್ ಯು, ೨೦೧೨ರ ಒಲಿಂಪಿಕ್ಸ್‌ನ ಟ್ರಿಬಲ್ ಜಂಪ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದ ಕಜಕೀಸ್ತಾನದ ಓಲ್ಗಾ ರೇಪ್ಕೋವಾ, ಮಲೇಷ್ಯಾದ ಹುಪ್ ವೀ ಹಾಗೂ ಸೌದಿ ಅರೇಬಿಯಾದ ಸಾಡ್ ಶದ್ದಾಬ್ ಅವರು ಇನ್ನುಳಿದ ನಾಲ್ವರು ಸದಸ್ಯರಾಗಿದ್ದಾರೆ. ಎಎಎಗೆ ನೂತನ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿರುವ ಎ. ಶುಗ್ಗುಮರನ್ ಅವರು ಅಥ್ಲೆಟಿಕ್ಸ್ ಆಯೋಗ ಸದಸ್ಯರಾಗಿ ಆಯ್ಕೆಯಾಗಿರುವುದಕ್ಕೆ ಪಿ.ಟಿ ಉಷಾ ಅವರಿಗೆ ಶುಭಕೋರಿದ್ದಾರೆ.

Leave a Comment