ಏಪ್ರಿಲ್‌ನಲ್ಲಿ ಲೋಕಾ ಚುನಾವಣೆ : ಕರ್ನಾಟಕದಲ್ಲಿ ಒಂದೇ ಹಂತದ ಮತದಾನ, ಒಟ್ಟಾರೆ 7 ರಿಂದ 8 ಹಂತ ಸಾಧ್ಯತೆ

ನವದೆಹಲಿ, ಮಾ. ೧೦- ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಮುಂಬರುವ ಲೋಕಸಭಾ ಚುನಾವಣೆಗೆ, ಚುನಾವಣಾ ಆಯೋಗ ಇಂದು ಸಂಜೆ ವೇಳಾಪಟ್ಟಿಯನ್ನು ಪ್ರಕಟಿಸಲಿದ್ದು, ಏಪ್ರಿಲ್-ಮೇ ತಿಂಗಳ ಅವಧಿಯಲ್ಲಿ 7 ರಿಂದ 8 ಹಂತಗಳಲ್ಲಿ ಮತದಾನ ನಡೆಯುವ ಸಾಧ್ಯತೆ ಇದೆ. ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯುವ ಸ್ಪಷ್ಟ ಸೂಚನೆಗಳಿವೆ ಎಂದೂ ಮೂಲಗಳು ತಿಳಿಸಿವೆ.

  • ಲೋಕಸಭಾ ಚುನಾವಣೆಗೆ ಸಂಜೆ ವೇಳಾಪಟ್ಟಿ ಪ್ರಕಟ ಸಾಧ್ಯತೆ.
  •  ಕರ್ನಾಟಕದಲ್ಲಿ ಒಂದೇ ಹಂತದ ಮತದಾನ.
  •  ದೆಹಲಿಯಲ್ಲಿ ಚುನಾವಣಾ ಆಯೋಗದ ಪತ್ರಿಕಾಗೋಷ್ಠಿ.
  •  ಏಪ್ರಿಲ್-ಮೇ ತಿಂಗಳಲ್ಲಿ ಚುನಾವಣಾ ಸಾಧ್ಯತೆ.
  •  7 ರಿಂದ 8 ಹಂತಗಳಲ್ಲಿ ಮತದಾನ.
  •  ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಅವರಿಂದ ಚುನಾವಣಾ ದಿನಾಂಕ ಘೋಷಣೆ.
  •  ಆಂಧ್ರಪ್ರದೇಶ, ಅರುಣಾಚಲ, ಸಿಕ್ಕಿಂ ಮತ್ತು ಒಡಿಶಾ ರಾಜ್ಯ ವಿಧಾನಸಭೆಗಳಿಗೂ ಚುನಾವಣಾ ದಿನಾಂಕ ಘೋಷಣೆ ಸಾಧ್ಯತೆ.

ದೆಹಲಿಯ ವಿಜ್ಞಾನ ಭವನದಲ್ಲಿ ಸಂಜೆ 5 ಗಂಟೆಗೆ ನಡೆಯಲಿರುವ ಪತ್ರಿಕಾಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಅವರು ಲೋಕಸಭಾ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಲಿದ್ದಾರೆ. ಚುನಾವಣಾ ವೇಳಾಪಟ್ಟಿ ಪ್ರಕಟಗೊಳ್ಳುತ್ತಿದ್ದಂತೆ ಮಾದರಿ ನೀತಿ ಸಂಹಿತೆ ಜಾರಿಗೆ ಬರಲಿದೆ.

ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ನಡೆಯಬಹುದಾದ ಮೊದಲ ಹಂತದ ಮತದಾನಕ್ಕೆ ಈ ತಿಂಗಳಾಂತ್ಯಕ್ಕೆ ಅಧಿಸೂಚನೆ ಹೊರ ಬೀಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಪ್ರಸ್ತುತ ಲೋಕಸಭೆಯ ಅವಧಿ ಜೂ. 3ಕ್ಕೆ ಅಂತ್ಯಗೊಳ್ಳಲಿದೆ.

ಲೋಕಸಭಾ ಚುನಾವಣೆ ಜತೆಗೆ ಆಂಧ್ರಪ್ರದೇಶ, ಒಡಿಶಾ, ಸಿಕ್ಕಿ ಹಾಗೂ ಅರುಣಾಚಲ ಪ್ರದೇಶ ವಿಧಾನಸಭೆಗಳಿಗೂ ಚುನಾವಣಾ ದಿನಾಂಕಗಳನ್ನು ಆಯೋಗ ಘೋಷಿಸುವ ಸಾಧ್ಯತೆ ಇದೆ. ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯನ್ನು ವಿಸರ್ಜಿಸಲಾಗಿದ್ದು, ಮೇ ತಿಂಗಳ ಅಂತ್ಯದೊಳಗೆ ಈ ರಾಜ್ಯದ ವಿಧಾನಸಭೆಗೂ ಹೊಸದಾಗಿ ಚುನಾವಣೆಗಳನ್ನು ನಡೆಸಬೇಕಾಗಿದೆ.

ಲೋಕಸಭಾ ಚುನಾವಣೆ ಜತೆ ಜತೆಯಲ್ಲೇ ಜಮ್ಮು ಮತ್ತು ಕಾಶ್ಮೀರದ ವಿಧಾನಸಭಾ ಚುನಾವಣೆಗಳನ್ನು ನಡೆಸಬೇಕೆಂಬ ಒತ್ತಾಯ ವ್ಯಾಪಕವಾಗಿ ಕೇಳಿ ಬರುತ್ತಿದೆ. ಆದರೆ, ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿನ ಉದ್ವಿಗ್ನ ವಾತಾವರಣದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಕೈಗೊಳ್ಳುವ ತೀರ್ಮಾನವೇ ಅಂತಿಮವಾಗಲಿದೆ. ಈ ವಾರದ ಆರಂಭದಲ್ಲಿ ಚುನಾವಣಾ ಆಯೋಗ ಕರೆದಿದ್ದ ಸಭೆಯಲ್ಲಿ ಪಾಲ್ಗೊಂಡಿದ್ದ ರಾಜ್ಯದ ಎಲ್ಲ ರಾಜಕೀಯ ಪಕ್ಷಗಳು ಲೋಕಸಭೆ ಜತೆಗೆ ರಾಜ್ಯ ವಿಧಾನಸಭೆ ಚುನಾವಣೆಗಳನ್ನು ನಡೆಸಬೇಕೆಂಬ ಬಗ್ಗೆ ಒಲವು ತೋರಿವೆ.

ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ಎಂಬ ಖ್ಯಾತಿಗೆ ಭಾಜನವಾಗಿರುವ 543 ಲೋಕಸಭಾ ಸ್ಥಾನಗಳಿಗೆ ವೇಳಾಪಟ್ಟಿಯನ್ನು ಆಯೋಗ ಸಂಜೆ ಪ್ರಕಟಿಸಲಿದೆ ಎಂಬ ಸುದ್ದಿ ವ್ಯಾಪಕವಾಗಿ ಹಬ್ಬಿದ್ದು, .ಎಲ್ಲರ ಚಿತ್ತ ಆಯೋಗದತ್ತ ನೆಟ್ಟಿದೆ.

ಸಾರ್ವತ್ರಿಕ ಚುನಾವಣೆಗೆ ದೇಶಾದ್ಯಂತ ಸುಮಾರು 10 ಲಕ್ಷ ಮತಗಟ್ಟೆಗಳನ್ನು ತೆರೆಯಲು ಆಯೋಗ ಸಿದ್ಧತೆ ಮಾಡಿಕೊಂಡಿದೆ. ಸುಮಾರು 90 ಕೋಟಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸುವ ಅರ್ಹತೆಯನ್ನು ಹೊಂದಿದ್ದಾರೆ. ಪ್ರಸ್ತುತ ಲೋಕಸಭೆಯ ಅವಧಿ ಜೂ. 3ಕ್ಕೆ ಮುಕ್ತಾಯಗೊಳ್ಳಲಿದ್ದು, ಅದಕ್ಕೆ ಮೊದಲೇ ಲೋಕಸಭೆಗೆ ಚುನಾವಣೆ ನಡೆದು ಹೊಸ ಲೋಕಸಭೆ ಅಸ್ತಿತ್ವಕ್ಕೆ ಬರಬೇಕಾಗಿದೆ.

2014ರಲ್ಲಿ ಲೋಕಸಭೆಗೆ ಏ. 7 ರಿಂದ ಮೇ 12ರ ನಡುವೆ 9 ದಿನಗಳ ಕಾಲ ಮತದಾನ ನಡೆದಿತ್ತು. ಮೇ 16ರಂದು ಮತ ಎಣಿಕೆ ನಡೆದಿತ್ತು. ಚುನಾವಣೆಯ ಒಟ್ಟಾರೆ ಪ್ರಕ್ರಿಯೆ 72 ದಿನಗಳಲ್ಲಿ ಪೂರ್ಣಗೊಂಡಿತ್ತು.
ಮೋದಿ ಅಲೆಯಲ್ಲಿ ಬಿಜೆಪಿ ತನ್ನ ಸ್ವಂತ ಬಲದ ಮೇಲೆ ಸ್ಪಷ್ಟ ಬಹುಮತ ಗಳಿಸಿತ್ತು. 1984ರ ಸಾರ್ವತ್ರಿಕ ಚುನಾವಣೆಗಳ ನಂತರ ಮೊದಲ ಬಾರಿಗೆ ಬಿಜೆಪಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿ ಸ್ಪಷ್ಟ ಬಹುಮತ ಗಳಿಸಿತ್ತು.

ಬಿಜೆಪಿ ನೇತೃತ್ವದ ಎನ್‌ಡಿಎ, 336 ಸ್ಥಾನಗಳಲ್ಲಿ ಜಯಗಳಿಸಿತ್ತು. ಬಿಜೆಪಿ 282 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು, ಕಾಂಗ್ರೆಸ್ ಕೇವಲ 44 ಸ್ಥಾನಗಳಲ್ಲಿ ಜಯಗಳಿಸಿತ್ತು,

Leave a Comment